ಹಿರಿಯೂರು: ಇದೇ ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಹಿರಿಯೂರು ಚುನಾವಣಾ ಅಧಿಕಾರಿಗಳು ಹಿರಿಯೂರು ನಗರದ ಶತಾಯುಷಿಗಳಾದ ತಿಪ್ಪಿರಮ್ಮ (108) ಹಾಗೂ ಗುರುತಿಸಿದ್ದಮ್ಮ (102) ಎಂಬುವವರನ್ನು ಗುರುತಿಸಿ ಗೌರವಿಸಿದರು.
ನಗರದ ವೇದಾವತಿ ಬಡಾವಣೆಯಲ್ಲಿರುವ ತಿಪ್ಪಿರಮ್ಮ ಹಾಗೂ ಸಿದ್ದನಾಯಕ ವೃತ್ತದ ಬಳಿ ಇರುವ ಗುರುಸಿದ್ದಮ್ಮ ಅಜ್ಜಿಯ ಮನೆಗೆ ತೆರಳಿ ಅಧಿಕಾರಿಗಳು ಗೌರವಿಸಿ ಮೇ 10 ರಂದು ಮತದಾನ ಮಾಡುವಂತೆ ಕೋರಿಕೊಂಡರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ. ಪಾಟೀಲ್ ಮಾತನಾಡಿ, ನಮ್ಮ ಹಿರಿಯ ಜೀವಿ ತಿಪ್ಪಿರಮ್ಮ ಅವರಿಗೆ ಸಿದ್ದಗಂಗಾ ಸ್ವಾಮೀಜಿಗಳಷ್ಟೇ ವಯಸ್ಸು ಆಗಿದೆ. ಇಂತಹ ಹಿರಿಯ ಜೀವಿಯನ್ನು ಗುರುತಿಸಿ ಗೌರವಿಸುವುದು ನಮ್ಮ ಪುಣ್ಯದ ಕೆಲಸವಾಗಿದೆ. ಮೇ 10 ಮತದಾನ ಮಾಡಲು ಮನೆಗೆ ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ತಪ್ಪದೇ ಮತದಾನ ಮಾಡಿ ಒಂದೊಳ್ಳೆ ಸಂದೇಶ ರವಾನಿಸಿ ಎಂದರು. ಇದೆ ವೇಳೆ ತಹಸೀಲ್ದಾರ್, ಚುನಾವಣಾಧಿಕಾರಿ ಸೇರಿದಂತೆ ಸಿಬ್ಬಂದಿ ವರ್ಗದವರು ಅಜ್ಜಿಯ ಕಾಲಿಗೆ ನಮಸ್ಕರಿಸಿದರು.
ಇದನ್ನೂ ಓದಿ: NIA Charges: ನಿಷೇಧಿತ ಪಿಎಫ್ಐ ಕೆಡರ್‌ನ ಶಸ್ತ್ರಾಸ್ತ್ರ ತರಬೇತಿದಾರ ಇಬ್ರಾಹಿಂ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ ಎನ್ಐಎ
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಕೆ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಕಂದಾಯ ಅಧಿಕಾರಿಗಳಾದ ಸ್ವಾಮಿ, ಮಾಯವರ್ಮ, ಚಿಕ್ಕಳ್ಳಿ, ಎಂ.ಆರ್.ಗೋಪಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.