ಬೆಂಗಳೂರು: ಜನರಿಗೆ ತುರ್ತು ಚಿಕಿತ್ಸೆ ಸಿಗಲೆಂದು ಆರಂಭವಾದ 108 ಆ್ಯಂಬುಲೆನ್ಸ್ (108 ambulance) ಸೇವೆಗೆ ಮಂಕು ಕವಿದಿದೆ. ಕೆಲ ದಿನಗಳ ಹಿಂದಷ್ಟೇ ಸಾಫ್ಟ್‌ವೇರ್ ಸಮಸ್ಯೆ ಇದೆ ಎಂದು ಕೈಕೊಟ್ಟಿದ್ದ 108 ಸೇವೆಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆ. ಜಿವಿಕೆ ಸಂಸ್ಥೆಯ ಬೇಜವ್ದಾರಿತನದಿಂದ ಆ್ಯಂಬುಲೆನ್ಸ್ ಚಾಲಕರ ಬದುಕು ಅತಂತ್ರವಾಗಿದೆ.
ಕೆಲ ದಿನಗಳ ಹಿಂದಷ್ಟೇ ಚಾಲಕರು ಸಂಬಳ ಆಗಿಲ್ಲವೆಂದು ಜಿಕೆವಿ ಬಳಿ ಅಳಲು ತೊಡಿಕೊಂಡಿದ್ದರು. ಬಾಕಿ ಸಂಬಳ ನೀಡಲು ವಿಳಂಬ ಮಾಡಿದ್ದಕ್ಕೆ ಸಿಡಿದೆದಿದ್ದ ಚಾಲಕರನ್ನು ಸಮಾಧಾನಪಡಿಸಲು ಜಿವಿಕೆ ಒಂದು ವಾರದ ಗಡುವು ತೆಗೆದುಕೊಂಡಿತ್ತು. ಸದ್ಯ ತೆಗೆದುಕೊಂಡ ಗಡವು ಮುಗಿದಿದರೂ ಚಾಲಕರಿಗೆ ಸೇರಬೇಕಿದ್ದ ವೇತನ ಕೈಸೇರಿಲ್ಲ. ನವೆಂಬರ್ 14ರಂದು ಮೂರು ತಿಂಗಳ ಪೂರ್ತಿ ಸಂಬಳವನ್ನು ನೀಡುವುದಾಗಿ ಹೇಳಿದ್ದ ಜಿವಿಕೆ ಸಂಸ್ಥೆ, ಈಗ ಮೌನಕ್ಕೆ ಶರಣಾಗಿದೆ.
ಜಿವಿಕೆಗೆ ಮೂರು ದಿನಗಳ ಗಡುವು
ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಅವರು ಜಿವಿಕೆ ಸಂಸ್ಥೆಗೆ ಮೂರು ದಿನಗಳ ಗಡುವು ನೀಡಿದ್ದಾರೆ. 3 ದಿನದಲ್ಲಿ ನೌಕರರ ಸಂಬಳ ಪಾವತಿಸದೇ ಇದ್ದಲ್ಲಿ, ಸಂಸ್ಥೆಯನ್ನು ಬ್ಲಾಕ್ ಲಿಸ್ಟ್ ಸೇರಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 14ರೊಳಗೆ ಎಲ್ಲ ಆ್ಯಂಬುಲೆನ್ಸ್ ನೌಕರರಿಗೆ ಸಂಬಳ ನೀಡುವುದಾಗಿ ಜಿವಿಕೆ ಸಂಸ್ಥೆ ಹೇಳಿತ್ತು. ಆದರೆ ಇನ್ನೂ ನೌಕರರಿಗೆ ಸಂಬಳ ನೀಡಿಲ್ಲ, ಹೀಗಾಗಿ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿಯಲು ಸಜ್ಜಾಗಿದ್ದಾರೆ. ಬುಧವಾರ (ನ.15) ಆರೋಗ್ಯ ಇಲಾಖೆಯ ಮುಂಭಾಗ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಜಿವಿಕೆ ಸಂಸ್ಥೆಗೆ ಬಾಕಿ ಸಂಬಳವನ್ನು ಕೊಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಸಂಬಳ ಕೊಡದಿದ್ದರೆ, ಕಂಪನಿಗೆ ನಾವು ಸ್ಯಾಟಿಸ್‌ಫ್ಯಾಕ್ಟರಿ ( satisfactory) ಸರ್ಟಿಫಿಕೇಟ್ ಕೊಡುವುದಿಲ್ಲ. ಜತೆಗೆ ಸರ್ಕಾರಕ್ಕೂ ಜೆವಿಕೆ ಸಂಸ್ಥೆಯ ಕುರಿತು ವರದಿ ಮಾಡುತ್ತೇವೆ ಎಂದಿದ್ದಾರೆ.
ಸ್ಯಾಟಿಸ್‌ಫ್ಯಾಕ್ಟರಿ ( satisfactory) ಸರ್ಟಿಫಿಕೇಟ್ ಇಲ್ಲದಿದ್ದರೆ ಮುಂದಿನ ದಿನದಲ್ಲಿ ಟೆಂಡರ್‌ನಲ್ಲಿ ಅವರಿಗೆ ಅವಕಾಶ ಸಿಗುವುದಿಲ್ಲ. ಈಗಾಗಲೇ ಸಂಸ್ಥೆಯವರಿಗೆ ಸ್ಪಷ್ಟವಾಗಿ ಹೇಳಿದ್ದೇವೆ, 2-3 ದಿನ ಕಾದು ನೋಡುತ್ತೇವೆ. ಸರಿಯಾದ ಮಾಹಿತಿ ಹಾಗೂ ಸಂಬಳ ನೀಡದೇ ಹೋದರೆ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ರಂದೀಪ್ ತಿಳಿಸಿದ್ದಾರೆ.
ಇದನ್ನೂ ಓದಿ | ನನ್ನ ದೇಶ ನನ್ನ ದನಿ | ಪ್ರಾಚೀನ ಭಾರತದಲ್ಲಿ ಬೇಹುಗಾರಿಕೆಯ ಹೆಜ್ಜೆಗುರುತುಗಳು