ಬೆಂಗಳೂರು: ೧೦೮ ಆಂಬ್ಯುಲೆನ್ಸ್ (108 Ambulance) ಸಿಬ್ಬಂದಿಗೆ ಮೂರು ತಿಂಗಳ ಬಳಿಕ ವೇತನ ಪಾವತಿಯಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹೀಗಾಗಿ ಮೂರು ತಿಂಗಳಿನಿಂದ ವೇತನ ಮಾಡಿಲ್ಲ ಎಂಬ ಕಾರಣಕ್ಕೆ ೧೦೮ ಆಂಬ್ಯುಲೆನ್ಸ್ ಸೇವೆಯನ್ನು ರದ್ದುಗೊಳಿಸಿ, ಪ್ರತಿಭಟನೆಗೆ ಸಜ್ಜಾಗಿದ್ದ ಆಂಬ್ಯುಲೆನ್ಸ್ ಸಿಬ್ಬಂದಿಯು ಪ್ರತಿಭಟನೆಯನ್ನು ವಾಪಸ್ ಪಡೆದಿದ್ದು, ಎಂದಿನಂತೆ ಸೇವೆ ಮುಂದುವರಿಯಲಿದೆ.
ಜಿವಿಕೆ ಸಂಸ್ಥೆಯು ಮೂರು ದಿನಗಳ ಒಳಗೆ ವೇತನ ಪಾವತಿ ಮಾಡದಿದ್ದರೆ ಕಠಿಣ ಕ್ರಮ ಕೈಗೊಂಡು ಲೈಸನ್ಸ್ ರದ್ದುಗೊಳಿಸುವುದಲ್ಲದೆ, ಕಪ್ಪು ಪಟ್ಟಿಗೆ ಸೇರಿಸುವುದಾಗಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಂಗಳವಾರ (ನವೆಂಬರ್ ೧೫) ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿವಿಕೆ ಸಂಸ್ಥೆಯು ತಕ್ಷಣಕ್ಕೇ ನೌಕರರಿಗೆ ವೇತನ ಪಾವತಿ ಮಾಡಿದೆ.
ಪ್ರತಿಭಟನೆ ವಾಪಸ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ 108 ಆಂಬ್ಯುಲೆನ್ಸ್ ಸಿಬ್ಬಂದಿಯ ರಾಜ್ಯ ಉಪಾಧ್ಯಕ್ಷ ಪರಮಶಿವ, ಜಿವಿಕೆ ಸಂಸ್ಥೆಯವರು ನಮ್ಮ ಸಂಬಳವನ್ನು ಪಾವತಿ ಮಾಡಿದ್ದಾರೆ. ಇದೀಗ ಯಾವುದೇ ಸಂಬಳ ಬಾಕಿ ಇಲ್ಲ. ಆರೋಗ್ಯ ಇಲಾಖೆಯ ಆಯುಕ್ತರು ಹಾಗೂ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಖಡಕ್ ಸೂಚನೆಯಿಂದ ನಮಗೆ ವೇತನ ಲಭ್ಯವಾಗಿದೆ. ಇದರಿಂದ ನಮ್ಮ ಬೇಡಿಕೆ ಈಡೇರಿದ್ದು, ಆಂಬ್ಯುಲೆನ್ಸ್ ಸೇವೆ ಎಂದಿನಂತೆ ಇರಲಿದೆ, ನಾವು ಪ್ರತಿಭಟನೆ ಮಾಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ | Viral Video | ಹಿಮಾಚಲ ಪ್ರದೇಶದಲ್ಲಿ ಆಂಬ್ಯುಲೆನ್ಸ್ಗಾಗಿ ತಮ್ಮ ಬೆಂಗಾವಲು ಕಾರು ನಿಲ್ಲಿಸಿದ ಪ್ರಧಾನಿ ಮೋದಿ
ಸಮಸ್ಯೆ ಏನಾಗಿತ್ತು?
ಕೆಲ ದಿನಗಳ ಹಿಂದಷ್ಟೇ ಚಾಲಕರು ಸಂಬಳ ಆಗಿಲ್ಲವೆಂದು ಜಿವಿಕೆ ಬಳಿ ಅಳಲು ತೋಡಿಕೊಂಡಿದ್ದರು. ಬಾಕಿ ಸಂಬಳ ನೀಡಲು ವಿಳಂಬ ಮಾಡಿದ್ದಕ್ಕೆ ಪ್ರತಿಭಟನೆ ಮಾಡಲು ಮುಂದಾಗಿದ್ದ ಚಾಲಕರನ್ನು ಸಮಾಧಾನಪಡಿಸಲು ಜಿವಿಕೆ ಒಂದು ವಾರದ ಗಡುವು ತೆಗೆದುಕೊಂಡಿತ್ತು. ಬಳಿಕ ನವೆಂಬರ್ 14ರಂದು ಮೂರು ತಿಂಗಳ ಪೂರ್ತಿ ಸಂಬಳವನ್ನು ನೀಡುವುದಾಗಿ ಹೇಳಿತ್ತು. ಆದರೆ, ನೀಡಿರಲಿಲ್ಲ.
ಜಿವಿಕೆಗೆ ಮೂರು ದಿನಗಳ ಗಡುವು
ವೇತನ ಆಗದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಗರಂ ಆಗಿದ್ದ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಮಂಗಳವಾರ (ನ.೧೫) ಜಿವಿಕೆ ಸಂಸ್ಥೆಗೆ ವೇತನ ಪಾವತಿ ಮಾಡಲು ಮೂರು ದಿನಗಳ ಗಡುವು ನೀಡಿದ್ದರು. 3 ದಿನದಲ್ಲಿ ನೌಕರರ ಸಂಬಳ ಪಾವತಿಸದೇ ಇದ್ದಲ್ಲಿ, ಸಂಸ್ಥೆಯನ್ನು ಬ್ಲಾಕ್ ಲಿಸ್ಟ್ ಸೇರಿಸಲಾಗುವುದು. ಜತೆಗೆ ಒಂದು ವೇಳೆ ಸಂಬಳ ಕೊಡದಿದ್ದರೆ, ಕಂಪನಿಗೆ ನಾವು ಸ್ಯಾಟಿಸ್‌ಫ್ಯಾಕ್ಟರಿ (satisfactory) ಸರ್ಟಿಫಿಕೇಟ್ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ, ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿಯಲು ಸಜ್ಜಾಗಿ ಬುಧವಾರ (ನ.15) ಆರೋಗ್ಯ ಇಲಾಖೆಯ ಮುಂಭಾಗ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಂಡಿದ್ದರು.
ಇದನ್ನೂ ಓದಿ | AB-ARK | ಡಿಸೆಂಬರ್ ವೇಳೆಗೆ ರಾಜ್ಯದ ಶೇ.50 ಅರ್ಹರಿಗೆ ಆಯುಷ್ಮಾನ್ ಕಾರ್ಡ್ ನೀಡುವ ಗುರಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್