ಬೆಳಗಾವಿ: ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಭವ್ಯವಾದ ಬಸವಣ್ಣನ ಪ್ರತಿಮೆಯನ್ನು (Basavanna statue) ಸ್ಥಾಪಿಸುವ ಬಗ್ಗೆ ಸೂಕ್ತ ಆದೇಶ ನೀಡಲಾಗುವುದು. ಈ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿಸುವ ಧ್ಯೇಯವನ್ನು ಸರ್ಕಾರ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳವಾರ ಬಸವೇಶ್ವರ ವೃತ್ತದ ಸಮೀಪದ ತಿನುಸುಕಟ್ಟೆ ಬಳಿ ಶ್ರೀ ಬಸವೇಶ್ವರ ಪ್ರತಿಮೆ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಸಿಂಹ ಗಢದಲ್ಲಿ ಶಿವಾಜಿಯ ಪ್ರತಿಮೆ ಸ್ಥಾಪನೆ ಬೆನ್ನಲ್ಲೇ ಸರ್ಕಾರದ ಮೇಲೆ ಓಲೈಕೆ ಆರೋಪ ಎದುರಾಗಿತ್ತು. ಈ ಆರೋಪವನ್ನು ಸರಿಪಡಿಸುವುದಕ್ಕಾಗಿ ಬಸವೇಶ್ವರ ಪ್ರತಿಮೆ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿತ್ತು. ಹಿಂದೆ ಇದ್ದ ಪ್ರತಿಮೆಯನ್ನೇ ನವೀಕರಣ ಮಾಡಲಾಗಿದೆ. ಮತ್ತು ಈಗ ಹೊಸ ಪ್ರತಿಮೆ ಸ್ಥಾಪನೆ ಘೋಷಿಸಲಾಗಿದೆ.
ʻʻಬೆಳಗಾವಿಯಲ್ಲಿ ಬಸವೇಶ್ವರರ ಪ್ರತಿಮೆ ಪ್ರತಿಷ್ಠಾಪಿಸಿರುವುದು ಅತ್ಯಂತ ಸಂತೋಷದ ಸಂಗತಿ. ಬಸವಣ್ಣನವರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಸನ್ಮಾರ್ಗವನ್ನು ತೋರಿದ್ದಾರೆ. ವಿಶ್ವದ ಮೊದಲ ಸಂಸತ್ತು ಎಂದೇ ಕರೆಸಿಕೊಳ್ಳುವ ಅನುಭವ ಮಂಟಪ ಸ್ಥಾಪಿಸಿದರು. ಅನುಭವ ಮಂಟಪದಲ್ಲಿ ಚರ್ಚಿಸಲಾಗುತ್ತಿದ್ದ ಎಲ್ಲ ವಿಷಯಗಳು ಇಂದಿಗೂ ಪ್ರಸ್ತುತ. ಅಸಮಾನತೆ, ಲಿಂಗಭೇದ, ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ವಿರೋಧಿಸಿದ್ದರು. ಈ ವಿಷಯಗಳ ಬಗ್ಗೆ ಸಮಾಜದಲ್ಲಿ ಸ್ಪಷ್ಟತೆ ದೊರೆಯುವ ತನಕ ಬಸವಣ್ಣನವರೂ ಪ್ರಸ್ತುತರಾಗಿಯೇ ಇರುತ್ತಾರೆ. ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸುವ ಕೆಲಸವಾಗಬೇಕುʼʼ ಎಂದರು.
ʻʻನಮ್ಮ ದೇಶಕ್ಕೆ ಚರಿತ್ರೆ ಇದೆ, ಚಾರಿತ್ರ್ಯ ಬೇಕಾಗಿದೆ, ಸಂಘರ್ಷವಿದೆ, ಸಮನ್ವಯ ಬೇಕಾಗಿದೆ. ಸಾಮಾಜಿಕ ಪರಿವರ್ತನೆಯಾಗುವಂತಹ, ವೈಚಾರಿಕವಾಗಿ ಮುನ್ನಡೆಯಲು ಬಸವ ತತ್ವಗಳು ಪ್ರೇರಣೆ ನೀಡಲಿದೆʼʼ ಎಂದರು ಬೊಮ್ಮಾಯಿ.
ಕೆ.ಎಲ್.ಇ ಸಂಸ್ಥೆಗಳ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಭಯ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : Karnataka Elections : ಮರಾಠಿ ಓಲೈಕೆ ಡ್ಯಾಮೇಜ್ ಕಂಟ್ರೋಲ್; ಶಿವಾಜಿ ಬಳಿಕ ಈಗ ಬಸವೇಶ್ವರ ಮೂರ್ತಿ ಸ್ಥಾಪನೆ ಪ್ಲ್ಯಾನ್