ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಆರೋಗ್ಯ ಕವಚ ೧೦೮ ಆಂಬ್ಯುಲೆನ್ಸ್ ಸೇವೆ ನೀಡುತ್ತಿರುವ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಹಳ್ಳೂರು ಅವರ ಮೇಲೆ ಕೋಟ್ಯಂತರ ವಸೂಲಿಯ (108 SCAM) ಗಂಭೀರ ಆರೋಪ ಕೇಳಿಬಂದಿದೆ.
ರಾಜ್ಯಾಧ್ಯಕ್ಷರಾಗಿರುವ ಶ್ರೀಶೈಲ ಹಳ್ಳೂರು ಮತ್ತು ತಂಡ ಆರೋಗ್ಯ ಸಚಿವರಿಗೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಬೇಕಾಗುತ್ತದೆ ಎಂಬ ಕಾರಣ ನೀಡಿ ನೌಕರರಿಂದ ಕೋಟ್ಯಂತರ ರೂ. ವಸೂಲಿ ಮಾಡಿದೆ ಎಂದು ೧೦೮ ಆಂಬ್ಯುಲೆನ್ಸ್ ಅಧ್ಯಕ್ಷ ಪರಮಶಿವಯ್ಯ ಸುದ್ದಿ ಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.
ಸರ್ಕಾರದಿಂದ ಬರಬೇಕಾದ ಹೆಚ್ಚುವರಿ ವೇತನವನ್ನು ಬಿಡುಗಡೆ ಮಾಡಿಸುವುದಕ್ಕೆ ಲಂಚ ನೀಡಬೇಕು ಎಂಬ ಕಾರಣ ನೀಡಿ ಆಂಬ್ಯುಲೆನ್ಸ್ ಡ್ರೈವರ್ ಮತ್ತು ನರ್ಸ್‌ಗಳಿಂದ ಕೋಟ್ಯಂತರ ರೂ. ಹಣವನ್ನು ವಸೂಲಿ ಮಾಡಿದ್ದಾರೆ. ಇನ್ನು ನೌಕರರ ವರ್ಗವಣೆ ವಿಷಯದಲ್ಲೂ ಅಧ್ಯಕ್ಷ ಶ್ರೀ ಶೈಲ ಅವರು ಲಕ್ಷ ಲಕ್ಷ ರೂ. ಸಂಗ್ರಹಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಆಡಿಯೊ ದಾಖಲೆ ಬಿಡುಗಡೆ
ಶ್ರೀಶೈಲ ಹಳ್ಳೂರು ಮತ್ತು ತಂಡ ನೌಕರರಿಂದ ಹಣ ಪಡೆದಿರುವ ಮತ್ತು ಹಣ ಕೇಳಿರುವುದಕ್ಕೆ ಸಂಬಂಧಿಸಿ ದಾಖಲೆ ಮತ್ತು ಆಡಿಯೊವನ್ನು ಅವರು ಬಿಡುಗಡೆ ಮಾಡಿರುವ ಪರಮಶಿವಯ್ಯ, ಕಳೆದ ಒಂದು ವರ್ಷದಿಂದ ನೌಕರರ ಬಳಿ ಗೂಗಲ್ ಪೇ ಮೂಲಕ ಹತ್ತು ಸಾವಿರ, ಇಪ್ಪತ್ತು ಸಾವಿರ ಹಣ ಪಡೆದಿರುವ ದಾಖಲೆ ಬಿಡುಗಡೆಯನ್ನು ನೀಡಿದರು.
ಒಟ್ಟು ಸಂಗ್ರಹ ೧.೮೦ ಕೋಟಿ ರೂ.!, ಯಾರಿಗೆ ಎಷ್ಟು?
ಶ್ರೀಶೈಲ ಮತ್ತು ತಂಡ ಇದುವರೆಗೆ ೧.೮೦ ಕೋಟಿ ರೂ. ವಸೂಲಿ ಮಾಡಿದೆ ಎಂದು ಆರೋಪಿಸಿರುವ ಪರಮಶಿವಯ್ಯ, ಇದರಲ್ಲಿ ಒಂದು ಕೋಟಿ ಆರೋಗ್ಯ ಸಚಿವರಿಗೆ ಲಂಚ ನೀಡಬೇಕು, ಇನ್ನುಳಿದ ಹಣ ಅಧಿಕಾರಿಗಳಿಗೆ ನೀಡಬೇಕೆಂದು ನೌಕರರ ಸಭೆಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ ಶ್ರೀ ಶೈಲ ಅವರ ಮಾತಿನ ಆಡಿಯೊವನ್ನು ಬಿಡುಗಡೆ ಮಾಡಿದರು.
ತನಿಖೆಗೆ ಆಯುಕ್ತರಿಗೆ ಮನವಿ
ಹಾಗಿದ್ದರೆ ೧೦೮ ಆಂಬ್ಯುಲೆನ್ಸ್ ಸಿಬ್ಬಂದಿ ಹೆಚ್ಚುವರಿ ವೇತನ ಪಡೆಯಲು ಸಚಿವರಿಗೆ ಲಂಚ ನೀಡಬೇಕಾ ಅಥವಾ ಸಚಿವರ ಹೆಸರಿನಲ್ಲಿ ನೌಕರರ ಸಂಘದ ಅಧ್ಯಕ್ಷ ಶ್ರೀ ಶೈಲ ಹಳ್ಳೂರ ಹಣ ಲೂಟಿ ಮಾಡುತ್ತಿದ್ದಾರಾ ಎಂಬ ಬಗ್ಗೆ ಆರೋಗ್ಯ ಇಲಾಖೆ ತನಿಖೆ ನಡೆಸಬೇಕೆಂದು ಆಯುಕ್ತಲ್ಲಿ ಪರಮಶಿವಯ್ಯ ಮನವಿ ಮಾಡಿದರು.
ಸಿಎಂ ಪಿಎಗೂ ಐದು ಲಕ್ಷ ಕೊಡಬೇಕಂತೆ!
ಶ್ರೀಶೈಲ ಅವರ ಆಡಿಯೊದಲ್ಲಿ ಸಚಿವರಿಗೆ ಒಂದು ಕೋಟಿ ಕೊಡಬೇಕು, ಇಲಾಖೆ ಅಧಿಕಾರಿಗಳಿಗೆ ಲಕ್ಷ ಲಕ್ಷ ಕೊಡಬೇಕು ಎನ್ನುವುದರ ಜತೆಗೆ ಸಿಎಂ ಅವರ ಪಿಎಗೂ ಐದು ಲಕ್ಷ ಕೊಡಬೇಕು ಎಂದೆಲ್ಲ ಮಾತನಾಡಿದ್ದಾರೆ. ಒಟ್ಟು ಕಲೆಕ್ಷನ್ ೧.೮೦ ಕೋಟಿ ರೂ. ಕಲೆಕ್ಷನ್ ಆಗಿರುವ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | 108 ambulance | ಚಾಲಕರಿಗೆ ಸಿಗದ 3 ತಿಂಗಳ ಸಂಬಳ; ಜಿವಿಕೆಗೆ ಕೊನೇ ಡೆಡ್‌ಲೈನ್ ನೀಡಿದ ಆರೋಗ್ಯ ಇಲಾಖೆ