ಬೆಂಗಳೂರು: ಜೆಡಿಎಸ್ ಶಾಸಕರು ಜಾತ್ಯತೀತ ಸಿದ್ಧಾಂತ ಬಿಟ್ಟು ಬಿಜೆಪಿ ಜತೆ (BJP-JDS alliance) ಹೋಗಲು ತಯಾರಿಲ್ಲ. ಈಗಾಗಲೇ 5 ಶಾಸಕರು ನನ್ನ ಸಂಪರ್ಕದಲ್ಲಿದ್ದು, ಈ ಸಂಖ್ಯೆ 12ಕ್ಕೆ ಏರಿಕೆ ಆಗಲಿದೆ. ಡಿ.11ರಂದು ಎಲ್ಲ ರಾಜ್ಯಗಳ ಜೆಡಿಎಸ್ ಅಧ್ಯಕ್ಷರು ಸಭೆ ಸೇರಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ನಿರ್ಣಯ ಮಾಡಿದ್ದಾರೆ ಎಂದು ಜೆಡಿಎಸ್ ಉಚ್ಚಾಟಿತ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ (CM Ibrahim) ಹೇಳಿದ್ದಾರೆ.
ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ಕ್ಕೂ ಹೆಚ್ಚು ಜೆಡಿಎಸ್ ಶಾಸಕರು ಜಾತ್ಯತೀತ ಸಿದ್ಧಾಂತ ಬಿಟ್ಟು ಬಿಜೆಪಿ ಜತೆ ಹೋಗಲು ತಯಾರಿಲ್ಲ. ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳನ್ನು ನೋಡಿ ಬೇಸರ ಆಗುತ್ತಿದೆ. ಕುಮಾರಸ್ವಾಮಿ ಅವರೇ ನೀವು ಕೇಶವ ಕೃಪಾದಲ್ಲಿ ಬಾಳಲು ಆಗಲ್ಲ, ನೀವು ಮತ್ತೆ ಇಲ್ಲಿಗೆ ಬರಲೇಬೇಕು. ನಿಮ್ಮ ಸ್ವಭಾವ ನನಗೆ ಗೊತ್ತಿದೆ. ದೇವೇಗೌಡ್ರು ಸ್ವಯಂ ಒತ್ತಡಕ್ಕೆ ಒಳಗಾಗಿದ್ದಾರೆ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ರೇವಣ್ಣ ಸಹ ಏನು ಮಾಡಲು ಆಗದೆ ಚಿಂತಾಕ್ರಾಂತರಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಎಸ್ಸಿ, ಎಸ್ಟಿ ಹಣ ಅನ್ಯ ಕಾರ್ಯದ ಬಳಕೆಗೆ ತಡೆ, ಕಾಯ್ದೆ ತಿದ್ದುಪಡಿಗೆ ಸಂಪುಟ ನಿರ್ಧಾರ
ರಾಜ್ಯದಲ್ಲಿ ಭೀಕರ ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಿಜೆಪಿ ನಾಯಕರು ಅಧಿವೇಶನದಲ್ಲಿ ಹೋರಾಟ ಮಾಡುವ ಬದಲು, ಪ್ರಧಾನಿ ಮೋದಿ ಬಳಿ ಹೋಗಲಿ. ನಮಗೆ ಸಿಗಬೇಕಾದ ಬರ ಪರಿಹಾರ ನೀಡಲು ಬಿಜೆಪಿ ಶ್ರಮಿಸಲಿ. ಎಲ್ಲೆಲ್ಲಿ ತೀವ್ರ ಬರಗಾಲ ಆಗಿದೆ, ಬರಗಾಲದ ಪರಿಹಾರ ನೀಡಬೇಕು ಅಂತ ಪ್ರಾಮಾಣಿಕವಾಗಿ ನಿರ್ಧಾರ ಮಾಡಲಿ ಎಂದು ತಿಳಿಸಿದರು.
ಮಾಜಿ ಪ್ರಧಾನಿಗಳ ಆರೋಗ್ಯದ ದೃಷ್ಟಿಯಿಂದ ಈ ಎಲ್ಲ ಅಭಿಪ್ರಾಯ ಸಮಾಧಾನವಾಗಿ ಹೇಳುತ್ತಿದ್ದೇನೆ. ಎಲ್ಲೆಲ್ಲಿ ಬ್ಯಾಲೆಟ್ ಇದೆಯೋ ಅಲ್ಲಿ ಬಿಜೆಪಿ ಗೆಲ್ಲುತ್ತಿಲ್ಲ. ಎಲ್ಲಿ ಇವಿಎಂ ಯಂತ್ರ ಇದೆಯೋ ಅಲ್ಲಿ ಬಿಜೆಪಿ ಗೆಲ್ಲುತ್ತದೆ. ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್, ಅಖಿಲೇಶ್ ಯಾದವ್ ಜತೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ಇಂಡಿಯಾ ಮೈತ್ರಿಕೂಟಕ್ಕೆ ಶಕ್ತಿ ಕೊಡುವ ಪ್ರಯತ್ನ ಮಾಡುತ್ತೇನೆ. ಒಂದು ತೃತೀಯ ಶಕ್ತಿ ನಿರ್ಮಾಣ ಮಾಡಲು ನಾವೆಲ್ಲ ಶ್ರಮಿಸುತ್ತೇವೆ ಎಂದು ಹೇಳಿದರು.
ಮುಂದೆ ಮೋದಿ ಮತ್ತೆ ಅಧಿಕಾರಕ್ಕೆ ಬರಬಹುದು, ಬಾರದೆ ಇರಬಹುದು. ಆದರೆ ನಾವು ನಮ್ಮ ಸಿದ್ಧಾಂತ ಯಾವತ್ತೂ ಬಿಟ್ಟು ಕೊಡಬಾರದು. ರಾಹುಲ್ ಗಾಂಧಿ ನಮ್ಮ ರಾಜ್ಯದಿಂದ ಸ್ಪರ್ಧೆ ಮಾಡುವ ವಿಚಾರ ಸ್ವಾಗತ ಮಾಡುತ್ತೇನೆ. ಯತ್ನಾಳ್ ಅವರ ಧಾರ್ಮಿಕ ಹೇಳಿಕೆ ನೋವುಂಟು ಮಾಡಿದೆ. ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಮಾಡಬೇಡಿ. ಮಾತನಾಡಲು ಬೇಕಾದಷ್ಟು ವಿಷಯಗಳು ಇವೆ, ಅದರ ಬಗ್ಗೆ ಮಾತಾಡಿ ಎಂಉದ ತಾಕೀತು ಮಾಡಿದರು.
ಇದನ್ನೂ ಓದಿ | CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್ ಮಾಡಿದ ಯತ್ನಾಳ್ ಎಂದ ಸಿದ್ದರಾಮಯ್ಯ
ಉಡುಪಿ ಹೋಟೆಲ್‌ಗೆ ಬಂದು ಬಿರಿಯಾನಿ ಬೇಕು ಅಂದರೆ ಸಿಗಲ್ಲ. ನನ್ನ ಅಪ್ಪ ನನ್ನನ್ನು ಅಧ್ಯಕ್ಷರಾಗಿ ನೇಮಕ ಮಾಡಿಲ್ಲ. ಅವರಿಗೆ ಉಚ್ಚಾಟನೆ ಮಾಡಲು ಅಧಿಕಾರವೇ ಇಲ್ಲ. ನನ್ನ ಸಂಪರ್ಕದಲ್ಲಿ 12 ಶಾಸಕರಿದ್ದಾರೆ. ಆಗ ಎಲ್ಲರನ್ನೂ ನಿಮ್ಮ ಮುಂದೆ ಕೂರಿಸಿ ಸುದ್ದಿಗೋಷ್ಠಿ ಮಾಡುತ್ತೇನೆ. ಎಲ್ಲರಿಗೂ ಬಕೆಟ್ ಹಿಡಿಯೋಕೆ ಕುಮಾರಸ್ವಾಮಿ ಹೋಗಿದ್ದಾರೆ. ಅಂಬೇಡ್ಕರ್ ಸಿದ್ಧಾಂತ ಒಪ್ಪದಿದ್ದರೂ ಪರವಾಗಿಲ್ಲ, ಕುವೆಂಪು ಅವರ ಸಿದ್ಧಾಂತವಾದರೂ ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ