ಬೆಂಗಳೂರು: ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದ ಮಹಿಳೆ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಂಗಳೂರು ಮೂಲದ ವಿನಯಾ ಕುಮಾರಿ ಹೃದಯಾಘಾತದಿಂದ ಸಾವನ್ನಪ್ಪಿಲ್ಲ. ಬದಲಿಗೆ ಮಹಿಳೆ ಸಾವಿಗೆ ಬೇರೆ ಕಾರಣ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ಬಹಿರಂಗವಾಗಿದೆ.
ಪೋಸ್ಟ್ ಮಾರ್ಟಂ ವರದಿಯಲ್ಲಿದೆ ಏನಿದೆ..?
ಸಿ.ವಿ.ರಾಮನ್ ಆಸ್ಪತ್ರೆ ವೈದ್ಯರು ನೀಡಿರುವ ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ʻಮಹಿಳೆ ಸಾವಿಗೆ ಮಿದುಳು ರಕ್ತಸ್ರಾವವೇ ಸಾವಿಗೆ ಕಾರಣ.ʼ
ʻಕಸರತ್ತು ಮಾಡುವ ವೇಳೆ ರಕ್ತದೊತ್ತಡ ಹೆಚ್ಚಾಗಿ, ಮಿದುಳಿನ ರಕ್ತನಾಳಗಳು ಒಡೆದಿದ್ದವು. ಅಲ್ಲಿಯೇ ರಕ್ರಸ್ರಾವವಾಗಿದ್ದರಿಂದ ವಿನಯ್‌ಕುಮಾರಿ ಕುಸಿದು ಬಿದ್ದು ಮೃತಪಟ್ಟಿದ್ದಾರೆʼ ಎಂದು ಪೋಸ್ಟ್‌ಮಾರ್ಟಂ ವರದಿಯಲ್ಲಿ ತಿಳಿಸಲಾಗಿದೆ.
ನಗರದ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಗಳೂರು ಮೂಲದ ವಿನಯಾ ಕುಮಾರಿ (44), ಮಾರ್ಚ್ 26ರಂದು ಜಿಮ್‌ನಲ್ಲಿ ಕಸರತ್ತು ನಡೆಸುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದರು. ವಿನಯಾ ಕುಮಾರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.