Site icon Vistara News

CM Basavaraja Bommai : ಖಾಸಗಿ ವಲಯದಲ್ಲಿ ಹೆಚ್ಚಿದ ಅವಕಾಶ; ಪ್ರತಿ ವರ್ಷ 13 ಲಕ್ಷ ಉದ್ಯೋಗ ಸೃಷ್ಟಿ ಎಂದ ಬೊಮ್ಮಾಯಿ

GTTC bommai

#image_title

ಹಾವೇರಿ (ಶಿಗ್ಗಾಂವಿ): ರಾಜ್ಯದಲ್ಲಿ ಖಾಸಗಿ ಉದ್ಯಮಗಳಿಗೆ ಸಿಗುತ್ತಿರುವ ಪ್ರೋತ್ಸಾಹ ಮತ್ತು ಕೌಶಲ, ಉದ್ಯಮಶೀಲತೆಗೆ ಸಿಕ್ಕಿರುವ ಬೆಂಬಲದಿಂದಾಗಿ ಉದ್ಯೋಗವಕಾಶಗಳು ಹೆಚ್ಚಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ವರ್ಷ ಖಾಸಗಿ ವಲಯದಲ್ಲಿ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಹೇಳಿದರು.

ಅವರು ಭಾನುವಾರ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕಲ್ಯಾಣ ಗ್ರಾಮದ ಜಿಟಿಟಿಸಿ ನಿವೇಶನದ ಬಳಿ ಆಯೋಜಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹಾಗೂ ಕಲ್ಯಾಣ ಗ್ರಾಮದಲ್ಲಿ ನೂತನ ತರಬೇತಿ ಸಂಕೀರ್ಣ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಈ ಮಾಹಿತಿ ಪ್ರಾವಿಡೆಂಟ್ ಫಂಡ್ ಮತ್ತು ಇ. ಎಸ್.ಐ ನಲ್ಲಿ ದಾಖಲಾಗಿರುವ 18 ರಿಂದ 25 ವರ್ಷಗಳೊಳಗಿನವರು ದಾಖಲಿಸಿಕೊಂಡಿರುವುದನ್ನು ಆಧರಿಸಿ, ಅಧ್ಯಯನ ಮಾಡಿ ಮಾಹಿತಿ ನೀಡಲಾಗಿದೆ ಎಂದರು.

ಅನುತ್ತೀರ್ಣರಾದವರಿಗೂ ಅವಕಾಶ

ಕೇವಲ ಎಂಜಿನಿಯರಿಂಗ್, ಐ.ಟಿ ಬಿಟಿ ಕಲಿತವರಿಗಷ್ಟೇ ಅಲ್ಲ, ಪಿಯುಸಿ ಅನುತ್ತೀರ್ಣರಾದವರಿಗೆ ಕೆಲಸ ದೊರೆಯಬೇಕು, ಆಗ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಸಾಧ್ಯ ಎಂದು ಹಲವು ಯೋಜನೆ ರೂಪಿಸಲಾಗಿದೆ ಎಂದರು. ಈ ಹಿನ್ನೆಲೆಯಲ್ಲಿ ಶಿಗ್ಗಾಂವಿ, ಬಂಕಾಪುರ, ಉಡಚೆನ್ನಾಪುರ ಪಾಲಿಟೆಕ್ನಿಕ್ ಇಂಜಿನಿಯರಿಂಗ್ ಕಾಲೇಜಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಗ್ಗಾಂವಿ ಹಾಗೂ ಸವಣೂರು ಐ.ಟಿ. ಐಗಳು ತಲಾ ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕೆ.ಎಸ್.ಆರ್.ಟಿ. ಐ ಪಾಲಿಟೆಕ್ನಿಕ್ ನಿರ್ಮಾಣವಾಗುತ್ತಿದೆ. ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದ ಕೌಶಲ್ಯಾಭಿವೃದ್ದಿ, ತರಬೇತಿಯನ್ನು ಎಲ್ಲಾ ಸಂಸ್ಥೆಗಳಲ್ಲಿಯೂ ದೊರೆಯುವಂತಾಗಬೇಕೆನ್ನುವ ಕನಸು ನನ್ನದು ಎಂದರು.

ಸವಣೂರಿನಲ್ಲಿ ಜವಳಿ ತರಬೇತಿಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿಗ್ಗಾಂವಿಯ ಪಶು ವೈದ್ಯಕೀಯ ಪಾಲಿಟೆಕ್ನಿಕನ್ನು ಆರು ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು. ಎಲ್ಲಾ ಸಂಸ್ಥೆಗಳು ಸದೃಢವಾಗಿ ಬೆಳೆದು ಸಾವಿರಾರು ಯುವಕರಿಗೆ ತರಬೇತಿ ನೀಡಿದರೆ ಬದುಕಿನಲ್ಲಿ ಮುಂದೆ ಸಾಗುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕೋವಿಡ್ ಇದ್ದರೂ ಕೂಡ ಆರ್ಥಿಕತೆ ಕಾಪಾಡಿಕೊಂಡು ಬಂದಿದ್ದರ ಪರಿಣಾಮವಾಗಿ ವಿದೇಶಿ ಬಂಡವಾಳ ಹೆಚ್ಚು ಹರಿದು ಬಂದಿದೆ. ಕರ್ನಾಟಕ ಪ್ರಗತಿಪರ ಆಡಳಿಗಾರರ ಕೈಯಲ್ಲಿ ಇದ್ದುದರಿಂದ ಇದು ಸಾಧ್ಯವಾಗಿದೆ ಎಂದರು.

ಜವಳಿ ಪಾರ್ಕಿನಲ್ಲಿ 10 ಸಾವಿರ ಜನರಿಗೆ ಉದ್ಯೋಗ

ಸುಮಾರು 73 ಕೋಟಿ ರೂ.ಗಳ ಜವಳಿ ಟೆಕ್ನಾಲಜಿ ಸಂಸ್ಥೆ (ಜಿಟಿಟಿಸಿ) ನಿರ್ಮಾಣವಾಗಲಿದೆ. ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸ್, ಅಲ್ಪಾವಧಿ, ಸರ್ಟಿಫೈಡ್ ಕೋರ್ಸುಗಳು ಲಭ್ಯವಿದೆ. ಜಗತ್ತಿನ ಆಧುನಿಕ ತರಬೇತಿಯನ್ನು ಇಲ್ಲಿ ಪಡೆಯಬಹುದು. ಜವಳಿ ಪಾರ್ಕ್, ಪಶು ವೈದ್ಯಕೀಯ ಪಾಲಿಟೆಕ್ನಿಕ್ ಬರುತ್ತಿದ್ದು, ಜವಳಿ ಪಾರ್ಕಿನಲ್ಲಿಯೇ 10 ಸಾವಿರ ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಇದನ್ನು ಹೊರತುಪಡಿಸಿ 5 ಸಾವಿರ ಜನರಿಗೆ ಗಾರ್ಮೆಂಟ್ ಗಳಲ್ಲಿ ಕೆಲಸ ದೊರೆಯುತ್ತದೆ. ಯುವಕರಿಗೆ ಉದ್ಯೋಗದ ಭಿವಿಷ್ಯ ಬರೆಯಲು ಕಾರ್ಯಕ್ರಮ ರೂಪಿಸಿದ್ದು ಇದರ ಪ್ರಯೋಜನವನ್ನು ಯುವಕರು ಪಡೆಯಬೇಕೆಂದರು.

ಕೆಲಸ ಸಿಗುವ ಗ್ಯಾರಂಟಿ

ಜಿ.ಟಿ. ಟಿ. ಸಿ ಬಹಳ ಪ್ರಮುಖ ಸಂಸ್ಥೆ. ಇಂಜಿನಿಯರಿಂಗ್ ಮುಗಿಸಿದ ನಂತರ ಜಿ.ಟಿ. ಟಿ. ಸಿ ಬೆಂಗಳೂರಿನಲ್ಲಿ ಆರು ತಿಂಗಳ ತರಬೇತಿ ಪಡೆದಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಒಂದು ಭಾಗ ಇಂಜಿನಿಯರಿಂಗ್ ನಲ್ಲಿ ಕಲಿತಿದ್ದಾರೆ, ಜಿ.ಟಿ. ಟಿ. ಸಿ ಯಲ್ಲಿ 10 ಭಾಗ ಕಲಿತೆವು ಎಂದರು. ಇದರ ಪರಿಣಾಮವಾಗಿ ಟಾಟಾ ಮೊಟರ್ಸ್ ನಲ್ಲಿ ನೌಕರಿ ಲಭಿಸಿತು ಎಂದರು. ಇಲ್ಲಿ ತರಬೇತಿ ಪಡೆದವರಿಗೆ ಶೇ. 100ರಷ್ಟು ಕೆಲಸ ಸಿಗುವ ಗ್ಯಾರಂಟಿ ಇದೆ ಎಂದರು. ಇಲ್ಲಿನ ತರಬೇತಿ ವಿಧಾನ ಬಹಳಷ್ಟು ಉತ್ತಮವಾಗಿದೆ. ಪ್ರಮಾನಪತ್ರವಿದ್ದರೆ ಶೇ 50 ರಷ್ಟು ಅಂಕಗಳನ್ನು ಉದ್ಯೋಗದಲ್ಲಿ ನೀಡುತ್ತಾರೆ ಎಂದರು. ಜಿ.ಟಿ. ಟಿ.ಸಿ ಪ್ರವೇಶ ಪಡೆದು ತರಬೇತಿ ಪಡೆದರೆ ಉಜ್ವಲ ಭವಿಷ್ಯವಿರುತ್ತದೆ ಎಂದರು.

1.80 ಲಕ್ಷ ಯುವಕರಿಗೆ ಸ್ಕಿಲ್ ಇಂಡಿಯಾ ಅಡಿ ತರಬೇತಿ

ಭಾರತಕ್ಕೆ ಕೌಶಲ್ಯವಿರುವ ಯುವಕರು ಅಗತ್ಯ. ನಮ್ಮ ಪ್ರಧಾನಿಗಳು ಜನಸಂಖ್ಯೆಯನ್ನು ಬಂಡವಾಳ ಎಂದು ಪರಿಗಣಿಸಿ, ಶೇ 40 ರಷ್ಟಿರುವ ಯುವಜನಾಂಗಕ್ಕೆ ಕೌಶಲ್ಯ ನೀಡಿದರೆ ಕೈಗಾರೀಕರಣಕ್ಕೆ ಬಹಳ ದೊಡ್ಡ ಕೊಡುಗೆ ನೀಡಬಹುದು ಎಂದು ಸ್ಕಿಲ್ ಇಂಡಿಯಾ ಯೋಜನೆ ಪ್ರಾರಂಭ ಮಾಡಿದರು. ಇರರಲ್ಲಿ ಹಲವಾರು ವಿಧದ ತರಬೇತಿ ನೀಡಿ ಯುವಕರನ್ನು ತಯಾರು ಮಾಡಬಹುದಾಗಿದೆ. ರಾಜ್ಯದಲ್ಲಿ 1.80 ಲಕ್ಷ ಯುವಕರಿಗೆ ಸ್ಕಿಲ್ ಇಂಡಿಯಾ ಅಡಿ ತರಬೇತಿ ನೀಡಲಾಗಿದೆ ಎಂದರು.

ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸಚಿವ ಶಿವರಾಮ್ ಹೆಬ್ಬಾರ್,ಮೊದಲಾದವರು ಉಪಸ್ಥಿತರಿದ್ದರು.

Exit mobile version