ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದ ಹೊರ ಭಾಗದಲ್ಲಿನ ಕಾಲುವೆಗೆ ಕಾಲು ಜಾರಿ ಬಿದ್ದ ಬಾಲಕನೊಬ್ಬ ಮುಳುಗಿ (Youth drowned) ಮೃತಪಟ್ಟಿದ್ದಾನೆ.
ಕಲ್ಲಯ್ಯ ಹಿರೇಮಠ (13) ಮೃತ ಬಾಲಕ ಎಂದು ಗುರುತಿಸಲಾಗಿದೆ. ಮಂಗಳವಾರ (ಫೆ.೨೧) ಶಾಲೆಯಿಂದ ಮನೆಗೆ ಬಂದಿದ್ದ ಬಾಲಕ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಗಂಗಯ್ಯ ಅವರನ್ನು ಭೇಟಿ ಮಾಡಲು ಓಡಿಕೊಂಡೇ ತೆರಳಿದ್ದ. ಈ ವೇಳೆ ಕಾಲು ಜಾರಿದ್ದು, ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಾಲಕ ಬಿದ್ದಿದ್ದಾನೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಆದರೆ, ಎಷ್ಟು ಹೊತ್ತಾದರೂ ಮನೆಗೆ ಬಾರದ ಕಲ್ಲಯ್ಯನನ್ನು ಪೋಷಕರು ಹಾಗೂ ಗ್ರಾಮಸ್ಥರು ರಾತ್ರಿ ಇಡೀ ಹುಡುಕಾಟ ನಡೆಸಿದ್ದರು. ಆದರೆ, ಬುಧವಾರ (ಫೆ.೨೨) ಬೆಳಗ್ಗೆ ಬಾಲಕನ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ಮುಳವಾಡ ಏತ ನೀರಾವರಿ ಯೋಜನೆ ಮುಖ್ಯ ಕಾಲುವೆ ಇದಾಗಿದ್ದು, ನೀರಿನ ಸೆಳೆವು ಹೆಚ್ಚು ಇರುತ್ತದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಒದಿ: CT Ravi: ಮಾಂಸ ತಿಂದು ನಾಗಬನ, ಹನುಮ ದೇಗುಲಕ್ಕೆ ಭೇಟಿ ಕೊಟ್ಟರಾ ಸಿ.ಟಿ ರವಿ?; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್
ಕಲಬುರಗಿಗೆ ಪ್ರವಾಸಕ್ಕೆ ಬಂದಿದ್ದ ಬೀದರ್ ಯುವಕ ನೀರುಪಾಲು
ಕಲಬುರಗಿ: ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೊಬ್ಬ ನಗರದ ಶ್ರೀ ರಾಮತೀರ್ಥ ದೇವಸ್ಥಾನದ ಹಿಂಭಾಗದಲ್ಲಿರುವ ಕಲ್ಲಿನ ಖಣಿಯಲ್ಲಿ ತುಂಬಿದ್ದ ನೀರಿನಲ್ಲಿ ಈಜಲು ಹೋಗಿ ಮೇಲೆ ಬರಲು ಆಗದೇ ಮುಳುಗಿ ಮೃತಪಟ್ಟಿದ್ದಾನೆ.
ಬೀದರ್ ಮೂಲದ ಆಶೀಶ್ ಗುಪ್ತಾ (15) ಮೃತ ವಿದ್ಯಾರ್ಥಿ. ಈತ ಕಲಬುರಗಿಗೆ ಸ್ನೇಹಿತರ ಜತೆಗೆ ಪ್ರವಾಸಕ್ಕೆ ಬಂದಿದ್ದ. ರಾಮತೀರ್ಥ ದೇವಸ್ಥಾನದಲ್ಲಿ ದರ್ಶನ ಪಡೆದ ಸ್ನೇಹಿತರೆಲ್ಲರೂ ಹಿಂಭಾಗದಲ್ಲಿರುವ ಕಲ್ಲಿನ ಖಣಿಯಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ಆಶೀಶ್‌ಗೆ ಈಜಲು ಸಾಧ್ಯವಾಗದೆ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Shobha Karandlaje: ಸಿದ್ದರಾಮಯ್ಯರನ್ನು ಹೊಡೆದುಹಾಕಿ ಎಂಬ ಅಶ್ವತ್ಥನಾರಾಯಣ ಹೇಳಿಕೆ ನೂರಕ್ಕೆ ನೂರು ತಪ್ಪು: ಶೋಭಾ ಕರಂದ್ಲಾಜೆ
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕರೆಸಿ ಮೃತದೇಹವನ್ನು ಹೊರಕ್ಕೆ ತೆಗೆಸಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಶೀಶ್ 9ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.