ಕಾನೂನುಬದ್ಧವಾಗಿಯೇ ಕೆಲಸದ ಸಮಯವನ್ನು 14 ಗಂಟೆಗೆ (14 Hour Workday Bill) ವಿಸ್ತರಿಸಬೇಕು ಎನ್ನುವ ಐಟಿ ಕಂಪನಿಗಳ (karnataka IT company) ಪ್ರಸ್ತಾವನೆಯನ್ನು ಪರಿಗಣಿಸಿ 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆಗೆ (Karnataka Shops and Commercial Establishments Act) ತಿದ್ದುಪಡಿ ತರಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಪ್ರಸ್ತುತ ಕಾರ್ಮಿಕ ಕಾನೂನುಗಳು 12 ಗಂಟೆಗಳ ಕೆಲಸದ ಸಮಯವನ್ನು ಅನುಮತಿಸುತ್ತವೆ. ಇದು 10 ಗಂಟೆಗಳ ಜೊತೆಗೆ 2 ಗಂಟೆಗಳ ಹೆಚ್ಚುವರಿ ಸಮಯವನ್ನು ಒಳಗೊಂಡಿರುತ್ತದೆ. ಸರ್ಕಾರದ ಹೊಸ ಪ್ರಸ್ತಾವನೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ತಿದ್ದುಪಡಿಯು ಪ್ರಸ್ತುತ ಮೂರು ಶಿಫ್ಟ್ ಇರುವಲ್ಲಿ ಎರಡು ಶಿಫ್ಟ್ ವ್ಯವಸ್ಥೆ ಜಾರಿಯಾಗಲಿದೆ. ಇದು ಮೂರನೇ ಒಂದು ಭಾಗದಷ್ಟು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಬಳಿಕ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಘ (ನಾಸ್ಕಾಮ್) ತಾನು ಈ ಕಾಯಿದೆಯನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದೆ.
ವೈದ್ಯರಿಂದಲೂ ಖಂಡನೆ
ಈ ತಿದ್ದುಪಡಿ ಮಸೂದೆ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಮೂಲದ ವೈದ್ಯ ಡಾ. ಸುಧೀರ್ ಕುಮಾರ್, ಅತಿಯಾದ ಕೆಲಸದಿಂದ ಉಂಟಾಗುವ ಅಸಂಖ್ಯಾತ ಅಡ್ಡಪರಿಣಾಮಗಳ ಬಗ್ಗೆ ತಿಳಿಸಿದ್ದಾರೆ. ಕೇವಲ 24 ಗಂಟೆಗಳಿರುವ ದಿನದಲ್ಲಿ ನೌಕರರು 14 ಗಂಟೆಗಳ ಕಾಲ ಕೆಲಸ ಮಾಡಿದರೆ ಹೆಚ್ಚುವರಿ 1-2 ಗಂಟೆಗಳ ಸಮಯವನ್ನು ಪ್ರಯಾಣಕ್ಕಾಗಿ ಮೀಸಲಿಡುತ್ತಾರೆ. ಇದರಿಂದ ಅವರು ನಿದ್ರೆ ಮತ್ತು ವ್ಯಾಯಾಮಕ್ಕೆ ಸಮಯವನ್ನು ಹೇಗೆ ಹೊಂದಿಸಿಕೊಳ್ಳುವುದು, ಕುಟುಂಬಕ್ಕೆ ಸಮಯವನ್ನು ಹೇಗೆ ಕೊಡುವುದು ಎಂದು ಪ್ರಶ್ನಿಸಿದ್ದಾರೆ.
ಆರೋಗ್ಯಕರ ಜೀವನಕ್ಕೆ ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ಅಗತ್ಯವಿರುತ್ತದೆ. 6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಜನರು ಅಧಿಕ ತೂಕ, ಬೊಜ್ಜು, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್, ಮಾನಸಿಕ ಅಸ್ವಸ್ಥತೆ ಮತ್ತು ಅಕಾಲಿಕ ಮರಣದ ಅಪಾಯವನ್ನು ಹೊಂದಿರುತ್ತಾರೆ. ದಿನಕ್ಕೆ 14 ಗಂಟೆಗಳ ಕಾಲ ಕೆಲಸ ಮಾಡುವುದು ಅನಿವಾರ್ಯವಾಗಿ ನಿದ್ರೆಯ ತೀವ್ರ ಅಭಾವ ಮತ್ತು ಈ ಸಂಬಂಧಿತ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ.
ಆರೋಗ್ಯದ ಮೇಲೆ ಪರಿಣಾಮ ಏನು?
ಮಿತಿ ಮೀರಿದ ಕೆಲಸದ ಸಮಯವು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಅತಿಯಾದ ಕೆಲಸವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅತಿಯಾದ ಕೆಲಸವು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒತ್ತಡದ ಹಾರ್ಮೋನ್. ಇದರಿಂದ ಮೆದುಳಿಗೆ ಮಂಜು ಅವರಿಸಿದಂತಾಗುವುದು, ಅಧಿಕ ರಕ್ತದೊತ್ತಡ ಮತ್ತು ಇತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ವಿಶ್ವ ಆರೋಗ್ಯ ಸಂಸ್ಥೆ (WHO) 2016ರಲ್ಲಿ ಪಾರ್ಶ್ವವಾಯು, ರಕ್ತಕೊರತೆ, ಹೃದ್ರೋಗದಿಂದ 7,45,000 ಜನರ ಸಾವಿಗೆ ದೀರ್ಘಾವಧಿಯ ಕೆಲಸದ ಸಮಯವು ಕಾರಣ ಎಂದು ಹೇಳಿದೆ. ಈ ಅಂಕಿ ಅಂಶಗಳ ಪ್ರಮಾಣ 2000 ಇಸವಿಯಿಂದ ಶೇ. 29ರಷ್ಟು ಹೆಚ್ಚಳವಾಗಿದೆ. ವಾರಕ್ಕೆ 55 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ವ್ಯಕ್ತಿಗಳು ಇದನ್ನು ಎದುರಿಸುತ್ತಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ವಾರಕ್ಕೆ 35ರಿಂದ 40 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಹೋಲಿಸಿದರೆ ಇವರಲ್ಲಿ ಶೇ. 35ಕ್ಕಿಂತ ಹೆಚ್ಚಿನ ಮಂದಿಗೆ ಪಾರ್ಶ್ವವಾಯು ಅಪಾಯ ಮತ್ತು ಶೇ. 17ರಷ್ಟು ಮಂದಿಗೆ ಹೃದಯ ಕಾಯಿಲೆಯಿಂದ ಸಾಯುವ ಅಪಾಯ ಹೆಚ್ಚಾಗಿದೆ.
ಜಾಗತಿಕ ಸಮಸ್ಯೆ
ಅತಿಯಾಗಿ ಕೆಲಸ ಮಾಡುವುದು ಜಾಗತಿಕ ಸಮಸ್ಯೆಯಾಗಿದ್ದರೂ ಏಷ್ಯಾದ ದೇಶಗಳಲ್ಲಿ ವಿಶೇಷವಾಗಿ ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಅಧಿಕಾರಿಗಳು ಈ ಬಗ್ಗೆ ಗಮನಾರ್ಹ ಕಳವಳ ವ್ಯಕ್ತಪಡಿಸಿದ್ದಾರೆ. ಜಪಾನ್‌ನಲ್ಲಿ, ‘ಕರೋಶಿ’ ಎಂದರೆ “ಅತಿಯಾದ ಕೆಲಸದಿಂದ ಸಾವು” ಎಂಬ ಪದವು ಈ ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ: Union Budget 2024 : ಬಜೆಟ್ನಲ್ಲಿ ದೊಡ್ಡ ಮೊತ್ತ ಮೀಸಲಾಗಿರುವುದು ಸಾಲದ ಬಡ್ಡಿ ಕಟ್ಟಲು!
ಸ್ಟ್ರೋಕ್ ಮತ್ತು ಹೃದಯ ರಕ್ತನಾಳದ ಕಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಅತಿಯಾದ ಕೆಲಸ ಕಾರಣ ಎನ್ನುತ್ತಾರೆ ಸಂಶೋಧಕರು. ಅತಿಯಾದ ಕೆಲಸವು ಸೆರೆಬ್ರೊವಾಸ್ಕುಲರ್, ಹೃದಯ ರಕ್ತನಾಳದ ಕಾಯಿಲೆಗಳು, ಟೈಪ್ 2 ಮಧುಮೇಹ ಮತ್ತು ಹೃದ್ರೋಗ, ಕೆಲವು ಕ್ಯಾನ್ಸರ್‌ಗಳು, ಸಂಧಿವಾತ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆ ಮತ್ತು ಇತರ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚು.