Site icon Vistara News

ಸೊರಗಿದ ಸೊರಬ : 4 ವರ್ಷ 8 ತಿಂಗಳಲ್ಲಿ 14 ತಹಸೀಲ್ದಾರ್‌ ವರ್ಗಾವಣೆ: ಕುಮಾರ್ ಬಂಗಾರಪ್ಪ ಊರಲ್ಲಿ ಅಷ್ಟೊಂದು ಕಿರಿಕಿರಿನಾ?

soraba MLA kumar Bangarappa

ಶಿವಮೊಗ್ಗ: ಕುಮಾರ್‌ ಬಂಗಾರಪ್ಪ ಅವರು ಶಾಸಕರಾಗಿರುವ ಸೊರಬದಲ್ಲಿ ಅವರ ಅಧಿಕಾರಾವಧಿಯ ಕಳೆದ ೪ ವರ್ಷ ೮ ತಿಂಗಳಲ್ಲಿ ೧೪ ತಹಸೀಲ್ದಾರರ ವರ್ಗಾವಣೆಯಾಗಿ ಒಂದು ಐತಿಹಾಸಿಕ ನಕಾರಾತ್ಮಕ ದಾಖಲೆ ನಿರ್ಮಾಣಗೊಂಡಿದೆ!

ಶನಿವಾರ ಸರ್ಕಾರ ಹೊರಡಿಸಿದ ಆದೇಶದಲ್ಲಿ ಹಾಲಿ ತಹಸೀಲ್ದಾರ್‌ ಡಾ. ಮೋಹನ್ ಭಸ್ಮೆ ಎತ್ತಂಗಡಿಯಾಗಿದ್ದು, ಅವರನ್ನು ಧಾರವಾಡ ತಹಸೀಲ್ದಾರ್ ಆಗಿ ವರ್ಗಾಯಿಸಲಾಗಿದೆ. ಇದು ಈ ಅವಧಿಯ ೧೪ನೇ ತಹಸೀಲ್ದಾರ್‌ ವರ್ಗಾವಣೆ.

ಸೊರಬದಲ್ಲಿ ಕೆಲಸ ಮಾಡೋಕೆ ಅಧಿಕಾರಿಗಳ ಹಿಂದೇಟು ಹಾಕುತ್ತಿದ್ದು, ಶಾಸಕ ಕುಮಾರ್ ಬಂಗಾರಪ್ಪ ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಇದಲ್ಲದೆ ಇವರ ಅವಧಿಯಲ್ಲಿ ನಾಲ್ವರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಬದಲಾವಣೆ ಆಗಿದೆ. ಗ್ರೇಡ್-2 ತಹಸೀಲ್ದಾರರೂ ವರ್ಗವಾಗುತ್ತಿದ್ದಾರೆ.

ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಸೊರಬ ತಾಲೂಕಿಗೆ ಇದ್ದು, ಅಧಿಕಾರಿಗಳ ವರ್ಗಾವಣೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳದೆ ಜನ ನಿತ್ಯ ಅಲೆದು ಹೈರಾಣಾಗಿದ್ದಾರೆ.

ತಹಸೀಲ್ದಾರ್‌ ವರ್ಗಾವಣೆ ಆದೇಶ

ತಾಲೂಕಿನ ಕಾರ್ಯಾಂಗದ ಮುಖ್ಯಸ್ಥರು ಎನಿಸಿಕೊಳ್ಳುವ ತಹಸೀಲ್ದಾರ್ ಕನಿಷ್ಠ 2-3 ವರ್ಷವಾದರೂ ಒಂದು ಸ್ಥಳದಲ್ಲಿ ಕೆಲಸ ನಿರ್ವಹಿಸಿದರೆ ಆ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಜನರ ಕೆಲಸಗಳಿಗೆ ಒದಗಿಸಲು ಸಾಧ್ಯ. ಆದರೆ, ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ವರ್ಗಾವಣೆಯಲ್ಲಿ ತೊಡಗಿದ್ದು, ಬಂದ ಹಲವಾರು ತಹಸೀಲ್ದಾರರು ಸ್ವಾತಂತ್ರೋತ್ಸವದ ಧ್ವಜ ಹಾರಿಸಲಿಕ್ಕೂ ಸಾಧ್ಯವಾಗದೆ ಹೊರಹೋಗಿದ್ದಾರೆ. ಜನರು ತಮ್ಮ ಕೆಲಸಗಳಾಗದೇ ನಿನ್ನ ಕಚೇರಿ ಅಲೆಯುತ್ತಿದ್ದಾರೆ.

ಖಾತೆ ಬದಲಾವಣೆ, ಬಗರ್ ಹುಕುಂ ಮಂಜೂರಾತಿ, ಆಶ್ರಯ ನಿವೇಶನಗಳ ಹಂಚಿಕೆ, ಭೂಸುಧಾರಣೆ ಅರ್ಜಿ ವಿಲೇವಾರಿ, ಸಕಾಲ ದೃಢೀಕರಣ, ಭೂವ್ಯಾಜ್ಯಗಳ ಇತ್ಯರ್ಥ, ದಾರಿ ಸಮಸ್ಯೆ ವ್ಯಾಜ್ಯ, ದೇವಾಲಯಗಳ ಆಸ್ತಿ ಸಂರಕ್ಷಣೆ, ಪಡಿತರ ಚೀಟಿ ವಿತರಣೆ, ಮತದಾರರ ಪಟ್ಟಿ ಪರಿಷ್ಕರಣೆ, ತತ್ಕಾಲ ಪೋಡಿ, ಹದ್ದುಬಸ್ತು, 11ಇ ನಕ್ಷೆ, ನೆರೆಹಾನಿ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನೇಕ ದೃಢೀಕರಣ ಸೇರಿದಂತೆ ತಾಲೂಕಿನ ಬಹುಪಾಲು ಕೆಲಸಗಳು ನನೆಗುದಿಗೆ ಬಿದ್ದಿವೆ.

ಖಾತೆ ಬದಲಾವಣೆ, ಬಗರ್ ಹುಕುಂ ಮಂಜೂರಾತಿ, ಪಹಣಿ ತಿದ್ದುಪಡಿ, ಭೂವ್ಯಾಜ್ಯಗಳ ಇತ್ಯರ್ಥ, ಹದ್ದುಬಸ್ತು ಇನ್ನಿತರ ಕೆಲಸಗಳಿಗೆ ಜನ ನಿತ್ಯ ಕಚೇರಿ ಎಡತಾಕುತ್ತಿದ್ದಾರೆ. ತಹಸೀಲ್ದಾರ್ ಭೇಟಿಯಾಗಿ ಸಮಸ್ಯೆ ಹೇಳಿಕೊಂಡು ನಾಳೆ ಇತ್ಯರ್ಥವಾಗುತ್ತದೆ ಎನ್ನುವಷ್ಟರಲ್ಲಿ ಬೆಳಗ್ಗೆ ಮತ್ತೊಬ್ಬ ತಹಸೀಲ್ದಾರ್ ಆಗಮನವಾಗುತ್ತಿದೆ. ಜನರ ಕೆಲಸಗಳು ಗಗನಕುಸುಮವಾಗುತ್ತಿವೆ.

ಸೊರಬ ತಾಲೂಕು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಕ್ಷೇತ್ರ, ಹಿಂದುಳಿದ ತಾಲೂಕು. ಅಲ್ಲಿ ಜನಪರ ಕೆಲಸ ಮಾಡಿ, ಸಾರ್ಥಕತೆ ಮಾಡಿಕೊಳ್ಳೋಣ ಎಂದು ಉಮೇದಿಯಿಂದ ಬಂದಿದ್ದೆ. ಆದರೆ, ಅಧಿಕಾರ ವಹಿಸಿಕೊಂಡ ನಂತರದಲ್ಲಿ ಯಾಕಾದರೂ ಇಲ್ಲಿ ಬಂದೆ ಎಂದು ವರ್ಗಾವಣೆ ಮಾಡಿಸಿಕೊಂಡೆ ಎನ್ನುತ್ತಾರೆ ವರ್ಗಾವಣೆಗೊಂಡ ಹೆಸರೇಳಲಿಚ್ಛಿಸದ ತಹಸೀಲ್ದಾರ್ ಒಬ್ಬರು. ಸದ್ಯ ಸೊರಬ ತಹಸೀಲ್ದಾರ್ ಸ್ಥಾನ ಖಾಲಿಯಾಗಿದೆ. ಬೇರೆ ಯಾರನ್ನೂ ಇಲ್ಲಿ ಸರ್ಕಾರ ನೇಮಿಸಿಲ್ಲ.

ಇದನ್ನೂ ಓದಿ | Soraba News | ಕುಮಾರ್‌ ಬಂಗಾರಪ್ಪಗೆ ಬಿಜೆಪಿ ಟಿಕೆಟ್ ನೀಡಿದರೆ ನಮೋದಿಂದ ಅಭ್ಯರ್ಥಿ ಕಣಕ್ಕೆ; ಪಾಣಿ ರಾಜಪ್ಪ ಎಚ್ಚರಿಕೆ

Exit mobile version