ಶಿರಸಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿಯ ಹೊಸಳ್ಳಿಯಲ್ಲಿ 1401ನೇ ಇಸವಿಯ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಇತಿಹಾಸಕಾರ ಲಕ್ಷ್ಮೀಶ ಸೋಂದಾ ಅವರ ತಂಡ ಈ ಅಪ್ರಕಟಿತ ಶಾಸನದ ಕಾಲಮಾನ ಹಾಗೂ ಸ್ವರೂಪದ ಮೇಲೆ ಬೆಳಕು ಚೆಲ್ಲಿದ್ದಾರೆ.
ಈ ವೀರಗಲ್ಲು ನೆಲದ ಅಡಿಯಲ್ಲಿ ಹೂತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಅಭ್ಯಸಿಸಿದಾಗ ಇದೊಂದು ವೀರಗಲ್ಲು ಶಾಸನವಾಗಿದ್ದು ಕ್ರಿ.ಶ. 1401ರದ್ದು ಎಂದು ಗೊತ್ತಾಗುತ್ತದೆ. ವಿಶೇಷವೆಂದರೆ ಆರುನೂರು ವರ್ಷಗಳ ಹಿಂದೆಯೇ ನೆಬ್ಬೂರು ಪ್ರದೇಶ ಅದೇ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬ ಅಪೂರ್ವ ಸಂಗತಿ ಈ ಶಾಸನದಿಂದ ತಿಳಿಯುತ್ತದೆ ಎಂದು ಸೋಂದಾ ತಿಳಿಸಿದ್ದಾರೆ.
ಆಸವರಸ ಒಡೆಯರು ಸಪ್ತಗೋವೆಯ (ಸಪ್ತಕೊಂಕಣ) ರಾಜ್ಯವನ್ನಾಳುವ ಸಂದರ್ಭದಲ್ಲಿ ಬಳ್ಳಿಗಾವಿಯ ಅರಸು ಶಷ್ಠಿರಾಯನಿಗೂ ಮತ್ತು ನಾರಣಪ್ಪ ದಂಡನಾಯಕರಿಗೂ ನಡೆದ ಯುದ್ಧದಲ್ಲಿ ನೆಬ್ಬೂರಿನ ತಾಳೆಯ ನಾಯಕನು ರಣರಂಗದಲ್ಲಿ ಕಾದಾಡಿ ಎದುರಾದ ವೈರಿಗಳನ್ನು ಗೆದ್ದು ರಣದೊಳಗೆ ಮಡಿದು ವೀರ ಸ್ವರ್ಗವನ್ನೇರಿದ ಸಂಗತಿಯನ್ನು ಈ ವೀರಗಲ್ಲು ಶಾಸನ ತಿಳಿಸುತ್ತದೆ.
ಶಾಸನದ ಸುತ್ತ ಮಹಾಸತಿ ಕಲ್ಲುಗಳೂ ಪತ್ತೆಯಾಗಿವೆ. ವೀರಗಲ್ಲಿನ ಮೊದಲ ಸಾಲಿನಲ್ಲಿ ಯುದ್ಧದ ಚಿತ್ರವಿದೆ. ಎರಡನೇ ಸಾಲಿನಲ್ಲಿ ವೀರ ಯೋಧನನ್ನು ವೈರಿಗಳು ಖಡ್ಗದಿಂದ ಇರಿಯುತ್ತಿರುವ ಚಿತ್ರ, ಮೂರನೇ ಸಾಲಿನಲ್ಲಿ ದೇವತೆಗಳು ವೀರನ್ನು ಸ್ವರ್ಗಕ್ಕೆ ಒಯ್ಯುತ್ತಿರುವ ಚಿತ್ರ, ನಾಲ್ಕನೇ ಸಾಲಿನಲ್ಲಿ ವೀರ ಸ್ವರ್ಗಸ್ಥನಾದ ಚಿತ್ರ ಮತ್ತು ಈ ಕುರಿತ ಬರಹಗಳಿವೆ. ಇನ್ನೂ ಮೇಲ್ಗಡೆ ಸೂರ್ಯ, ಚಂದ್ರರ ಚಿತ್ರವಿದ್ದು ಸೂರ್ಯ ಚಂದ್ರ ಇರುವವರೆಗೂ ಈ ಯೋಧನ ಕೀರ್ತಿ ಅಮರವಾಗಿರುತ್ತದೆ ಎಂಬುದರ ಸಂಕೇತವಾಗಿದೆ ಎನ್ನುತ್ತಾರೆ ಇತಿಹಾಸಕಾರ ಲಕ್ಷ್ಮೀಶ ಸೋಂದಾ.
ಇದನ್ನೂ ಓದಿ: Video: ಹಂಪಿ ಸೌಂದರ್ಯಕ್ಕೆ ಮನಸೋತ BJP ಅಧ್ಯಕ್ಷ ಜೆ.ಪಿ. ನಡ್ಡಾ: ₹50 ನೋಟಿನೊಂದಿಗೆ ಫೋಟೊಗೆ ಪೋಸ್ ನೀಡಿದ ಕುಟುಂಬ