ಅನಾಥಾಲಯಗಳಲ್ಲಿ ಇರುವ ಮಕ್ಕಳನ್ನು, ಅಗತ್ಯ ಇರುವ ಕುಟುಂಬಗಳಿಗೆ, ಪಾಲಕರಿಗೆ ದತ್ತು ಕೊಡಲಾಗುತ್ತದೆ. ಮಕ್ಕಳಿಲ್ಲದವರು, ಮಕ್ಕಳಿದ್ದೂ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಲುಹುವವರನ್ನು ಅನಾಥಾಲಯಗಳೂ ಹುಡುಕುತ್ತಿರುತ್ತವೆ. ಹೀಗೆ ಕರ್ನಾಟಕದಲ್ಲಿ ಅನಾಥ ಕಂದಮ್ಮಗಳನ್ನು ಆಸಕ್ತ ಕುಟುಂಬಗಳಿಗೆ ದತ್ತು ನೀಡುತ್ತಿರುವ ಅನಾಥಾಲಯಗಳಲ್ಲಿ ಕಳೆದ 8 ವರ್ಷಗಳಲ್ಲಿ 150 ಮಕ್ಕಳು ಮೃತಪಟ್ಟಿದ್ದಾಗಿ ವರದಿಯಾಗಿವೆ. ದಿನಕ್ಕೆ ಒಂದರಂತೆ ಮಗುವನ್ನು ದತ್ತು ನೀಡುತ್ತಿರುವ ಈ ಸಂಸ್ಥೆಗಳಲ್ಲಿ 20 ದಿನಗಳಿಗೆ ಒಂದರಂತೆ ಮಕ್ಕಳು ಅಸುನೀಗುತ್ತಿದ್ದಾರೆ ಎನ್ನುತ್ತವೆ ಅಧಿಕೃತ ಅಂಕಿಗಳು.
ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿರುವ, 2014-2022ರ ದೇಶವಾರು ದತ್ತಾಂಶಗಳನ್ನು ವಿಶ್ಲೇಷಿಸಿದಾಗ, ಒಟ್ಟಾರೆ ದೇಶಾದ್ಯಂತ ದಿನಕ್ಕೆ 10 ಅನಾಥ ಮಕ್ಕಳು ಕುಟುಂಬಗಳ ಆಸರೆಗೆ ಸಲ್ಲುತ್ತಿವೆ. ಆದರೆ ಪ್ರತಿ ಮೂರು ದಿನಗಳಿಗೆ ಎರಡು ಮಕ್ಕಳು ಕೊನೆಯುಸಿರೆಳೆಯುತ್ತಿವೆ ಎಂದು ಹೇಳಲಾಗಿದೆ. ಇಷ್ಟು ವರ್ಷಗಳ ಅವಧಿಯಲ್ಲಿ ಒಟ್ಟಾರೆ 27,೦೦೦ ಕ್ಕೂ ಹೆಚ್ಚಿನ ಮಕ್ಕಳು ಪಾಲಕರ ಮಡಿಲು ಸೇರಿದ್ದಾರೆ. ಇದೇ ಅವಧಿಯಲ್ಲಿ 2೦೦೦ಕ್ಕೂ ಹೆಚ್ಚಿನ ಮಕ್ಕಳು ಜೀವ ಕಳೆದುಕೊಂಡಿದ್ದಾರೆ.(ಇದು ದೇಶವಾರು ಲೆಕ್ಕಾಚಾರ)
ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಕಾರಾ) ಮಾಜಿ ಮುಖ್ಯಸ್ಥರಾದ ಡಾ. ಅಲೊಮೊ ಲೊಬೊ ಅವರ ಪ್ರಕಾರ, “ಈ ಪೈಕಿ ಹೆಚ್ಚಿನ ಸಾವುಗಳು ಸಂಭವಿಸುತ್ತಿರುವುದು ಎರಡು ವರ್ಷಗಳ ಒಳಗಿನ ಮಕ್ಕಳದ್ದು. ನವಜಾತ ಶಿಶುಗಳು ಅನಾಥಲಯಕ್ಕೆ ಬರುವಾಗಲೇ ಆರೋಗ್ಯ ಸಮಸ್ಯೆಯಲ್ಲಿರುತ್ತವೆ. ಕೆಲವೊಮ್ಮೆ ಆ ಶಿಶುಗಳಿಗೆ ಪ್ರತ್ಯೇಕ ಆರೈಕೆಯ ಅಗತ್ಯವಿರುತ್ತದೆ. ಅಂಥ ಮಕ್ಕಳನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ ದೇಶದಲ್ಲಿರುವ ಶಿಶುಮರಣದ ಪ್ರಮಾಣಕ್ಕೆ ಹೋಲಿಸಿದರೆ ನಮ್ಮಲ್ಲಿನ ಶಿಶುಮರಣದ ಪ್ರಮಾಣ ಹೆಚ್ಚೇನಿಲ್ಲ”. ಗ್ರಾಮೀಣ ಭಾಗದಲ್ಲಿರುವ ಅನಾಥಮಕ್ಕಳ ದತ್ತು ಕೇಂದ್ರಗಳಲ್ಲಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಸೂಕ್ತ ಆರೈಕೆ ನೀಡುವಂಥ ವ್ಯವಸ್ಥೆ ಇರುವುದಿಲ್ಲ. ಕೇಂದ್ರಗಳಿಗೆ ಬರುವ ಪ್ರತಿಯೊಂದು ಮಗುವನ್ನೂ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳು ನಡೆಯುತ್ತವೆ. ಆದರೆ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ ಎಂಬುದು ಅವರ ನೋವಿನ ಮಾತುಗಳು.
2014-2022ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ (5,752) ದತ್ತು ಸ್ವೀಕಾರವಾಗಿದೆ. ಅದರ ನಂತರ ಹೆಚ್ಚಿನ ದತ್ತು ಸ್ವೀಕಾರ ದಾಖಲಾಗಿರುವುದು ಕರ್ನಾಟಕದಲ್ಲಿ (2,136). ನಂತರದ ಸ್ಥಾನ ತಮಿಳುನಾಡು, ಒಡಿಶಾ ಮತ್ತು ಉತ್ತರಪ್ರದೇಶಗಳದ್ದು. ದೇಶದಲ್ಲಿ ಒಟ್ಟಾರೆಯಾಗಿ ನಡೆದಿರುವ 27,೦೦೦ಕ್ಕಿಂತ ಹೆಚ್ಚಿನ ದತ್ತು ಸ್ವೀಕಾರಗಳಲ್ಲಿ, ಈ ಐದು ರಾಜ್ಯಗಳಲ್ಲೇ ಸುಮಾರು 14,3೦೦ ಮಕ್ಕಳಿಗೆ ಮನೆಯ ಆಶ್ರಯ ದೊರೆತಿದೆ.
ಶಿಶುಗಳ ಸಾವಿನ ಪ್ರಮಾಣವೂ ಕರ್ನಾಟಕದಲ್ಲಿ ಹೆಚ್ಚೇಇದ್ದು, ಇಪ್ಪತ್ತು ದಿನಗಳಿಗೆ ಒಂದರಂತೆ, ಕಳೆದ ಎಂಟು ವರ್ಷಗಳಲ್ಲಿ ಸುಮಾರು 150 ಮಕ್ಕಳು ಸಾವನ್ನಪ್ಪಿದ್ದಾರೆ. ಕರ್ನಾಟಕವಲ್ಲದೆ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ರಾಜಸ್ಥಾನಗಳಲ್ಲೂ ಅನಾಥ ಮಕ್ಕಳ ಮರಣ ಹೆಚ್ಚಿನ ಪ್ರಮಾಣದಲ್ಲಿದೆ. ಈ ಐದು ರಾಜ್ಯಗಳಲ್ಲಿ ಒಟ್ಟಾರೆಯಾಗಿ ಶೇ. 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮರಣ ಕಂಡುಬಂದಿದೆ.
ಅನಾಥಾಲಯಗಳಿಗೆ ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಗಳು, ರಾಜ್ಯ ಸರಕಾರಗಳು ಮತ್ತು ಕಾರಾ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೋಡುತ್ತಿದ್ದು, ಮಕ್ಕಳ ಹಕ್ಕು ರಕ್ಷಣೆಯ ರಾಷ್ಟ್ರೀಯ ಆಯೋಗವೂ ಈ ಬಗ್ಗೆ ನಿಗಾ ವಹಿಸುತ್ತಿದೆ. ಇದಕ್ಕಾಗಿ ಆಯೋಗವು ರಿಯಲ್‌ಟೈಮ್ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿ ಪಡಿಸಿದ್ದು, ದೇಶದೆಲ್ಲೆಡೆ ಇಂಥ ಅನಾಥಾಲಯಗಳ ಮೇಲೆ ನಿಗಾ ವಹಿಸಲು ಅನುಕೂಲವಾಗಿದೆ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Bharat Jodo Yatra| ಭಾರತ್ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ; ಕೆ ಸಿ ವೇಣುಗೋಪಾಲ್ಗೆ ಗಾಯ