ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ೧೫ ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಪ್ರಕಟಿಸಿದ್ದ ತಾತ್ಕಾಲಿಕ ಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಸರ್ಕಾರಿ ಉದ್ಯೋಗದ ಸಂತಸದಲ್ಲಿದ್ದ ಅಭ್ಯರ್ಥಿಗಳಿಗೆ ನಿರಾಸೆಯುಂಟಾಗಿದೆ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಅಭ್ಯರ್ಥಿಗಳ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಕೆಯಲ್ಲಿ ಗೊಂದಲ ಉಂಟಾದ ಕಾರಣ ೧:೧ ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
1:2ರ ಅನುಪಾತದ ಆಯ್ಕೆಪಟ್ಟಿಯಲ್ಲಿ ಹೆಸರಿದ್ದರೂ, ಮುಂದಿನ ಹಂತದಲ್ಲಿ ಅರ್ಹತೆ ಇದ್ದರೂ ಮೀಸಲಾತಿ ಗೊಂದಲದಿಂದ ೧:೧ ರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಪ್ರಕಟವಾಗದ ಉಡುಪಿಯ ಯಡತಾಡಿ ಗ್ರಾಮದ ಅನಿತಾ ಸೇರಿ 40ಕ್ಕೂ ಅಧಿಕ ಮಹಿಳಾ ಹುದ್ದೆ ಆಕಾಂಕ್ಷಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ನೇತೃತ್ವದ ನ್ಯಾಯಪೀಠವು ತಡೆಯಾಜ್ಞೆ ನೀಡಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15 ಸಾವಿರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಳೆದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಅರ್ಜಿ ಸ್ವೀಕರಿಸಿತ್ತು. ಮೇ 21 ಹಾಗೂ 22 ರಂದು ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದರು. ಈಗಾಗಲೇ 1:5ರಂತೆ ದಾಖಲಾತಿ ಪರಿಶೀಲನೆ ಕೂಡ ನಡೆದಿದೆ.
ಇದನ್ನೂ ಓದಿ | Namma clinic | ನಮ್ಮ ಕ್ಲಿನಿಕ್ ಬಗ್ಗೆ ವೈದ್ಯರ ನಿರಾಸಕ್ತಿ, 3 ತಿಂಗಳಿಂದ ನೇಮಕಾತಿ ಪ್ರಕ್ರಿಯೆಗೆ ಝೀರೋ ರೆಸ್ಪಾನ್ಸ್!