ಬೆಂಗಳೂರು: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, (Siddaramaiah) ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಎಂಟು ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಸೋಮವಾರದಿಂದ ಬುಧವಾರದವರೆಗೆ (ಮೇ 22ರಿಂದ ಮೇ 24) ಹದಿನಾರನೇ ವಿಧಾನಸಭೆ ಅಧಿವೇಶನ (Assembly session) ನಡೆಯಲಿದೆ, ಬೆಳಗ್ಗೆ 11.15ರ ಹೊತ್ತಿಗೆ ಅಧಿವೇಶನ ಆರಂಭವಾಯಿತು.
ಮೊದಲ ಎರಡು ದಿನಗಳ ಕಾಲ ಎಲ್ಲ ಶಾಸಕರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಮೂರನೇ ದಿನ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಶಾಸಕರಿಗೆ ಪ್ರಮಾಣವಚನ ಬೋಧಿಸುವ ಜವಾಬ್ದಾರಿಯನ್ನು ಹಿರಿಯ ಶಾಸಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರು ವಹಿಸಿಕೊಂಡಿದ್ದಾರೆ. ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ.
ಈ ನಡುವೆ, ಶಾಸಕರಿಗೆ ಪ್ರಮಾಣವಚನ ಬೋಧಿಸುವ ಹಂಗಾಮಿ ಸ್ಪೀಕರ್ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದರು. ಇದು ರಾಜಭವನದಲ್ಲಿ ನಡೆಯುವ ಪ್ರಕ್ರಿಯೆ. ಅದಾದ ಬಳಿಕ ವಿಧಾನಸಭೆಯಲ್ಲಿ ಶಾಸಕರಿಗೆ ಪ್ರಮಾಣವಚನ ಬೋಧನೆ ಆರಂಭಗೊಂಡಿತು. ಎಲ್ಲ ಶಾಸಕರಿಗೆ ಪ್ರತ್ಯೇಕವಾಗಿ ಪ್ರಮಾಣ ವಚನ ಬೋಧನೆ ನಡೆಯಲಿದೆ. ಹಾಗಾಗಿ ಇದು ಎರಡು ದಿನಗಳ ಕಾಲ ನಡೆಯಲಿದೆ.
ಇದಾದ ನಂತರ ಮೇ 24ರಂದು ನೂತನ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಅದರ ನಡುವೆ ಪ್ರತಿಪಕ್ಷ ನಾಯಕರ ಆಯ್ಕೆಯೂ ನಡೆದು ಅಧಿವೇಶನ ಆರಂಭವಾಗಬೇಕಾಗುತ್ತದೆ. ಮೇ 26ರಂದು ರಾಜ್ಯ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದರೊಂದಿಗೆ ಅಧಿಕೃತವಾಗಿ ಕಲಾಪಗಳು ಶುರುವಾಗುವ ಸಾಧ್ಯತೆ ಇದೆ.
ಶಾಸಕರ ಆಗಮನ
ರಾಜ್ಯದ ಎಲ್ಲ ಕಡೆಯ ಶಾಸಕರು ಅತ್ಯಂತ ಉತ್ಸಾಹದಿಂದ ವಿಧಾನಸೌಧಕ್ಕೆ ಆಗಮಿಸುತ್ತಿದ್ದಾರೆ. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣಯ್ಯ ಅವರು ಎತ್ತಿನಗಾಡಿ ಏರಿ ಬಂದಿದ್ದು ವಿಶೇಷವಾಗಿತ್ತು. ಅವರಿಗೆ ಶಾಸಕರಾದ ರವಿ ಗಾಣಿಗ, ಚಲುವರಾಯಸ್ವಾಮಿ ಅವರು ಸಾಥ್ ನೀಡಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಒಲ್ಲೆ ಎಂದರಾ ಜಯಚಂದ್ರ?
ರಾಜ್ಯ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ಗೊಂದಲದಲ್ಲಿದೆ. ಹಿರಿಯ ನಾಯಕರೆಲ್ಲ ಸಚಿವ ತಮಗೆ ಆ ಹುದ್ದೆ ಬೇಡ ಎನ್ನುತ್ತಿರುವುದು ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆರ್.ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದು, ಅವರು ಶಾಸಕರಿಗೆ ಪ್ರಮಾಣವಚನ ಬೋಧಿಸುವಷ್ಟಕ್ಕೇ ತಮ್ಮ ಕೆಲಸ ಸೀಮಿತ ಎಂದಿದ್ದಾರಂತೆ.
ಈ ನಡುವೆ, ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರು ತಾವೂ ಆಸಕ್ತರಾಗಿಲ್ಲ ಎಂದಿದ್ದಾರೆ. ಸ್ಪೀಕರ್ ಅವರ ಸ್ಥಾನಕ್ಕೆ ನನ್ನ ಹೆಸರು ಪ್ರಸ್ತಾಪ ಆಗಿದ್ದು ಗೊತ್ತಿಲ್ಲ. ಕಾನೂನು ಪದವಿ ಪಡೆದವರು ಸಾಕಷ್ಟು ಜನ ಹಿರಿಯರು ಇದ್ದಾರೆ. ನಾನು ಮಾತ್ರ ಒಬ್ಬನೇ ಅಲ್ಲ ಎಂದಿದ್ದಾರೆ.
ಇದನ್ನೂ ಓದಿ: DK Shivakumar: ನಾನು ಬಂಗಾರಪ್ಪ ಶಿಷ್ಯ, ಎಸ್ಸೆಂ ಕೃಷ್ಣ ಶಿಷ್ಯನಲ್ಲ ಎಂದು ಡಿಕೆಶಿ ಹೇಳಿದ್ದೇಕೆ?