ಅಂಕೋಲಾ: ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ಸಾಕಿಕೊಂಡಿದ್ದ ನಾಯಿಮರಿಗಳು ಈಗ ದೇಶ ಸೇವೆ ಮಾಡಲು ಭಾರತೀಯ ಸೇನೆಗೆ ಹೊರಟಿವೆ. ರಾಘವೇಂದ್ರ ಭಟ್ ಎಂಬುವವರು ಸಾಕಿದ್ದ ಬೆಲ್ಜಿಯನ್ ಮೆಲಿನೋಯ್ಸ್ (Belgian Malinois) ತಳಿಯ 17 ನಾಯಿ ಮರಿಗಳನ್ನು ಸೇನೆಯ ಕಮಾಂಡೋ ಹಾಗೂ ಜವಾನರು ಆಗಮಿಸಿ, ಎಸಿ ಬಸ್‌ನಲ್ಲಿ ಅಸ್ಸಾಂಗೆ ಕೊಂಡೊಯ್ದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿರುವ ರಾಘವೇಂದ್ರ ಭಟ್ ಅವರು, 25 ವರ್ಷಗಳಿಂದ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ. ಈ ಹಿಂದೆ ಸಾಕಿದ್ದ ಬೆಲ್ಜಿಯನ್ ಮೆಲಿನೋಯ್ಸ್ ತಳಿಯ ನಾಯಿಗಳು, ಬೆಂಗಳೂರಿನ ಪೊಲೀಸ್ ಇಲಾಖೆ, ಕಾರ್ಕಳ, ಎಎನ್‌ಎಫ್, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.
ಇದನ್ನೂ ಓದಿ | Compensation: ಕೋಮುದ್ವೇಷಕ್ಕೆ ಬಲಿಯಾಗಿದ್ದ ನಾಲ್ವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ
ಬೆಂಗಳೂರಿನ ಪೊಲೀಸ್ ಇಲಾಖೆಗೆ ನೀಡಿದ್ದ ನಾಯಿಯನ್ನು ನೋಡಿ ಹಾಗೂ ಇವರ ಫೇಸ್‌ಬುಕ್ ಪೇಜ್ ವೀಕ್ಷಿಸಿ ಭಾರತೀಯ ಸೇನೆಯ ಅಧಿಕಾರಿಗಳು ರಾಘವೇಂದ್ರ ಭಟ್‌ರನ್ನು ಸಂಪರ್ಕಿಸಿದ್ದಲ್ಲದೇ, ನಾಯಿಗಳ ವೀಕ್ಷಣೆಗೆ ಮನೆಗೆ ಭೇಟಿ ಪರಿಶೀಲನೆ ಕೂಡಾ ನಡೆಸಿದ್ದರು. ಆ ನಂತರ ಇಂಡಿಯನ್ ಆರ್ಮಿಯ ಜವಾನ, 45 ದಿನಗಳಿಂದ ಇವರ ಮನೆಯಲ್ಲೇ ಇದ್ದು ನಾಯಿಗಳ ನಡವಳಿಕೆ, ಆಹಾರ ಪದ್ಧತಿ, ಅವುಗಳ ಬುದ್ಧಿಮತ್ತೆ, ಆರೋಗ್ಯ ಪರಿಶೀಲಿಸಿ ಪ್ರತಿನಿತ್ಯ ಉನ್ನತಾಧಿಕಾರಿಗಳಿಗೆ ವರದಿ ನೀಡುತ್ತಿದ್ದರು.
ಗುರುವಾರ ಭಾರತೀಯ ಸೇನೆಯ ತಂಡವೇ ಬಂದು 17 ನಾಯಿ ಮರಿಗಳನ್ನು ಖಾಸಗಿ ಎಸಿ ಬಸ್‌ನಲ್ಲಿ ಕುಳ್ಳಿರಿಸಿ ಅಸ್ಸಾಂನತ್ತ ಕೊಂಡೊಯ್ದಿದ್ದಾರೆ. ತಾವು ಸಾಕಿರುವ ನಾಯಿಮರಿಗಳು ಪ್ರಸ್ತುತ ದೇಶಸೇವೆಗೆ ತೆರಳಿರುವುದು ರಾಘವೇಂದ್ರ ಭಟ್ ಮನೆಯವರಿಗೆಲ್ಲಾ ಸಾಕಷ್ಟು ಖುಷಿ ತಂದುಕೊಟ್ಟಿದೆ.
ಇದನ್ನೂ ಓದಿ | Weather Report: ಕಡಲಿಗೆ ಮೀನುಗಾರರ ದಿಗ್ಭಂಧನ; ಈ ಜಿಲ್ಲೆಗಳಲ್ಲಿ ಗಾಳಿಮಳೆ ಅಬ್ಬರ
ಈ ನಾಯಿಗಳು ಗುಣಮಟ್ಟದ ಆಧಾರದ ಮೇಲೆ ತಲಾ 80 ಸಾವಿರ ರೂ.ಗಳಿಂದ 2 ಲಕ್ಷ ರೂ.ಗಳ ತನಕ ಬೆಲೆ ಬಾಳುತ್ತವೆ. ಇವರು ಸಾಕಿರುವ ಒ೦ದು ನಾಯಿ, ಕಾರವಾರ, ಶಿವಮೊಗ್ಗ, ಮಂಗಳೂರು, ಉಡುಪಿ, ಗೋವಾ, ಬೆಳಗಾವಿ, ಶಿರಸಿ ಮತ್ತಿತರ ಕಡೆ ನಡೆದ ಡಾಗ್ ಶೋಗಳಲ್ಲಿ ಪ್ರಶಸ್ತಿ ಹಾಗೂ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಬಾಚಿಕೊಂಡಿದೆ.
ಈ ನಾಯಿಗಳಿಗೆ ಅನ್ನ, ಮಜ್ಜಿಗೆ, ಮೊಸರು, ಹಾಲು, ಮೊಟ್ಟೆ, ಸ್ವಲ್ಪ ಚಿಕನ್, ಡ್ರೈ ಫ್ರೂಟ್, ಮಲ್ಟಿ ಗ್ರೇನ್ ಪೌಡರ್ ಮಿಶ್ರಣ ನೀಡಲಾಗುತ್ತದೆ. ಇದರೊಂದಿಗೆ ತರಕಾರಿ ಕೂಡಾ ಬೇಯಿಸಿ ನೀಡಲಾಗುತ್ತದೆ. ರಾಘವೇಂದ್ರ ಭಟ್ ಅವರ ಪತ್ನಿ ರಾಜೇಶ್ವರಿ ಹಾಗೂ ಅವರ ತಾಯಿ ನಾಯಿಗಳಿಗೆ ಆಹಾರವನ್ನು ತಯಾರಿಸುತ್ತಾರೆ. ಮಾಂಸಾಹಾರಿ ಆಹಾರವನ್ನು ತಂದು ನೀಡಲು ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ.