ಭಾಸ್ಕರ್ ಆರ್. ಗೆಂಡ್ಲ, ಶಿರಸಿ
ಭೂತಾನ್‌ನಿಂದ ಭಾರತಕ್ಕೆ ವಾರ್ಷಿಕವಾಗಿ 17 ಸಾವಿರ ಟನ್ ಹಸಿ ಅಡಿಕೆಯನ್ನು ಆಮದು (Bhutan arecanut import) ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ನಿಗದಿಯಾಗಿದ್ದ ಕನಿಷ್ಠ ಆಮದು ಬೆಲೆಯನ್ನೂ (Import Price) ಪಡೆಯದೇ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿರುವುದು ಉತ್ತರ ಕನ್ನಡ (Uttara Kannada) ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಅಡಿಕೆ ಬೆಳೆಗಾರರಲ್ಲಿ (Arecanut growers) ಆತಂಕವನ್ನು ಸೃಷ್ಟಿಸಿದೆ. ಇದು ಅಡಿಕೆ ಬೆಲೆ (Arecanut Price) ಮೇಲೆ ತೀವ್ರ ಪೆಟ್ಟು ಕೊಡುವ ಸಾಧ್ಯತೆ ಇದ್ದು, ಕೂಡಲೇ ಈ ಆದೇಶವನ್ನು ಹಿಂಪಡೆದು ಬೆಳೆಗಾರರ ಹಿತ ಕಾಪಾಡಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.
ಕೆಲವು ತಿಂಗಳಿನಿಂದ ಅಡಿಕೆ ಧಾರಣೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಬೆಳೆಗಾರರು ನೆಮ್ಮದಿಯಲ್ಲಿ ಇರುವಾಗಲೇ ಕೇಂದ್ರ ಸಚಿವಾಲಯದ ಈ ತೀರ್ಮಾನ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದೆ. ಪೂರಕವೆಂಬತೆ ಶಿರಸಿ ಟಿಎಸ್ಎಸ್ ಅಡಿಕೆ ಮಾರುಕಟ್ಟೆಯಲ್ಲಿ (Arecanut Market) ಧಾರಣೆ ಕುಸಿತ (Price drop) ಕಂಡಿದ್ದು, ಮಾರುಕಟ್ಟೆಯಲ್ಲಿ ಅಡಿಕೆಯ ಚಾಲ್ತಿಯಲ್ಲಿರುವ ದರಕ್ಕಿಂತ ಕ್ವಿಂಟಾಲ್‌ಗೆ 2000 ರೂ. ಇಳಿದಿದೆ. ಭೂತಾನ್‌ನಿಂದ ಅಡಿಕೆ ಆಮದಿಗೆ ಅಡಿಕೆ ಬೆಳೆಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಪರಂಪರಾಗತವಾಗಿ ಅಡಿಕೆ ಬೆಳೆಯುವ ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಪ್ರದೇಶವನ್ನು ದಾಟಿ ಐದು ವರ್ಷಗಳಲ್ಲಿ ವಿವಿಧ ಜಿಲ್ಲೆಗಳಿಗೆ ಅಡಿಕೆ ಬೆಳೆ ವಿಸ್ತರಣೆಯಾಗಿದೆ. ಹೊರ ರಾಜ್ಯಗಳಲ್ಲೂ ಅಡಿಕೆ ಕ್ಷೇತ್ರ ವಿಸ್ತರಣೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೇಡಿಕೆ ಇಲ್ಲದಿದ್ದರೂ ಹೊರ ದೇಶದಿಂದ ಆಮದು ಮಾಡಿಕೊಳ್ಳುವುದು ಇಲ್ಲಿನ ಬೆಳಗಾರರಿಗೆ ನೀಡುವ ಪೆಟ್ಟು ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟಾರೆ 4.20 ಲಕ್ಷ ಹೆಕ್ಟೇರ್ ಅಡಿಕೆ ಪ್ರದೇಶವಿದೆ. ದೇಶದ ಅಡಿಕೆ ಉತ್ಪಾದನೆಯ ಶೇ.35ಕ್ಕೂ ಹೆಚ್ಚು ಅಡಿಕೆಯನ್ನು ಕರ್ನಾಟಕ ರಾಜ್ಯದಿಂದಲೇ ಉತ್ಪಾದಿಸಲಾಗುತ್ತಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅಡಿಕೆ ಉತ್ಪಾದನೆಯು ಶೇ.30ರಷ್ಟು ಹೆಚ್ಚಿದೆ’ ಎಂದು ಮಾರುಕಟ್ಟೆ ತಜ್ಞರು ಮಾಹಿತಿ ನೀಡಿದ್ದಾರೆ.
ಏನಿದು ಆಮದು?
ದೇಶೀ ಅಡಿಕೆಗೆ ಮನ್ನಣೆ ಸಿಗಬೇಕೆಂಬ ದೃಷ್ಟಿಯಲ್ಲಿ ವಿದೇಶದಿಂದ ಭಾರತಕ್ಕೆ ಆಮದಾಗುವ ಅಡಿಕೆಗೆ ಪ್ರತಿ ಕೆ.ಜಿ.ಗೆ 251 ರೂ. ಕನಿಷ್ಠ ಆಮದು ಬೆಲೆ ನಿಗದಿಪಡಿಸಲಾಗಿತ್ತು. ಆದರೆ, ಈ ನಿಯಮ ಉಲ್ಲಂಘಿಸಿ ಭೂತಾನ್‌ನಿಂದ ಆಮದು ಬೆಲೆ ವಿಧಿಸದೆ ಅಡಿಕೆ ಆಮದಿಗೆ ನಿರ್ಧರಿಸಲಾಗಿದೆ. ಇದು ಹಲವು ಅಡ್ಡ ಪರಿಣಾಮ ಸೃಷ್ಟಿಸುವ ಭೀತಿ ಉಂಟಾಗಿದೆ. ಈ ಹಿಂದೆ ದಕ್ಷಿಣ ಏಷ್ಯಾ ಉಚಿತ ವ್ಯಾಪಾರ ಒಪ್ಪಂದ ಹಿನ್ನೆಲೆಯಲ್ಲಿ ಅಡಿಕೆ ಆಮದಿಗೆ ಸರ್ಕಾರ ಒಪ್ಪಿಗೆ ನೀಡಿದ ಪರಿಣಾಮ ಅಡಿಕೆ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆ ಧಾರಣೆ ಪಾತಾಳಕ್ಕೆ ಕುಸಿದಿತ್ತು. ಅಂತಹ ಸ್ಥಿತಿ ಮತ್ತೊಮ್ಮೆ ಉಂಟಾಗುವ ಆತಂಕ ಬೆಳೆಗಾರರದ್ದಾಗಿದೆ.
ಆಮದು ಹಾಗೂ ಪರಿಣಾಮ
ಭೂತಾನ್ ದೇಶದಲ್ಲಿ ಬಂದರುಗಳು ಇಲ್ಲದಿರುವುದರಿಂದ ಅಡಿಕೆಯನ್ನು ಭೂಮಾರ್ಗದಿಂದ ತಂದ ಬಳಿಕ ಪಶ್ಚಿಮ ಬಂಗಾಲದ ಜಯಗಾನ್ ಹಾಗೂ ಚಾಮೂರ್ಚಿ ಬಂದರಿನಿಂದ ಆಮದು ಮಾಡಿಕೊಳ್ಳಬೇಕು. ಇದರಿಂದ ಸಾಗಣೆ ವೆಚ್ಚ ಹೆಚ್ಚಾಗುತ್ತದೆ ಅನ್ನುವ ವಾದ ಇದೆ. ತಜ್ಞರ ಪ್ರಕಾರ ಭೂತಾನ್ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಅಡಿಕೆ ಬೆಳೆ ಬೆಳೆಯಲು ಪ್ರಾರಂಭಿಸಿದ್ದು ಅಲ್ಲಿನ ಅಡಿಕೆ ಗುಣಮಟ್ಟದಿಂದ ಕೂಡಿಲ್ಲ. ಒಂದು ಕ್ವಿಂಟಾಲ್ ಹಸಿ ಅಡಿಕೆಯಲ್ಲಿ ಕಾಲು ಭಾಗಕ್ಕಿಂತಲೂ ಕಡಿಮೆ ಒಣ ಅಡಿಕೆ ಸಿಗುವುದರಿಂದ ಮಾರುಕಟ್ಟೆಯಲ್ಲಿ ಪರಿಣಾಮ ಬೀರಲಾರದು ಎನ್ನುವ ಅಭಿಪ್ರಾಯವೂ ಇದೆ.
ಬೆಳಗಾರರಿಗೆ ತೊಂದರೆ
ವಿದೇಶದಿಂದ ಅಡಿಕೆ ಆಮದಿಗೆ ನಮ್ಮ ತಕರಾರಿಲ್ಲ. ಆದರೆ, ಆಮದಾಗುವ ಅಡಿಕೆಗೆ ಸೂಕ್ತ ತೆರಿಗೆ ವಿಧಿಸಬೇಕಾಗುತ್ತದೆ. ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಅಡಿಕೆ ಬೆಳೆಗಾರರು ಇದ್ದಾರೆ. ನಮ್ಮಲ್ಲಿ ಅಡಿಕೆಗೆ ಏನು ಕೊರತೆಯಿಲ್ಲ. ಕೊರತೆ ಇದ್ದರೆ ವಿದೇಶದಿಂದ ಆಮದು ಮಾಡಿಕೊಳ್ಳುದರಲ್ಲಿ ಅರ್ಥವಿದೆ. ಆದರೆ ಈ ನಿಲುವು ಸಂಪೂರ್ಣ ದೊಡ್ಡ ಲಾಭಿಯಿಂದ ಕೂಡಿದೆ. ಭೂತಾನ್‌ನಿಂದ 17 ಸಾವಿರ ಟನ್ ಹಸಿ ಅಡಿಕೆ ಆಮದಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ, ಕಂಟೇನರ್‌ನಲ್ಲಿ ತುಂಬಿದ ಅಡಿಕೆ ನಮ್ಮಲ್ಲಿ ಬರಲು 18 ದಿನಗಳಾದರೂ ಬೇಕು. ಅಷ್ಟರಲ್ಲಿ ಅಡಿಕೆ ಕೊಳೆತು ಹೋಗುತ್ತದೆ. ಉತ್ತಮ ಗುಣಮಟ್ಟದ ಅಡಿಕೆ ನಮಗೆ ದೊರೆಯುವುದು ಕಷ್ಟ ಸಾಧ್ಯವಾಗಿದೆ. ಅಡಿಕೆ ಆಮದು ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ನಿರ್ಧಾರ ಕೈಗೊಳ್ಳಲಾಗಿದೆ. ಭೂತಾನ್ ಅಡಿಕೆ ಆಮದಿನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಬೆಳೆಗಾರರು ಇನ್ನಷ್ಟು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ.
| ಎಂ.ಆರ್. ಹೆಗಡೆ, ಅಧ್ಯಕ್ಷ, ಮಲೆನಾಡು ಕೃಷಿ ಅಭಿವೃದ್ಧಿ ಸೊಸೈಟಿ, ಯಲ್ಲಾಪುರ
ಎಲ್ಲೆಲ್ಲಿ ಎಷ್ಟೆಷ್ಟು ಪ್ರದೇಶದಲ್ಲಿ ಬೆಳೆ?
ಶಿವಮೊಗ್ಗ ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟೇರ್, ಉತ್ತರ ಕನ್ನಡ 33,365 ಹೆಕ್ಟೇರ್, ದಕ್ಷಿಣ ಕನ್ನಡ 30,450 ಹೆಕ್ಟೇರ್‌ನಷ್ಟು ಅಡಿಕೆ ಪ್ರದೇಶವಿದೆ. ಇದರ ಜೊತೆ ಅಸಾಂಪ್ರದಾಯಿಕವಾಗಿ ವಿಸ್ತರಣೆಯಾದ ಅಡಿಕೆಯು ತುಮಕೂರು ಜಿಲ್ಲೆಯಲ್ಲಿ 35,839 ಹೆಕ್ಟೇರ್, ಚಿತ್ರದುರ್ಗ 25,061 ಹೆಕ್ಟೇರ್, ದಾವಣಗೆರೆ 30,811 ಹೆಕ್ಟೇರ್, ಹಾವೇರಿ 6,901 ಹೆಕ್ಟೇರ್, ಚಿಕ್ಕಮಗಳೂರು 29,214 ಹೆಕ್ಟೇರ್ ಪ್ರದೇಶದಲ್ಲಿ ಫಲ ನೀಡುತ್ತಿದೆ.