Site icon Vistara News

Crime Rate : 2022ರಲ್ಲಿ ರಾಜಧಾನಿಯಲ್ಲಿ 172 ಕೊಲೆ, 153 ಅತ್ಯಾಚಾರ: ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ

pratap reddy

ಬೆಂಗಳೂರು: 2022ರಲ್ಲಿ ಬೆಂಗಳೂರು ನಗರದಲ್ಲಿ 172 ಕೊಲೆಗಳು ನಡೆದಿದ್ದು, ಅಷ್ಟೂ ಪ್ರಕರಣವನ್ನೂ ಭೇದಿಸಲಾಗಿದೆ. ಅಪರಾಧ ಪ್ರಮಾಣವನ್ನು (Crime Rate) ಕಳೆದ ಮೂರು ವರ್ಷಕ್ಕೆ ಹೋಲಿಕೆ ಮಾಡಿದಲ್ಲಿ ಗಮನಾರ್ಹ ಏರಿಕೆ ಕಂಡಿಲ್ಲ. ೨೦೨೧ರಲ್ಲಿ ಲಾಕ್‌ಡೌನ್‌ ಸಮಯದಲ್ಲಿ ೧೫೨ ಕೊಲೆಗಳು ನಡೆದಿವೆ. ಅಲ್ಲದೆ, ೧೫೩ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು. ಈ ಸಾಲಿನಲ್ಲಿ ೪೭೮ ದರೋಡೆ ಪ್ರಕರಣಗಳು ದಾಖಲಾಗಿದ್ದರೆ, ಅವುಗಳಲ್ಲಿ ೩೫೧ ಪ್ರಕರಣಗಳನ್ನು ಭೇದಿಸಲಾಗಿದೆ. 151 ಸರಗಳ್ಳತನ ಪ್ರಕರಣಗಳು ನಡೆದಿದ್ದು, 134 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಜೈಲಿಗಟ್ಟಲಾಗಿದೆ ಎಂದು ಮಾಹಿತಿ ನೀಡಿದರು.

೨೦೧೯ಕ್ಕಿಂತ ೨೦೨೨ರಲ್ಲಿ ಕೊಲೆ ಪ್ರಕರಣ ಕಡಿಮೆ
೨೦೧೯ರಲ್ಲಿ ಒಟ್ಟು ೨೦೪ ಕೊಲೆ ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ ೧೯೮ ಪ್ರಕರಣಗಳನ್ನು ಭೇದಿಸಲಾಗಿದೆ. ೨೦೨೦ರಲ್ಲಿ ೧೭೭ ಕೊಲೆ ನಡೆದಿದ್ದರೆ, ಅವುಗಳಲ್ಲಿ ೧೭೪ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ೨೦೨೧ರಲ್ಲಿ ನಡೆದಿದ್ದ ೧೫೪ ಕೊಲೆಯಲ್ಲಿ ೧೫೨ ಪ್ರಕರಣಗಳನ್ನು ಭೇದಿಸಲಾಗಿದ್ದರೆ, ೨೦೨೨ರಲ್ಲಿ ೧೭೨ ಕೊಲೆಗಳು ನಡೆದಿದ್ದು, ಅವುಗಳಲ್ಲಿ ೧೭೨ ಪ್ರಕರಣಗಳನ್ನೂ ಪತ್ತೆ ಹಚ್ಚಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಇದನ್ನೂ ಪ್ರಕರಣ | Actor Kishore | ಟ್ವಿಟರ್ ಅಕೌಂಟ್ ಸಸ್ಪೆಂಡ್ ಬಗ್ಗೆ ಸ್ಷಷ್ಟನೆ ನೀಡಿದ ನಟ ಕಿಶೋರ್

ಉಳಿದಂತೆ ಡ್ರಗ್ ಕೇಸ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ, ಅಕ್ರಮವಾಗಿ ನೆಲೆಸಿದ್ದ 23 ಜನರನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದರು.

ತಿಳಿದವರಿಂದಲೇ ಅತ್ಯಾಚಾರ ಹೆಚ್ಚು
೨೦೨೨ರಲ್ಲಿ ಒಟ್ಟು 153 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆದರೆ, ಇವುಗಳಲ್ಲಿ 149 ಪ್ರಕರಣಗಳಲ್ಲಿ ಪ್ರೀತಿ, ಮದುವೆ, ಲಿವಿಂಗ್ ಟುಗೆದರ್ ಸೇರಿದಂತೆ ಸಂತ್ರಸ್ತೆಯರ ಸಂಬಂಧಿಕರಿಂದಲೇ ದೌರ್ಜನ್ಯಗಳು ನಡೆದಿರುವುದು ಗೊತ್ತಾಗಿದೆ. ಮಹಿಳೆ ಮತ್ತು ಮಕ್ಕಳ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವರದಕ್ಷಿಣೆ ಕಾಯ್ದೆ, ಪೋಕ್ಸೊ ಮತ್ತಿತರ ಪ್ರಕರಣಗಳಲ್ಲಿ ಶೇ. 30ರಷ್ಟು ಅಪರಾಧ ಪ್ರಕರಣಗಳು ಏರಿಕೆ ಕಂಡಿವೆ ಎಂದು ಪ್ರತಾಪ್‌ ರೆಡ್ಡಿ ಮಾಹಿತಿ ನೀಡಿದರು.

2020ನೇ ಸಾಲಿನಲ್ಲಿ ಹಾಗೂ 2021ನೇ ಸಾಲಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಸಂಚಾರಗಳು ವಿರಳವಾಗಿದ್ದವು. ಈ ಹಿನ್ನೆಲೆಯಲ್ಲಿ ಅಪಘಾತ ಪ್ರಕರಣಗಳೂ ತಗ್ಗಿವೆ. 2020ರಲ್ಲಿ 3236 ಹಾಗೂ 2021ರಲ್ಲಿ 3213 ಅಪಘಾತಗಳು ಸಂಭವಿಸಿವೆ. 2022ರಲ್ಲಿ 3827 ಅಪಘಾತ ಪ್ರಕರಣಗಳು ದಾಖಲಾಗಿವೆ. ೨೦೧೮ರಿಂದ ನಡೆದ ರಸ್ತೆ ಅಪಘಾತಗಳಿಗೆ ಹೋಲಿಸಿದರೆ, ೨೦೨೨ರಲ್ಲಿ ಕಡಿಮೆ ಆಗಿದೆ. 2018ರಲ್ಲಿ ನಗರದ ರಸ್ತೆಗಳಲ್ಲಿ ಪ್ರತಿ 10 ಸಾವಿರ ವಾಹನಗಳಿಗೆ 6 ಅಪಘಾತಗಳು ಸಂಭವಿಸುತಿತ್ತು. ಅದೇ 2022ರಲ್ಲಿ ಈ ಅನುಪಾತವು 3.5ಕ್ಕೆ ಇಳಿಕೆ ಕಂಡಿದೆ ಎಂದು ಟ್ರಾಫಿಕ್‌ ಸ್ಪೆಷಲ್‌ ಕಮಿಷನರ್ ಎಂ.ಎ‌.‌ಸಲೀಂ ತಿಳಿಸಿದರು.

ಕಳೆದ ಐದು ವರ್ಷವನ್ನು ಗಮನಿಸಿದಾಗ ನಗರದಲ್ಲಿ ಸಂಭವಿಸುತ್ತಿರುವ ಒಟ್ಟು ಅಪಘಾತಗಳ ಪ್ರಮಾಣವೂ ಇಳಿಕೆಯಾಗಿದೆ. 2018ನೇ ಸಾಲಿಗೆ ಹೋಲಿಸಿದರೆ ಶೇ.17ರಷ್ಟು ಅಪಘಾತ ಪ್ರಕರಣಗಳು ಇಳಿಕೆಯಾಗಿವೆ. ಕಳೆದ‌ ವರ್ಷ ಒಟ್ಟು 748 ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು, 777 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ | OBC Reservation In UP | ಒಬಿಸಿ ಮೀಸಲಾತಿ ಕುರಿತ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ, ಯೋಗಿ ಸರ್ಕಾರಕ್ಕೆ ಬಿಗ್‌ ರಿಲೀಫ್‌

Exit mobile version