Site icon Vistara News

Yuva Nidhi Scheme: ಯುವನಿಧಿಗೆ ಒಂದು ವಾರದಲ್ಲಿ 19,392 ಮಂದಿ ನೋಂದಣಿ

Yuva Nidhi Scheme

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಐದನೇ ಗ್ಯಾರಂಟಿ ʼಯುವನಿಧಿʼಗೆ (Yuva Nidhi Scheme) ಉತ್ತಮ ಸ್ಪಂದನೆ ದೊರೆಯುತ್ತಿದೆ. ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಈವರೆಗೆ 7 ದಿನಗಳಲ್ಲಿ 19,392 ಮಂದಿ ನೋಂದಣಿ ಮಾಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ವಿಧಾನ ಸೌಧದಲ್ಲಿ ಡಿ.26ರಂದು ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಸದ್ಯ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಅಭ್ಯರ್ಥಿಗಳು ನೋಂದಣಿ ಮಾಡಿಸುತ್ತಿದ್ದಾರೆ. ಜ. 1 ಸಂಜೆ 6ಗಂಟೆವರೆಗೆ 19,392 ಅರ್ಜಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ದಾಖಲಾಗಿವೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Yuva Nidhi Scheme : ಯುವನಿಧಿ ನೋಂದಣಿಗೆ ಸಿಎಂ ಚಾಲನೆ; ಜ. 12ರಂದು ಖಾತೆಗೆ ಬೀಳುತ್ತೆ ಹಣ

ಕಳೆದ ಸಾಲಿನಲ್ಲಿ ಡಿಪ್ಲೊಮಾ ಇಲ್ಲವೇ ಪದವಿಯನ್ನು ಪೂರೈಸಿದ್ದು, ಇನ್ನೂ ಯಾವುದೇ ಉದ್ಯೋಗ ಸಿಗದವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿಪ್ಲೊಮಾ ಹೋಲ್ಡರ್‌ಗಳಿಗೆ ಮುಂದಿನ ಎರಡು ವರ್ಷಗಳ ಕಾಲ ತಿಂಗಳಿಗೆ 1500 ರೂ. ಹಾಗೂ ಪದವೀಧರರಿಗೆ 3000 ರೂಪಾಯಿ ನೀಡುವ ನಿರುದ್ಯೋಗ ಭತ್ಯೆ ನೀಡುವ ಯೋಜನೆ ಇದಾಗಿದೆ. ಯಾವುದೇ ಉದ್ಯೋಗ ಸಿಕ್ಕರೆ ತಕ್ಷಣ ಯೋಜನೆಯನ್ನು ಸ್ಥಗಿತಗೊಳಿಸಲು ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಜನವರಿ 12ಕ್ಕೆ ಯುವನಿಧಿ ಹಣ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ.

ಇದನ್ನೂ ಓದಿ | Job Security: ಕೆಲಸದ ಭದ್ರತೆ ಬಗ್ಗೆ 85% ಉದ್ಯೋಗಿಗಳಿಗೆ ಆತಂಕವಂತೆ!

ಯುವನಿಧಿ ಯೋಜನೆ ಹಣ ಯಾರಿಗೆ ಸಿಗುತ್ತದೆ?

  1. ಯುವ ನಿಧಿ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ಅರ್ಹತೆ ಮತ್ತು ಸಿಗುವ ಭತ್ಯೆ ವಿವರ ಹೀಗಿದೆ.
  2. 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ.
  3. ವೃತ್ತಿಪರ ಕೋರ್ಸ್‌ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.
  4. ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
  5. ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
  6. ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ.

ಯುವ ನಿಧಿ ಯೋಜನೆ ಷರತ್ತುಗಳು ಇವು

  1. ‘ಸೇವಾ ಸಿಂಧು’ ಪೋರ್ಟಲ್‌ ಮೂಲಕವೇ ಅರ್ಜಿ ಸಲ್ಲಿಸಬೇಕು
  2. ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಣೆ ಮಾಡಿದರೆ ಸಾಕಾಗುತ್ತದೆ. ಆದರೆ, ಅಸತ್ಯದ ಪ್ರಮಾಣ ಸಲ್ಲದು.
  3. ಪದವಿ/ ಡಿಪ್ಲೊಮಾ ಮುಗಿಸಿದ ಫ್ರೆಷರ್ಸ್‌ಗೆ 6 ತಿಂಗಳಾದರೂ ಉದ್ಯೋಗ ಸಿಗದೆ ಇದ್ದರೆ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ.
  4. ಪ್ರತಿ ಫಲಾನುಭವಿಗೆ 2 ವರ್ಷಗಳಿಗೆ ಮಾತ್ರ ಈ ಯೋಜನೆ ಸೀಮಿತ. 2 ವರ್ಷಗಳೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತವಾಲಿದೆ.
  5. ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.

ಯಾರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ?

  1. ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.
  2. ಯಾವುದೇ ಅಪ್ರೆಂಟಿಸ್‌ ವೇತನ ಪಡೆಯುತ್ತಿರುವವರು.
  3. ಸರ್ಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
  4. ಸರ್ಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್‌ ಸಾಲ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದವರಿಗೂ ಇಲ್ಲ.

ಯುವ ನಿಧಿಗೆ ಅರ್ಜಿ ಸಲ್ಲಿಕೆ ಹೇಗೆ?

  1. ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
  2. ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ ತೆಗೆದಿಟ್ಟುಕೊಳ್ಳಿ.
  3. ನಿಮ್ಮ ಬ್ಯಾಂಕ್‌ ಖಾತೆ ಮಾಹಿತಿ‌ ಸ್ಪಷ್ಟವಾಗಿರಬೇಕು, ಖಾತೆಯೇ ಇಲ್ಲದಿದ್ದರೆ ಈಗಲೇ ಮಾಡಿಸಿ, ಕೆವೈಸಿ ಕೂಡಾ ಮಾಡಿ ಇಡಿ.
  4. ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
  5. ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು).

ಇದನ್ನೂ ಓದಿ | Job Alert: ಎನ್‌ಐಸಿಎಲ್‌ನ ಆಫೀಸರ್‌ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಿ

ಯುವ ನಿಧಿ ಅರ್ಜಿ ಎಲ್ಲಿ ಸಲ್ಲಿಸಬೇಕು?

ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಇನ್ನೂ ಅಧಿಕೃತವಾಗಿ ಹೇಳಿಲ್ಲ. ನಾವೇ ಮೊಬೈಲ್‌ನಲ್ಲಿ, ಕಂಪ್ಯೂಟರ್‌ಗಳಲ್ಲಿ ಅರ್ಜಿ ತುಂಬಬಹುದು. ಬೇರೆ ಕೇಂದ್ರಗಳ ಸಹಕಾರವನ್ನು ಕೂಡಾ ನೀಡಲಾಗುತ್ತದೆ ಎನ್ನಲಾಗಿದೆ.

Exit mobile version