ಯಾದಗಿರಿ: ಶಹಾಪುರ ತಾಲೂಕಿನ ಹೋತಪೇಟ ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವಿಸಿ ಇಬ್ಬರು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಸದ್ಯ ೮ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೋತಪೇಟ ಗ್ರಾಮದ ಈರಮ್ಮ ಹಿರೇಮಠ (90), ಹೊನ್ನಪ್ಪಗೌಡ (45) ಮೃತಪಟ್ಟವರು. ಈವರೆಗೂ 34 ಜನ ವಾಂತಿ-ಬೇಧಿಯಿಂದ ಅಸ್ವಸ್ಥರಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಆರು ಮಂದಿ ಮಕ್ಕಳೇ ಇದ್ದಾರೆ.
ತೆರೆದ ಬಾವಿಯಿಂದ ನೀರು ಪೂರೈಕೆ ಮಾಡಲಾಗಿತ್ತು. ಆದರೆ, ಈ ನೀರು ಕಲುಷಿತಗೊಂಡಿದೆ ಎಂದು ಹೇಳಲಾಗಿದೆ. ವಿಷಯ ಗೊತ್ತಿಲ್ಲದ ಗ್ರಾಮದವರು ಈ ನೀರನ್ನು ಸೇವಿಸಿದ್ದಾರೆ. ಹಾಗಾಗಿ ಒಬ್ಬೊಬ್ಬರಿಗೇ ಅನಾರೋಗ್ಯ ಪ್ರಾರಂಭವಾಗಿದೆ. ಕೆಲವರಿಗೆ ವಿಪರೀತವಾಗಿ ವಾಂತಿ-ಭೇದಿ ಆರಂಭವಾಗಿದೆ. ಕೆಲವರು ಆಸ್ಪತ್ರೆಗೆ ದಾಖಲಾಗಿದ್ದರು. ಹೊನ್ನಪ್ಪಗೌಡ ಅ. 22ರಂದು ಮೃತಪಟ್ಟರೆ, ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈರಮ್ಮ ಚಿಕಿತ್ಸೆ ಫಲಿಸದೆ ಅ. ೨೩ರಂದು ಅಸುನೀಗಿದ್ದಾರೆ.
ಇದನ್ನೂ ಓದಿ | Weather Report | ಉತ್ತರ ಒಳನಾಡಿನಲ್ಲಿ ತಗ್ಗಿದ ವರುಣ; ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಮುನ್ಸೂಚನೆ
ಹೋತಪೇಟ ಆರೋಗ್ಯ ಉಪಕೇಂದ್ರಕ್ಕೆ ಟಿಎಚ್ಒ ಡಾ.ರಮೇಶ ಗುತ್ತೆದಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ತೆರೆದ ಬಾವಿಯಿಂದ ವಾಟರ್ ಟ್ಯಾಂಕ್ ಗೆ ನೀರು ಸರಬರಾಜು ಮಾಡಲಾಗಿದೆ. ಮೇಲ್ನೋಟಕ್ಕೆ ಕಲುಷಿತ ನೀರಿನಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ, ಗ್ರಾಮದಲ್ಲಿ ಹಲವು ಕಡೆ ನೀರು ಪೂರೈಕೆ ಪೈಪ್ ಕಟ್ ಆಗಿರುವುದರಿಂದ ಈ ಸಮಸ್ಯೆಯಾಗಿರಬಹುದು. ಇನ್ನು ಹೊನ್ನಪ್ಪಗೌಡ ಸಾವಿನ ಬಗ್ಗೆ ಖಚಿತವಾಗಿ ಹೇಳಲು ಆಗುವುದಿಲ್ಲ. ವರದಿ ಬಂದ ಬಳಿಕ ಕಾರಣವನ್ನು ಸ್ಪಷ್ಟಪಡಿಸಲಾಗವುದು ಎಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಸ್ಥಳ ಪರಿಶೀಲನೆ ನಡೆಸಿದ ಟಿಎಚ್‌ಒ
ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಹೊನ್ನಪ್ಪಗೌಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಅಸ್ವಸ್ಥಗೊಂಡ ಗ್ರಾಮಸ್ಥರ ಆರೋಗ್ಯವನ್ನು ವಿಚಾರಿಸಿದ್ದಾರೆ. ಜತೆಗೆ ವೈದ್ಯರು, ಆಶಾ ಕಾರ್ಯಕರ್ತರನ್ನೊಳಗೊಂಡ ತಂಡವನ್ನು ಕರೆದುಕೊಂಡು ಹೋಗಿ ತಪಾಸಣೆ ನಡೆಸಿದ್ದಾರೆ. ಬಾವಿ ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಅರಿವು ಮೂಡಿಸಿದ್ದಾರೆ.
ಮೂರು, ನಾಲ್ಕು ತಿಂಗಳಿನಿಂದೀಚೆಗೆ ಬಳ್ಳಾರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಲ್ಲಿ ಕಲುಷಿತ ನೀರು ಸರಬರಾಜು ಪ್ರಕರಣಗಳು ನಡೆದಿದ್ದು, ಸಾವು-ನೋವುಗಳು ಸಂಭವಿಸಿವೆ. ಈಗ ಯಾದಗಿರಿಯಲ್ಲಿ ಸಮಸ್ಯೆಯಾಗಿದ್ದು, ಅಧಿಕಾರಿಗಳು ನೀರು ಸರಬರಾಜು ಮಾಡುವ ವೇಳೆ ಪರಿಶೀಲನೆ ಮಾಡಬೇಕೆಂಬ ಆಗ್ರಹಗಳು ಬಲವಾಗಿ ಕೇಳಿಬಂದಿವೆ.
ಇದನ್ನೂ ಓದಿ | Kohinoor Diamond | ಕೊಹಿನೂರ್ ಕರ್ನಾಟಕದ್ದು! ಯಾದಗಿರಿಯಲ್ಲಿ ಸಿಕ್ಕ ವಜ್ರ, ಹೆಮ್ಮೆ ಇಲ್ಲದ ಸರ್ಕಾರ!