ಬೆಂಗಳೂರು: ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ಅಲ್ಲಲ್ಲಿ (Karnataka Rain) ಗುರವಾರವೂ ಮಳೆ ಮುಂದುವರಿದಿದೆ. ಕೋಲಾರ, ರಾಯಚೂರು, ಬಾಗಲಕೋಟೆ ಸೇರಿದಂತೆ ಹಲವು ಕಡೆ ವರುಣನ ಸಿಂಚನವಾಗಿದೆ. ಕೋಲಾರದಲ್ಲಿ ಬಿರುಗಾಳಿ ಸಹಿ ಆಲಿಕಲ್ಲು ಮಳೆಯಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ರಾಜ್ಯದ ಅಲ್ಲಲ್ಲಿ ಅಲ್ಪ ಪ್ರಮಾಣದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಮೆಜೆಸ್ಟಿಕ್ ಸೇರಿದಂತೆ ಅಲ್ಲಲ್ಲಿ ಸಾಧಾರಣದಿಂದ ಭರ್ಜರಿ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಗಂಟೆಗೂ ಹೆಚ್ಚು ಕಾಲ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು. ಅಲ್ಲದೆ, ಕೋಲಾರ, ಬೀದರ್, ರಾಯಚೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಇನ್ನೂ ಹಲವು ಕಡೆ ಭಾರಿ ಮಳೆಯಾದ ವರದಿಯಾಗಿದೆ.
ಕೋಲಾರದಲ್ಲಿ ಆಲಿಕಲ್ಲು ಮಳೆ; ಅಪಾರ ನಷ್ಟ
ಗುರುವಾರ ಸಂಜೆ ಕೋಲಾರ ಜಿಲ್ಲೆಯ ಅಲ್ಲಲ್ಲಿ ಭಾರಿ ಮಳೆಯಾಗಿದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದರಿಂದ ಅಪಾರ ಪ್ರಮಾಣದ ನಷ್ಟವಾಗಿದೆ. ಬಿರುಗಾಳಿ ಸಂಬಂಧ ಆರ್‌ಟಿಒ ಕಚೇರಿ ಬಳಿ ಇರುವ ಕೋಲಾರ-ಬಂಗಾರಪೇಟೆ ಮಾರ್ಗದ ರಸ್ತೆಗೆ ಮರವೊಂದು ಅಡ್ಡಲಾಗಿ ಬಿದ್ದು ಸಂಚಾರ ವ್ಯತ್ಯಯವಾಗಿದೆ. ಈ ಸಂಬಂಧ ಸಂಚಾರಿ ಪೊಲೀಸರು ಮರ ತೆರವು ಕಾರ್ಯಾಚರಣೆ ನಡೆಸಿದ್ದು, ಬದಲಿ ಮಾರ್ಗ ವ್ಯವಸ್ಥೆಯನ್ನು ಮಾಡಿದ್ದಾರೆ.
ಇದನ್ನೂ ಓದಿ: Karnataka Elections : ಅಪಾಯದಲ್ಲಿರುವುದು ಸಂವಿಧಾನವಲ್ಲ, ಕಾಂಗ್ರೆಸ್ ಎಂದ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ
ಕೋಲಾರದಲ್ಲಿ ಗಾಳಿಯ ರಭಸಕ್ಕೆ ತಗಡಿನ ಶೀಟ್ ಗಾಳಿಗೆ ಹಾರಿವೆ. ಬಿರುಸಿನಿಂದ ಸುರಿದ ಮಳೆಗೆ ನಗರದ ಹಲವು ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿದಿವೆ. ಆಲಿಕಲ್ಲು ಮಳೆಯ ಹೊಡೆತಕ್ಕೆ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ತೋಟಗಾರಿಕೆ ಬೆಳೆಗಳಾದ ಬೀನ್ಸ್, ಟೊಮೇಟೊ, ಹೂ ತೋಟಗಳಲ್ಲೂ ಅಪಾರ ನಷ್ಟವಾಗಿವೆ.
ಕುಸಿದು ಬಿದ್ದ ಮನೆಯ ಸಜ್ಜೆ
ಕೋಲಾರ ನಗರದ ಕಾರಂಜಿಕಟ್ಟೆಯ ಹತ್ತನೇ ಕ್ರಾಸ್ ಬಳಿ ಮನೆಯ ಸಜ್ಜೆಯೊಂದು ಕುಸಿದುಬಿದ್ದ ಘಟನೆ ನಡೆದಿದೆ. ಸುಬ್ರಹ್ಮಣ್ಯ ಎಂಬುವರ ಮಾಲೀಕತ್ವದ ಮನೆಯ ಸಜ್ಜೆ ಕುಸಿತಗೊಂಡಿದೆ. ಸಾರ್ವಜನಿಕರು ಹೆಚ್ಚಾಗಿ ಓಡಾಡುವ ರಸ್ತೆ ಇದಾಗಿದ್ದು, ಅಂಗಡಿ ಬಳಿ ನಿಂತಿದ್ದ ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ. ಬಿರುಗಾಳಿ, ಗುಡುಗು ಮಿಂಚಿನೊಂದಿಗೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಮಳೆ ಸುರಿದಿದೆ.
ಬೀದರ್‌ನಲ್ಲಿ ಅರ್ಧ ಗಂಟೆಗೂ ಹೆಚ್ಚು ಮಳೆ
ಗಡಿ ಜಿಲ್ಲೆಯಾದ ಬೀದರ್‌ನಲ್ಲಿ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಬೆಂಡಾಗಿದ್ದ ಬೀದರ್ ಜನತೆಗೆ ಮಳೆ ತಂಪೆರೆದಿದೆ. ನಗರಾದ್ಯಂತ ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಗಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿವೆ.
ದೇವದುರ್ಗದಲ್ಲಿ ಎತ್ತು ಬಲಿ
ರಾಯಚೂರು ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ದೇವದುರ್ಗ, ಲಿಂಗಸಗೂರು ತಾಲೂಕಿನಲ್ಲಿ ವರುಣ ಅಬ್ಬರಿಸಿದ್ದಾನೆ. ದೇವದುರ್ಗ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಗಲಗ ಗ್ರಾಮದಲ್ಲಿ ರೈತ ಹನುಮಂತಪ್ಪ ಗೊಲ್ಲರ ಎಂಬುವವರಿಗೆ ಸೇರಿದ ಎತ್ತೊಂದು ಸಿಡಿಲು ಬಡಿದು ಮೃತಪಟ್ಟಿದೆ.
ಇದನ್ನೂ ಓದಿ: MP Kumaraswamy: ನಾನು ದಲಿತನೆಂಬ ಕಾರಣಕ್ಕೆ ನನ್ನ ವಿರುದ್ಧ ಪಿತೂರಿ: ಎಂ.ಪಿ. ಕುಮಾರಸ್ವಾಮಿ ಕಣ್ಣೀರು
ತೇರದಾಳದಲ್ಲಿ ಮನೆಗೆ ಬಡಿದ ಸಿಡಿಲು
ಬಾಗಲಕೋಟೆ ಜಿಲ್ಲೆಯ ಅಲ್ಲಲ್ಲಿ ಬುಧವಾರ ರಾತ್ರಿಯಿಂದಲೇ ಮಳೆ ಸುರಿದಿದೆ. ತೇರದಾಳ ಪಟ್ಟಣದ ಅಲ್ಲಮಪ್ರಭು ದೇವಸ್ಥಾನ ಬಳಿ ಮನೆಯೊಂದಕ್ಕೆ ಸಿಡಿಲು ಬಡಿದು ಮೇಲ್ಭಾಗದ ಗೋಡೆಗೆ ಹಾನಿಯಾಗಿದೆ. ಸಿಡಿಲಿನ ಹೊಡೆತಕ್ಕೆ ಅಲ್ಲಲ್ಲಿ ಗೋಡೆಯ ಪ್ಲಾಸ್ಟರ್ ಕಿತ್ತುಹೋಗಿದೆ. ಪ್ರಭು ಹಳಿಂಗಳಿ ಎಂಬುವರಿಗೆ ಸೇರಿದ ಮನೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.