ಬೆಂಗಳೂರು: ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ (free bus service) ಸೌಲಭ್ಯ ನೀಡುವ ರಾಜ್ಯ ಸರ್ಕಾರದ ಶಕ್ತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೂನ್ 11 ರಂದು ಯೋಜನೆಗೆ (Shakti Scheme) ಚಾಲನೆ ನೀಡಲಾಗಿತ್ತು. ಅಂದಿನಿಂದ ಈವರೆಗೆ ಬರೋಬ್ಬರಿ 20 ಕೋಟಿ ಮಹಿಳಾ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಇದರ ಟಿಕೆಟ್ ಮೌಲ್ಯ 476 ಕೋಟಿ ರೂ.ಗಳಾಗಿವೆ.
ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜೂನ್ 11ರಿಂದ ಜುಲೈ 15ರವರೆಗೆ 20,06,24,622 ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದು, ಇದರ ಟಿಕೆಟ್ ಮೌಲ್ಯ 476,23,38,985 ರೂ.ಗಳಾಗಿವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಈ 4 ಸಾರಿಗೆ ನಿಗಮಗಳ ಪೈಕಿ ಬಿಎಂಟಿಸಿಯಲ್ಲಿ ಅತಿ ಹೆಚ್ಚು ಅಂದರೆ 6.46 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ, ಎರಡನೇ ಸ್ಥಾನದಲ್ಲಿ ಕೆಎಸ್‌ಆರ್‌ಟಿಸಿ ಇದ್ದು, ಇದರಲ್ಲಿ 6.09 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ.
ಇನ್ನು ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಕೆಎಸ್‌ಆರ್‌ಟಿಸಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಬಿಎಂಟಿಸಿಗಿಂತಲೂ ಹೆಚ್ಚಾಗಿದೆ. ಬಿಎಂಟಿಸಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 83,25,69,911 ರೂ.ಇದ್ದರೆ, ಕೆಎಸ್‌ಆರ್‌ಟಿಸಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 178,18,74,943 ಇದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಟಿಕೆಟ್ ಮೌಲ್ಯ ಕೂಡ ಹೆಚ್ಚಾಗಿದೆ.
ಅದೇ ರೀತಿ ಜುಲೈ 15ರಂದು ಸಾರಿಗೆ ಬಸ್‌ಗಳಲ್ಲಿ 66,85,356 ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ಟಿಕೆಟ್ ಮೌಲ್ಯ 15,11,94,406 ರೂ.ಗಳಾಗಿವೆ.
ಇದನ್ನೂ ಓದಿ | Gruha lakshmi Scheme : 2000 ರೂ. ಪಡೆಯಲು ನೀವು ಅರ್ಹರಾ? ಅರ್ಜಿ ಹಾಕೋದೆಲ್ಲಿ? ಇಲ್ಲಿ ಚೆಕ್ ಮಾಡಿಕೊಳ್ಳಿ
ಈ ವಾರದಲ್ಲಿ ಅತಿ ಹೆಚ್ಚು ಮಹಿಳೆಯರ ಪ್ರಯಾಣ
ಶಕ್ತಿ ಯೋಜನೆ ಜಾರಿಯಾದ ಬಳಿಕ ಈ ವಾರ ಅತಿ ಹೆಚ್ಚು ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡಿರುವುದು ಕಂಡುಬಂದಿದೆ. ದಿನದಿಂದ ದಿನಕ್ಕೆ ಬಸ್‌ಗಳಲ್ಲಿ ಉಚಿತವಾಗಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಳವಾಗುತ್ತಿದೆ. ಒಂದು ವಾರದಲ್ಲಿ ಬರೊಬ್ಬರಿ 4,48,76,521 ಮಹಿಳೆಯರು ಪ್ರಯಾಣಿಸಿದ್ದಾರೆ. ಒಂದು ವಾರದಲ್ಲಿ ನಿತ್ಯ ಸರಾಸರಿ 64,10, 931 ಮಹಿಳೆಯರ ಸಂಚಾರ ಮಾಡಿದ್ದಾರೆ. ಒಂದು ವಾರದಲ್ಲಿ ಮಹಿಳೆಯರ ಓಡಾಟದ ಟಿಕೆಟ್ ಮೌಲ್ಯ 108,01,14,505 ರೂಪಾಯಿ ಅಗಿದೆ.