Site icon Vistara News

2000 Notes Withdrawn: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ನಲ್ಲಿ 2000 ನೋಟು ಚಲಾವಣೆಯಲ್ಲಿ ಇಲ್ವಾ?

2000 Notes Withdrawn

ಬೆಂಗಳೂರು: ನಿರ್ವಾಹಕರು ಪ್ರಯಾಣಿಕರಿಂದ 2000 ಮುಖಬೆಲೆಯ ನೋಟನ್ನು ಪಡೆಯಬಾರದು (2000 Notes Withdrawn) ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಆದೇಶವನ್ನು ಹೊರಡಿಸಿತ್ತು. ಇದೀಗ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದು, ನಿಗಮವು ತನ್ನ ಆದೇಶವನ್ನು ವಾಪಸ್‌ ಪಡೆದಿದೆ. ಅಲ್ಲದೆ, ಇದಕ್ಕೆ ಕೆಎಸ್‌ಆರ್‌ಟಿಸಿ ಸಹ ಸ್ಪಷ್ಟೀಕರಣವನ್ನು ಕೊಟ್ಟಿದ್ದು, ಅಂತಹ ನಿಯಮವೇನೂ ಇಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶದಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಹಿಂಪಡೆದಿದೆ. ಮುಂದಿನ ಸೆಪ್ಟೆಂಬರ್‌ ವರೆಗೆ ನೋಟು ಬದಲಾವಣೆಗೆ ಕಾಲಾವಕಾಶವನ್ನು ಕೊಟ್ಟಿದ್ದು, ಅಷ್ಟರೊಳಗೆ ಚಲಾವಣೆಯನ್ನು ಮಾಡಬಹುದೆಂದು ತಿಳಿಸಿದೆ. ಆದರೆ, 2 ಸಾವಿರ ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ನೀಡದಂತೆ ಸೂಚನೆ ನೀಡಲಾಗಿದೆ.

ಇದರ ಬೆನ್ನಲ್ಲೇ ಸಾರಿಗೆ ಇಲಾಖೆಯ ಕೆಲ ಘಟಕ ವ್ಯವಸ್ಥಾಪಕರು ಆರ್‌ಬಿಐ ನಿರ್ದೇಶನದ ಮೇರೆಗೆ ಘಟಕದ ಹಣಕಾಸು ಶಾಖೆಯಲ್ಲಿ 2000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಆದೇಶ ಹೊರಡಿಸಿದ್ದರು. ಈ ಆದೇಶವು ನೌಕರರ ಕಂಗೆಣ್ಣಿಗೆ ಗುರಿಯಾಗಿ, ಆಕ್ರೋಶ ಹೆಚ್ಚಾಗುತ್ತಿದ್ದಂತೆ ಇದೀಗ ಆದೇಶವನ್ನು ವಾಪಸ್‌ ಪಡೆದಿದೆ.

ಬಿಎಂಟಿಸಿ ಆದೇಶ

ಬಿಎಂ‌ಟಿಸಿ ಕೇಂದ್ರ ಕಚೇರಿಯಿಂದ ಬಸ್ಸಿನಲ್ಲಿ ನಿರ್ವಾಹಕರು (ಕಂಡೆಕ್ಟರ್‌ಗಳು) ರೂ. 2000 ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶ ಹೊರಡಿಸಿಲ್ಲ. ಹೊಸಕೋಟೆ ಘಟಕದಿಂದ ಮಾತ್ರ ಈ ರೀತಿ ತಪ್ಪಾದ ಆದೇಶ ನೀಡಲಾಗಿದ್ದು, ತದನಂತರ ಈ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿ‌ಸಿ ಬಸ್ಸುಗಳಲ್ಲಿ ರೂ. 2000 ನೋಟುಗಳನ್ನು ಸ್ವೀಕರಿಸಲಾಗುತ್ತದೆ ಎಂದು ಮರು ಆದೇಶವನ್ನು ಹೊರಡಿಸಲಾಗಿದೆ. ಜತೆಗೆ ಕೆಎಸ್ಆರ್‌ಟಿ‌ಸಿಯು, ಬಸ್ಸಿನಲ್ಲಿ ನಿರ್ವಾಹಕರು ರೂ. 2000 ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

2000 ರೂ. ನೋಟು ಕೊಟ್ಟ ಗ್ರಾಹಕ; ಸ್ಕೂಟರ್​​ನಿಂದ ಪೆಟ್ರೋಲ್​ ವಾಪಸ್ ತೆಗೆದ ಬಂಕ್​ ಸಿಬ್ಬಂದಿ

2000 ರೂಪಾಯಿ ನೋಟನ್ನು ಆರ್​​ಬಿಐ ಹಿಂಪಡೆದ ಬೆನ್ನಲ್ಲೇ, ಎಲ್ಲರೂ ತಮ್ಮ ಬಳಿ ಇರುವ ನೋಟನ್ನು ಹೇಗಾದರೂ ದಾಟಿಸಬೇಕು ಎಂದೇ ಪ್ರಯತ್ನ ಮಾಡುತ್ತಿದ್ದಾರೆ. 2000 ರೂಪಾಯಿ ನೋಟನ್ನು (Rs 2,000 Notes) ಬದಲಿಸಿಕೊಳ್ಳಲು/ಬ್ಯಾಂಕ್​​ನಲ್ಲಿ ಡಿಪಾಸಿಟ್ ಇಡಲು ಆರ್​​ಬಿಐ ಸೆಪ್ಟೆಂಬರ್​ 30ರವರೆಗೆ ಸಮಯ ನೀಡಿದೆ. ಆದರೂ ಕೆಲವರು ಅಂಗಡಿಗಳಲ್ಲೋ, ಪೆಟ್ರೋಲ್ ಬಂಕ್​ಗಳಲ್ಲೋ ಅದನ್ನು ನಿಧಾನವಾಗಿ ದಾಟಿಸಲು ಪ್ಲ್ಯಾನ್ ಮಾಡುತ್ತಿದ್ದಾರೆ. ಆದರೆ, ಈ ಉಪಾಯ ಮಾಡಲು ಹೋದವನೊಬ್ಬನಿಗೆ ಪೆಟ್ರೋಲ್ ಬಂಕ್​ ಸಿಬ್ಬಂದಿಯೊಬ್ಬ ತಿರುಗೇಟು ನೀಡಿದ ಘಟನೆ ಉತ್ತರ ಪ್ರದೇಶದ ಜಲೌನ್​ ಜಿಲ್ಲೆಯಲ್ಲಿ ನಡೆದಿದೆ.

ಜಲೌನ್​​ನಲ್ಲಿರುವ ಪೆಟ್ರೋಲ್​ ಬಂಕ್ ಒಂದಕ್ಕೆ ತನ್ನ ಸ್ಕೂಟರ್ ತೆಗೆದುಕೊಂಡು ಹೋದವನೊಬ್ಬ ಪೆಟ್ರೋಲ್ ಹಾಕಿಸಿದ್ದಾನೆ. ಪೆಟ್ರೋಲ್ ಹಾಕಿಯಾದ ಬಳಿಕ 2000 ರೂಪಾಯಿ ನೋಟು ಕೊಡಲು ಯತ್ನಿಸಿದ. ಆದರೆ ಅದನ್ನು ತೆಗೆದುಕೊಳ್ಳಲು ಪೆಟ್ರೋಲ್​ ಬಂಕ್​​ನಲ್ಲಿದ್ದ ಪರಿಚಾರಕ ನಿರಾಕರಿಸಿದ. ಆದರೆ ಈತ ನನ್ನ ಬಳಿ ಬೇರೆ ಹಣವೇ ಇಲ್ಲ ಎಂದು ವಾದಿಸಿದ. ಆಗ ಪೆಟ್ರೋಲ್ ಬಂಕ್​ ಪರಿಚಾರಕ ಅವನನ್ನು ತಡೆದಿದ್ದಲ್ಲದೆ, ಆತನ ಸ್ಕೂಟರ್​ಗೆ ಆಗಷ್ಟೇ ಹಾಕಿದ್ದ ಪೆಟ್ರೋಲ್​​ ಅನ್ನು ವಾಪಸ್ ತೆಗೆದಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಅದನ್ನು ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: 2000 Notes Withdrawn: ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ಬರೀ 2 ಸಾವಿರ ರೂ. ನೋಟು; ಇದು ನೋಟು ವಾಪಸ್‌ ಎಫೆಕ್ಟ್

ಮೊದಲಿನಿಂದಲೂ ಹೀಗೊಂದು ಕ್ರಮ ಇದೆ. ದೊಡ್ಡಮೊತ್ತದ ನೋಟುಗಳಿಗೆ ಚಿಲ್ಲರೆ ಬೇಕು ಎಂದರೆ ಪೆಟ್ರೋಲ್​ ಬಂಕ್​​ನಲ್ಲಿ ಕೊಡಬೇಕು ಎಂದು. ಇಷ್ಟು ದಿನಗಳವರೆಗೆ ಪೆಟ್ರೋಲ್​ ಬಂಕ್​ಗಳಲ್ಲಿ ಈ 2000 ರೂಪಾಯಿ ನೋಟು ಸ್ವೀಕೃತವಾಗಿತ್ತು. ಆದರೆ ಅದು ಚಲಾವಣೆ ಇನ್ನು ಇರುವುದಿಲ್ಲ ಎಂದು ಗೊತ್ತಾದ ಮೇಲೆ ಕೆಲವು ಪೆಟ್ರೋಲ್​ ಬಂಕ್​​ಗಳೂ ಸ್ವೀಕರಿಸುತ್ತಿಲ್ಲ. ಇನ್ನೊಂದೆಡೆ ಮುಂಬಯಿ, ಬೆಂಗಳೂರು, ಕೋಲ್ಕತ್ತ ಮತ್ತು ಇತರ ಮಹಾನಗರದಗಳ ಹಲವು ಪೆಟ್ರೋಲ್​ಬಂಕ್​​ಗಳಲ್ಲಿ ಈಗ ಜನರು 2000 ರೂಪಾಯಿ ನೋಟು ಪಾವತಿಸಲು ಮುಂದಾಗುತ್ತಿದ್ದಾರೆ. 200-300 ರೂಪಾಯಿ ಪೆಟ್ರೋಲ್ ಹಾಕಿಸಿ, 2000 ರೂ.ಕೊಡುತ್ತಿದ್ದಾರೆ. ಕೆಲವು ಪೆಟ್ರೋಲ್​ ಬಂಕ್​ಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ ವಾಪಸ್ ಚಿಲ್ಲರೆ ಕೊಡುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version