ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 22 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 808 ಜನರಿಗೆ ಕೋವಿಡ್ ಟೆಸ್ಟ್ ಮಾಡಿದ್ದು, ಈ ಪೈಕಿ 22 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು. ಇದರಿಂದ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 92 ಕ್ಕೇರಿದೆ.
ಬೆಂಗಳೂರಿನಲ್ಲಿ 19 ಪ್ರಕರಣ, ದಕ್ಷಿಣ ಕನ್ನಡ 1, ಬಳ್ಳಾರಿಯಲ್ಲಿ 2 ಪ್ರಕರಣ ಪತ್ತೆಯಾಗಿದೆ. 92 ಸಕ್ರಿಯ ಪ್ರಕರಣಗಳಲ್ಲಿ 72 ಮಂದಿಗೆ ಹೋಮ್ ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. 20 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿ 7 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೋವಿಡ್‌ನಿಂದ ಇಬ್ಬರು ಮೃತಪಟ್ಟಿದ್ದು, ಕೋವಿಡ್ ಪಾಸಿಟಿವಿಟಿ ದರ ಶೇ.2.47 ಇದ್ದು, ಮರಣ ಪ್ರಮಾಣ ದರ ಶೇ. 10 ಇರುವುದು ವರದಿಯಾಗಿದೆ.
ರಾಜ್ಯದಲ್ಲಿ ಈವರೆಗೆ ಒಟ್ಟು 40,89,150 ಕೋವಿಡ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 40,48,695 ಮಂದಿ ಗುಣಮುಖರಾಗಿದ್ದಾರೆ. 40,320 ಮಂದಿ ಮೃತಪಟ್ಟಿದ್ದಾರೆ.
ಇನ್ನು ಮಾಸ್ಕ್ ಧರಿಸಿ ಬಸ್‌ನಲ್ಲಿ ಪ್ರಯಾಣಿಸಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 (COVID Subvariant JN1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ, ಆರೋಗ್ಯ ಇಲಾಖೆ ಈಗಾಗಲೇ ಹಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಮಾನ್ಯವಾಗಿ ಹೆಚ್ಚು ಜನ ಸೇರುವಲ್ಲಿ ಕೋವಿಡ್ ಸೇರಿದಂತೆ ಯಾವುದೇ ವೈರಾಣುಗಳು ಬಹುಬೇಗ ಹರಡುತ್ತವೆ. ಇದೇ ರೀತಿ ಬಸ್‌ಗಳಲ್ಲಿ ಹೆಚ್ಚಿನ ಜನರು ಪ್ರಯಾಣಿಸುತ್ತಾರೆ. ಹೀಗಾಗಿ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಬಸ್ ಪ್ರಯಾಣಿಕರೆಲ್ಲರೂ ಮಾಸ್ಕ್ ಧರಿಸಿ ಸಂಚಾರ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Transport Minister Ramalinga Reddy) ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಎಲ್ಲ ಕಡೆ ಕೊರೊನಾ ಸೋಂಕು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು. ಸರ್ಕಾರ ಈಗಾಗಲೇ ಕೆಲವು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಸಂಚಾರ ಮಾಡುವವರು ಮಾಸ್ಕ್ ಅನ್ನು ಧರಿಸಿ ತಮ್ಮ ಆರೋಗ್ಯ ಹಾಗೂ ಬೇರೆಯವರ ಆರೋಗ್ಯವನ್ನು ಕಾಪಾಡಬೇಕು ಎಂದು ಹೇಳಿದ್ದಾರೆ .
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಕೇಂದ್ರ ಆರೋಗ್ಯ ಸಚಿವರ ಜತೆ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಸರ್ಕಾರದ ಆದೇಶವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಸಾರಿಗೆ ನಿಗಮ ಮತ್ತು ಮುಜರಾಯಿ ಇಲಾಖೆಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಕೇರಳಕ್ಕೆ ಹೋಗುವ ಬಸ್‌ಗಳಿಗೆ ಸ್ಯಾನಿಟೈಸರ್ ಸಿಂಪಡಣೆ
ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ಅಲ್ಲಿ ಸಾಕಷ್ಟು ಪ್ರಕರಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಾವು ಕಟ್ಟೆಚ್ಚರ ವಹಿಸಬೇಕಿದೆ. ಹೀಗಾಗಿ ಕೇರಳದಿಂದ ಬರುವ ಹಾಗೂ ಅಲ್ಲಿಗೆ ಹೋಗುವ ಬಸ್‌ಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಕಡ್ಡಾಯ
ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 (COVID Subvariant JN1) ಪತ್ತೆಯಾದ ಹಿನ್ನೆಲೆಯಲ್ಲಿ ಕೋವಿಡ್ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಸೂಚಿಸಿದ್ದಾರೆ.
ವಿಕಾಸಸೌಧದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಆರೋಗ್ಯ ಸಚಿವರ ಜತೆ ಸಭೆಯಲ್ಲಿ ಕೆಲವೊಂದು ಮಹತ್ವದ ಅಂಶಗಳನ್ನು ಚರ್ಚೆ ಮಾಡಿದ್ದಾರೆ. ರಾಜ್ಯದ ಕೋವಿಡ್ ಸ್ಥಿತಿಗತಿಗಳು ಹಾಗೂ ಸಿದ್ಧತೆ, ಜಿನೋಮಿಕ್ ಸೀಕ್ವೆನ್ಸ್ ಬಗ್ಗೆ ವಿವರಣೆ ನೀಡಿದ್ದಾರೆ. ಆಕ್ಸಿಜನ್ ಸಿದ್ಧತೆ, ಬೆಡ್‌ಗಳ ವ್ಯವಸ್ಥೆಗಳ ಬಗ್ಗೆ ಈ ವೇಳೆ ಚರ್ಚೆ ನಡೆದಿದೆ. ಕೇರಳ ಹಾಗೂ ಕರ್ನಾಟಕ ಗಡಿಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳೇನು? ಕೇರಳದಿಂದ ಬಂದವರಿಗೆ ಟೆಸ್ಟಿಂಗ್ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಎಲ್ಲ ಸಿಬ್ಬಂದಿಯು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇವರು ಯಾವುದೇ ರೋಗಿಗಳಿಗೆ ಹತ್ತಿರದಿಂದ ಕಾರ್ಯನಿರ್ವಹಣೆ ಮಾಡುವುದರಿಂದ ಮಾಸ್ಕ್ ಧಾರಣೆ ಸೇರಿದಂತೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ.
ಕ್ರಿಸ್ಮಸ್, ನ್ಯೂಇಯರ್ ಸೆಲೆಬ್ರೇಷನ್‌ಗೆ ನಿರ್ಬಂಧ ಇಲ್ಲ
ಡಿಸೆಂಬರ್ 21ರ ಗುರುವಾರ ಸಿಎಂ ಸಿದ್ದರಾಮಯ್ಯ ಅವರ ಜತೆ ಸಭೆ ಇದೆ. ಅಲ್ಲಿ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಕ್ರಿಸ್ಮಸ್ ಹಾಗೂ ನ್ಯೂಇಯರ್ ಸೆಲೆಬ್ರೇಷನ್‌ಗೆ ಸದ್ಯಕ್ಕೆ ಯಾವುದೇ ನಿರ್ಬಂಧವನ್ನು ವಿಧಿಸುವುದಿಲ್ಲ. ಮುಂದಿನ ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು. ವಿದೇಶಗಳಿಂದ ಬಂದವರ ಮೇಲೆ ನಿಗಾ ಇಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜತೆಗಿನ ಸಭೆಯಲ್ಲಿ ಪ್ರಶ್ನೆ ಮಾಡಲಾಗಿದೆ. ಆದರೆ, ಅದಕ್ಕೆ ಯಾವುದೇ ನಿರ್ಬಂಧ ಹೇರುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇದನ್ನೂ ಓದಿ | COVID Subvariant JN1: ರಾಜ್ಯದಲ್ಲಿ ರೂಪಾಂತರ ತಳಿ ಕೊರೊನಾಗೆ ಮೊದಲ ಬಲಿ!
ಈ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಗಡಿ ಭಾಗದಲ್ಲಿ ಕರ್ನಾಟಕದ 4 ಜಿಲ್ಲೆಗಳಿವೆ. ಹೀಗಾಗಿ ರಾಜ್ಯದಲ್ಲಿ ನಾವು ಎಚ್ಚರಿಕೆಯನ್ನು ವಹಿಸಿದ್ದೇವೆ. ಸದ್ಯಕ್ಕೆ ಕರ್ನಾಟಕದಲ್ಲಿ ಪ್ಯಾನಿಕ್ ಆಗುವಂತಹ ಪರಿಸ್ಥಿತಿ ಇಲ್ಲ. ನಾವು ಕೋವಿಡ್ ಟೆಸ್ಟಿಂಗ್‌ಗಳನ್ನು ಹೆಚ್ಚು ಮಾಡುತ್ತಿದ್ದೇವೆ. ಐಸಿಯು ಬೆಡ್, ವೆಂಟಿಲೇಟರ್ಸ್, ಆಕ್ಷಿಜನ್ ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಂಡಿದ್ದೇವೆ. ಈಗಾಗಲೇ ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಾಗ ಕೇಂದ್ರದ ನೆರವನ್ನು ಕೋರಲಾಗುವುದು. ಆಗ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ