Site icon Vistara News

Lakshmi Hebbalkar: ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು 250 ಅಂಗನವಾಡಿ ಆಯ್ಕೆ; ಜು.22ಕ್ಕೆ ಚಾಲನೆ

Lakshmi Hebbalkar

ಬೆಂಗಳೂರು: ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಲು ಮೊದಲ ಹಂತದಲ್ಲಿ ಬೆಂಗಳೂರಿನ 250 ಅಂಗನವಾಡಿಗಳನ್ನು ಗುರುತಿಸಿದ್ದು, ಹಂತಹಂತವಾಗಿ ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ತಿಳಿಸಿದ್ದಾರೆ.

ಶನಿವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದೊರೆತ ತಾತ್ವಿಕ ಒಪ್ಪಿಗೆ ಮೇರೆಗೆ ಹಂತ-ಹಂತವಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿಯೂ ಪೂರ್ವ ಪ್ರಾಥಮಿಕ (LKG & UKG) ಗಳನ್ನು ಪ್ರಾರಂಭಿಸಲು ಆದೇಶಿಸಲಾಗಿದೆ. ಅದರಂತೆ, ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (LKG & UKG) ಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ಉತ್ತರ ಜಿಲ್ಲೆಯ 62, ಪೂರ್ವ ಜಿಲ್ಲೆಯ 20, ಕೇಂದ್ರ ಜಿಲ್ಲೆಯ 50, ಬೆಂಗಳೂರು ರಾಜ್ಯ (ಪ್ರೊಜೆಕ್ಟ್) 50, ಬೆಂಗಳೂರು ದಕ್ಷಿಣ 48, ಆನೆಕಲ್ 20 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದ್ದು, 1,238 ಗಂಡು ಹಾಗೂ 1,203 ಹೆಣ್ಣು ಮಕ್ಕಳು ಸೇರಿ ಒಟ್ಟು 2,441 ಮಕ್ಕಳು ಇದರಲ್ಲಿ ಒಳಗೊಳ್ಳಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Shivamogga News: ಹುಲಗಾರು–ಮೈತಳ್ಳಿ ಸಂಪರ್ಕ ರಸ್ತೆಯಲ್ಲಿ ದರೆ ಕುಸಿತ; ಡಿಸಿ ಭೇಟಿ, ಪರಿಶೀಲನೆ

04 ರಿಂದ 06 ವರ್ಷದ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ಪಠ್ಯ, ಪುಸ್ತಕ (ಆಂಗ್ಲ ಹಾಗೂ ಕನ್ನಡ ಮಾಧ್ಯಮ) ನೀಡಲು, 1 ಜತೆ ಸಮವಸ್ತ್ರ ನೀಡಲು, 1 ಬ್ಯಾಗ್ ಮತ್ತು ಪೆನ್ಸಿಲ್ ಬಾಕ್ಸ್ ನೀಡಲು ನಿರ್ಧರಿಸಲಾಗಿದೆ. ಇದಕ್ಕೆ ಸಿಎಸ್ಆರ್ ಫಂಡ್ ಪಡೆಯಲು ಉದ್ದೇಶಿಸಲಾಗಿದೆ. LKG & UKG -ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ಪ್ರತಿ ದಿನ ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಪೂರ್ವ ಪ್ರಾಥಮಿಕ ಕೇಂದ್ರಗಳಲ್ಲಿ ಹಾಲಿ PUC ಮತ್ತು ಪದವಿ/ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಹಾಗೂ ಈಗಾಗಲೇ ಅಗತ್ಯ ತರಬೇತಿ ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಮಾತ್ರ ಬೋಧನೆ ಮಾಡಲು ಗುರುತಿಸಲಾಗಿದೆ. ಆಂಗ್ಲ ಹಾಗೂ ಕನ್ನಡ ಮಾಧ್ಯಮಗಳಲ್ಲಿ ಬೋಧನೆ ಮಾಡಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Chenab Bridge: ಐಫೆಲ್ ಟವರ್‌ಗಿಂತ ಎತ್ತರದ ಚೆನಾಬ್ ಸೇತುವೆ ಆಗಸ್ಟ್ 15ರಂದು ಉದ್ಘಾಟನೆಗೆ ಸಜ್ಜು!

ಇದೇ ಸೋಮವಾರ, ಜುಲೈ 22ರಿಂದ 250 ಅಂಗನವಾಡಿ ಕೇಂದ್ರಗಳಲ್ಲಿ LKG & UKG ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Exit mobile version