ಬೆಂಗಳೂರು: ಈ ಬಾರಿಯ ಮುಂಗಾರು ಮಳೆಯ (Rain News) ಅನಾಹುತಕ್ಕೆ ರಾಜ್ಯದಲ್ಲಿ ಒಟ್ಟು 27 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಈಗ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಒಂದು ಹಾಗೂ ಉತ್ತರ ಕನ್ನಡದಲ್ಲಿ ನಾಲ್ಕು ಕಾಳಜಿ ಕೇಂದ್ರಗಳನ್ನು (Care Center) ತೆರೆದಿದ್ದೇವೆ. ಮುಂದಿನ ವಾರದ ರಾಜ್ಯದಲ್ಲಿ ಹೈ ಅಲರ್ಟ್ (High Rain Alert) ಘೋಷಿಸಲಾಗಿದ್ದು, ಎಲ್ಲ ಜಿಲ್ಲಾಧಿಕಾರಿಗಳಿಗೆ ಸಜ್ಜಾಗಿ ಇರುವಂತೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ (Revenue Minister Krishna ByreGowda) ಹೇಳಿದರು.
ರಾಜ್ಯದಲ್ಲಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವ ಕೃಷ್ಣ ಭೈರೇಗೌಡ, ಮೃತಪಟ್ಟ 27 ಮಂದಿಯಲ್ಲಿ ಎಂಟು ಜನ ಸಿಡಿಲಿಗೆ ಬಲಿಯಾಗಿದ್ದಾರೆ. ಕೆಲವರು ಕಾಲು ಜಾರಿ ಹಳ್ಳಗಳಲ್ಲಿ ಬಿದ್ದಿದ್ದಾರೆ. ಮೂಡಿಗೆರೆ ಒಂದು, ರಾಣೆಬೆನ್ನೂರು ಒಂದು, ಕಲಬುರಗಿಯಲ್ಲಿ ಇಬ್ಬರು ಮಕ್ಕಳು ಹೊಂಡದಲ್ಲಿ ಮುಳುಗಿ ಸಾವಾಗಿದೆ. ಈ ಪ್ರಕರಣಗಳನ್ನೂ ನಾವು ಪ್ರಕೃತಿ ವಿಕೋಪ ಎಂದೇ ಪರಿಗಣಿಸಿದ್ದೇವೆ. ಮಳೆ ಸಂಬಂಧ ನಾನು ರಾಜ್ಯ ಪ್ರವಾಸಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: HD Kumaraswamy : ಸರ್ಕಾರ ಕೆಡವಲು ಸಿಂಗಾಪುರಕ್ಕೆ ಹೋದರೇ ಎಚ್‌ಡಿಕೆ? ನನಗೆ ಗೊತ್ತಿದೆ ಅಂದ್ರು ಡಿಕೆಶಿ!
ಕರಾವಳಿ ಭಾಗದಲ್ಲಿ (coastal region) ವ್ಯಾಪಕ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಕಡೆ ಹಾಗೂ ದಕ್ಷಿಣ ಕನ್ನಡದ ಕಡಬದಲ್ಲಿ ಕಾಳಜಿ ಕೇಂದ್ರವನ್ನು ತೆರೆದಿದ್ದೇವೆ. ಇಲ್ಲಿ ಒಟ್ಟಾರೆಯಾಗಿ 34 ಜನ ಆಶ್ರಯವನ್ನು ಪಡೆದಿದ್ದಾರೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಎಲ್ಲ ಜಿಲ್ಲೆಗಳ ಜತೆ ನಿರಂತರ ಸಂಪರ್ಕ
ಎಲ್ಲ ಜಿಲ್ಲೆಗಳ ಜತೆಯೂ ನಾವು ನಿರಂತರ ಸಂಪರ್ಕದಲ್ಲಿ ಇದ್ದೇವೆ. ಮಳೆ ಎಲ್ಲೆಲ್ಲಿ ಆಗುತ್ತಲಿದೆ ಎಂಬುದರ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಮುಂದಿನ ವಾರ ಹೈ ಅಲರ್ಟ್‌ನಲ್ಲಿ ಇರಬೇಕಾಗುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಸಜ್ಜಾಗಿರುವಂತೆ ಸೂಚನೆ ನೀಡಲಾಗಿದೆ. ಮಂಗಳವಾರ (ಜುಲೈ 25) ನಾನು ಮೈಸೂರು ಪ್ರಾಂತ್ಯದಲ್ಲಿ (Mysore Region) ಪ್ರಗತಿ ಪರಿಶೀಲನೆ ಸಭೆಯನ್ನು ಇಟ್ಟುಕೊಂಡಿದ್ದೆ. ಆದರೆ ಸದ್ಯಕ್ಕೆ ಅದನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಕಳೆದ ಕೆಲವು ದಿನಗಳಲ್ಲಿ ಅಧಿಕ ಮಳೆಯಾಗಿದೆ. ಮುಂದೆ ಮುಂಗಾರು ಮತ್ತಷ್ಟು ಚುರುಕಾಗಲಿದೆ. ಕರಾವಳಿ ಭಾಗ, ಬೆಳಗಾವಿಯಲ್ಲಿ ಹೆಚ್ಚು ಮಳೆಯಾಗಲಿದೆ. ಬೀದರ್, ಯಾದಗಿರಿ, ವಿಜಯಪುರ, ಕಲಬುರಗಿಯಲ್ಲೂ ಅತಿ ಹೆಚ್ಚು ಮಳೆಯಾಗಲಿದೆ. ಈಗ ಈ ಭಾಗದಲ್ಲಿ ವಾಡಿಗೆಕಿಂತ ಹೆಚ್ಚು ಮಳೆಯಾಗಿದೆ. ಅಲ್ಲದೆ, ಮುಂದೆ ಮಳೆ ಹೆಚ್ಚಳಗೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸೂಚಿಸಿದ್ದೇನೆ. ಈಗಾಗಲೇ ರಾಜ್ಯದ ಅಲ್ಲಲ್ಲಿ 12 ಬ್ರಿಡ್ಜ್ ಮೇಲೆ ನೀರು ಹರಿಯುತ್ತಿದೆ. ಇನ್ನು ವಸತಿ ಪ್ರದೇಶ, ನೀರು ನುಗ್ಗುವ ಪ್ರದೇಶಗಳ ಕಡೆ ಗಮನ ಇರಲಿ, ಅವುಗಳನ್ನು ವೀಕ್ಷಣೆ ಮಾಡಿ ಎಂದು ಸೂಚನೆ ನೀಡಲಾಗಿದೆ. ಒಟ್ಟಾರೆಯಾಗಿ ಜಿಲ್ಲಾಧಿಕಾರಿಗಳಿಗೆ ಹೈ ಅಲರ್ಟ್ ಕೊಡಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಜುಲೈನಲ್ಲಿ ಹೆಚ್ಚು ಮಳೆ
ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಲಿದೆ. ವಾಡಿಕೆಗಿಂತ ಹೆಚ್ಚು ಮಳೆ ಆಗುತ್ತಲಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜುಲೈನಲ್ಲಿ ಹೆಚ್ಚು ಮಳೆಯಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಲಿದೆ. ಜೂನ್ ತಿಂಗಳ ಅಂತ್ಯದಲ್ಲಿ ಶೇಕಡಾ 56ರಷ್ಟು ಮಳೆ ಕೊರತೆ ಇತ್ತು. ಒಂದು ವಾರದಲ್ಲಿ ಆಗಿರುವ ಮಳೆಯಿಂದಾಗಿ ಈ ಕೊರತೆ ಪ್ರಮಾಣವು ಸೋಮವಾರಕ್ಕೆ ಶೇಕಡಾ 14ಕ್ಕೆ ಇಳಿದಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಜಲಾಶಯಗಳಲ್ಲಿ ಹೆಚ್ಚಿದ ನೀರು
ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಮಳೆ ಕಡಿಮೆ ಇದೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಮಳೆ ಕೊರತೆ ಇದೆ. ಮಲೆನಾಡಿನಲ್ಲಿ ಮಳೆ ಆಗುತ್ತಿದೆ. ಆದರೂ ವಾಡಿಕೆಗೆ ಹೋಲಿಕೆ ಮಾಡಿದರೆ ಕಡಿಮೆ ಆಗಿದೆ. ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗಿದೆ. ಸರಾಸರಿ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಆಗುತ್ತಿದೆ. ಒಂದು ವಾರದ ಹಿಂದೆ ಜಲಾಶಯಗಳಲ್ಲಿ ನೀರು ಇರಲಿಲ್ಲ. ಇಂದು ಒಟ್ಟು ಜಲಾಶಯಗಳಲ್ಲಿ 40 ಪರ್ಸೆಂಟ್ ನೀರು ಇದೆ. ಕಳೆದ 7 ದಿನಗಳಲ್ಲಿ ಜಲಾಶಯಗಳಲ್ಲಿ 144 ಟಿಎಂಸಿ ನೀರು ಸ್ಟೋರ್ ಆಗಿದೆ. ಭಾನುವಾರ ಒಂದೇ ದಿನ 40 ಟಿಎಂಸಿ ನೀರು ಶೇಖರಣೆಯಾಗಿದೆ. ಕಾವೇರಿ, ಕೃಷ್ಣ ತಪ್ಪಲಿನ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಕಾವೇರಿ ತಪ್ಪಲಿನ ಹಾರಂಗಿ, ಹೇಮಾವತಿ, ಕಬಿನಿ, ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣ ಉತ್ತಮವಾಗಿದೆ. ಹೊರ ಹರಿವು ಕೂಡ ಈಗ ಆರಂಭ ಆಗಿದೆ. ಕೃಷ್ಣ ತಪ್ಪಲಿನ ಜಲಾಶಯಗಳಲ್ಲಿ 2 ಲಕ್ಷ 61 ಸಾವಿರ 164 ಕ್ಯೂಸೆಕ್ ಒಳ ಹರಿವು ಇದೆ ಎಂದು ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.
ಇದನ್ನೂ ಓದಿ: BK Hariprasad : ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ: ಬಿ.ಕೆ. ಹರಿಪ್ರಸಾದ್ ಗುಡುಗು
ಬರ ತಾಲೂಕು ಘೋಷಣೆ ಕಷ್ಟ
ಕೇಂದ್ರ ಸರ್ಕಾರ ಬರ ಘೋಷಣೆಗೆ ಒಂದಿಷ್ಟು ಮಾನದಂಡ ಹಾಕಿದೆ. ಆ ಪ್ರಕಾರ, ಶೇಕಡಾ 60ರಷ್ಟು ಮಳೆ ಕೊರತೆ ಇರಬೇಕು. ಮೂರು ವಾರ ಮಳೆ ಇರಬಾರದು ಎಂದು ಕೇಂದ್ರದ ಮಾನದಂಡ ಇದೆ. ಈಗ ಎಲ್ಲೂ 60 ಪರ್ಸೆಂಟ್‌ನಷ್ಟು ಮಳೆ ಕೊರತೆ ಆಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಯಿಂದ ಕೇಂದ್ರಕ್ಕೆ ಪತ್ರ ಬರೆಯಲಾಗುತ್ತದೆ. ಈ ಮಾನದಂಡವನ್ನು ಮರು ಪರಿಶೀಲನೆ ಮಾಡಿ ಎಂದು ಕೇಳಿಕೊಳ್ಳಲಾಗುತ್ತದೆ. ಆಯಾಯ ರಾಜ್ಯಕ್ಕನುಗುಣವಾಗಿ ಬರ ಮಾನದಂಡವನ್ನು ನಿಗದಿ ಮಾಡಿ ಎಂದು ಹೇಳಲಾಗುತ್ತದೆ. ಮಾನ ದಂಡ ಬಿಗಿ ಮಾಡಿರುವುದರಿಂದ ಕೈ ಕಟ್ಟಿ ಹಾಕಿದ ಹಾಗಾಗಿದೆ. 25 ಪರ್ಸೆಂಟ್ ಮಳೆ ಕೊರತೆ ಬಗ್ಗೆ ಮಾನದಂಡ ಮಾಡಿ ಎಂಬ ಮನವಿಯನ್ನು ಕೇಂದ್ರ ಸರ್ಕಾರದ ಮುಂದೆ ಇಡಲಾಗುವುದು. ಕೇಂದ್ರದ ಅಧಿಕಾರಿಗಳ ಜತೆ ಒಂದು ಸಭೆ ನಡೆಯಲಿದ್ದು, ಈ ಬಗ್ಗೆ ಅಲ್ಲಿ ಪ್ರಸ್ತಾಪ ಮಾಡಲು ಹೇಳಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.