ದಾವಣಗೆರೆ: ಮೀಸಲಾತಿ (2A Reservation) ಬೇಕೆಂದರೆ ಬಸ್ಸಿಗೆ ಬೆಂಕಿ ಹಚ್ಚಿ, ಕಲ್ಲು ತೂರಿ. ಯಾರೂ ನಮಗೆ ಕರೆದು ಮೀಸಲಾತಿ ಕೊಡೋದಿಲ್ಲ, ಬೀದಿಗಿಳಿದು ಕಲ್ಲು ತೂರಿ, ಬೆಂಕಿ ಹಚ್ಚಬೇಕು ಎಂದು ಮುದ್ದೇಬಿಹಾಳ್ ತಂಗಡಗಿ ಮಠದ ಅನ್ನದಾನಿ ಭಾರತಿ ಹಡಪದ ಅಪ್ಪಣ್ಣ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಹಡಪದ ಜಯಂತಿ, ಜನಜಾಗೃತಿ ಸಮಾವೇಶದಲ್ಲಿ ಅವರು ಭಾಗವಹಿಸಿ, 2ಎ ಮೀಸಲಾತಿಗಾಗಿ ಹೋರಾಡಲು, ಸರ್ಕಾರದ ವಿರುದ್ಧ ದಂಗೆ ಏಳಲು ಕರೆ ನೀಡಿದರು. ಯಾರೂ ಸಹ ನಮಗೆ ಕರೆದು ಮೀಸಲಾತಿ ಸೌಲಭ್ಯ ಕೊಡುವುದಿಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅವಶ್ಯಕವಾಗಿದೆ. ನಮ್ಮ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟ ಮಾಡಬೇಕಿದೆ ಎಂದರು.
ಮಕ್ಕಳ ಭವಿಷ್ಯ ಉಜ್ವಲ ಆಗಬೇಕು ಎಂದರೆ ಬೀದಿಗೆ ಇಳಿಯಿರಿ. ಬೀದಿಗೆ ಇಳಿದು ಕಲ್ಲು ತೂರಿ, ಬೆಂಕಿ ಹಚ್ಚಿ. ಸೌಲಭ್ಯ ಕೊಡುತ್ತೇವೆ ಎಂದು ಯಾರೂ ಮುಂದೆ ಬರಲ್ಲ. ತಡ ಮಾಡದೇ ಹೋರಾಟ ಮಾಡಬೇಕಿದೆ. ಆಗ ಸವಲತ್ತು ಸಿಗುತ್ತವೆ, ಸುಮ್ಮಸುಮ್ಮನೆ ಯಾರೂ ಸೌಲಭ್ಯ ಕೊಡುವುದಿಲ್ಲ. ನಿಮ್ಮ ಹಕ್ಕು ಕಿತ್ತುಕೊಳ್ಳಿ, ನೀವೇ ಬೆಂಕಿ ಹಚ್ಚಿ. ಇಲ್ಲ ಎಂದರೆ ನಿಮ್ಮ ಹಕ್ಕುಗಳನ್ನು ಮೂಟೆ ಕಟ್ಟೆ ಇಡಿ ಎಂದು ಹಡಪದ ಶ್ರೀ ಬೋಧಿಸಿದ್ದಾರೆ.
ರಾಜ್ಯದಲ್ಲಿ ಎಸ್ಸಿ, ಎಸ್‌ಟಿ ಸಮುದಾಯಕ್ಕಿಂತ ಹೀನಾಯ ಸ್ಥಿತಿಯಲ್ಲಿದ್ದೇವೆ. ಇಲ್ಲಿಯವರೆಗೆ ರಾಜ್ಯದ ಯಾವೊಬ್ಬ ಶಾಸಕನೂ ಕೂಡ ಹಡಪದ ಸಮುದಾಯಕ್ಕೆ ಸೌಲಭ್ಯಗಳನ್ನು ಕೊಡಲು ಮುಂದೆ ಬಂದಿಲ್ಲ. ರಾಜ್ಯದಲ್ಲಿ ಹಡಪದ ಸಂಘಟನೆಯ ಜಿಲ್ಲಾಧ್ಯ್ಷರಾಗಿ ಯಾರು ಆಯ್ಕೆ ಆಗುತ್ತಾರೋ ಅವರು ನೇರವಾಗಿ ಸರ್ಕಾರದೊಂದಿಗೆ ಗುದ್ದಾಡಿ ಸೌಲತ್ತು ಹಾಗೂ ಮೀಸಲಾತಿಯನ್ನು ಪಡೆಯಬೇಕು ಎಂದರು.
ನಾವೆಲ್ಲರೂ ಲಿಂಗಾಯತರು ಎಂದು ಹಣೆಪಟ್ಟಿ ಕಟ್ಟಿದ್ದಾರೆ. ನಮಗೆ ಬಸವಣ್ಣ ಕಟ್ಟಿದ ಇಷ್ಟಲಿಂಗದಿಂದ ಲಿಂಗಾಯತರು ಆಗಿದ್ದೇವೆ. ಆದರೆ, ನಾವು ಬೌದ್ಧ ಧರ್ಮ ಸ್ವೀಕಾರ ಮಾಡಿಬಿಡಬೇಕೆಂಬ ನಿರ್ಧಾರದ ಬಗ್ಗೆಯೂ ಮಾತನಾಡಿದ್ದೇನೆ. ನೀವು ನನ್ನೊಂದಿಗೆ ಇರಿ ಅಥವಾ ನೀವು ಹೋರಾಟಕ್ಕಿಳಿದರೆ ನಾನು ನಿಮ್ಮೊಂದಿಗೆ ಇರುತ್ತೇನೆ. ಹಡಪದ ಸಮುದಾಯದ ಮಕ್ಕಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದೀರಿ, ನಿಮಗೆ ವಿದ್ಯಾರ್ಥಿವೇತನ ಇತರೆ ಸೌಲಭ್ಯ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Hadapada Development Corporation: ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ