ಬೆಂಗಳೂರು: ಇಂದಿನಿಂದ (ಮಾರ್ಚ್ 9) ದ್ವಿತೀಯ ಪಿಯುಸಿ ಪರೀಕ್ಷೆ (2nd PU Exam 2023) ಆರಂಭವಾಗಲಿದೆ. ಇದಕ್ಕಾಗಿ ಎಲ್ಲ 1109 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ರಾಜ್ಯದ ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಪರೀಕ್ಷೆ ಮಾರ್ಚ್ 9ರಿಂದ ಮಾರ್ಚ್ 29ರವರೆಗೆ ನಡೆಯಲಿದ್ದು, ಈ ಮೊದಲೇ ತಿಳಿಸಿದಂತೆ ಹಿಜಾಬ್ ಧರಿಸಿ ಬಂದವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯೂ ಸೇರಿದಂತೆ ಎಲ್ಲ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ದೋಷಮುಕ್ತವಾಗಿ ಪರೀಕ್ಷೆ ನಡೆಯಲಿದೆ. ಯಾವುದೇ ಊಹಾಪೋಹ ವದಂತಿಗಳಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಿವಿಗೊಡಬಾರದು ಎಂದು ಶಿಕ್ಷಣ ಇಲಾಖೆ ಮನವಿ ಮಾಡಿದೆ.
726195 ವಿದ್ಯಾರ್ಥಿಗಳಿಗೆ ಪರೀಕ್ಷೆ
ರಾಜ್ಯದ 5,716 ಕಾಲೇಜುಗಳ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಇವರ ಪೈಕಿ 6,29,760 ಮಂದಿ ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದರೆ, 25,847 ಮಂದಿ ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. 70,588 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು. ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 3,04,715 ಮಂದಿ ಹುಡುಗರಾದರೆ, 3,25,045 ಮಂದಿ ಹುಡುಗಿಯರು. ಒಟ್ಟು 1,109 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲಿ ಸರಾಸರಿ 25 ಪರೀಕ್ಷಾ ಕೇಂದ್ರಗಳಿವೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 156 ಕೇಂದ್ರಗಳಿದ್ದರೆ, ರಾಮನಗರದಲ್ಲಿ ಅತಿ ಕಡಿಮೆ ಅಂದರೆ 13 ಕೇಂದ್ರಗಳಿವೆ. ಬೆಂಗಳೂರಿನಲ್ಲಿ 1.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.
ಕೇಂದ್ರಕ್ಕೆ ಒಬ್ಬರಂತೆ ಸಹಮುಖ್ಯ ಅಧೀಕ್ಷಕರು, ಜಿಲ್ಲಾ ಜಾಗ್ರತ ದಳ – 64, ತಾಲೂಕು ಜಾಗ್ರತ ದಳ – 525, ವಿಶೇಷ ಜಾಗ್ರತ ದಳ – 2373 ಸಿಬ್ಬಂದಿ ಕಾರ್ಯಾಚರಿಸಲಿದ್ದಾರೆ.
ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆ
ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 9, 2023ರಿಂದ ಮಾರ್ಚ್ 29, 2023ರವರೆಗೆ ನಡೆಯಲಿವೆ. ಪದವಿ ಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಮ್ಮ ಹಾಲ್ ಟಿಕೆಟ್‌ಗಳನ್ನು ಕೊಂಡೊಯ್ಯಬೇಕು. ಪಿಯು ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಪರೀಕ್ಷೆಗೆ ಕೈಗೊಂಡಿರುವ ಭದ್ರತಾ ಕ್ರಮಗಳು ಏನೇನು?
-ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
-ಸಿಸಿ ಕ್ಯಾಮೆರಾ ಕಣ್ಗಾವಲು, ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ ಬಂದ್
-ಸೈಬರ್ ಸೆಂಟರ್, ಟ್ಯೂಷನ್ ಕೇಂದ್ರಗಳು, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ವಿಶೇಷ ನಿಗಾ
-ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಗಳು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ
-ಹಿಂದಿನ ವರ್ಷಗಳಲ್ಲಿ ಪರೀಕ್ಷಾ ಅಕ್ರಮ ವರದಿಯಾಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ
-ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳ ನಿಷೇಧ
-ವಿದ್ಯಾರ್ಥಿಗಳು ಸಮಯ ನೋಡಿಕೊಳ್ಳಲು ಗೋಡೆ ಗಡಿಯಾರದ ವ್ಯವಸ್ಥೆ ಮಾಡಲಾಗುತ್ತದೆ.
-ವದಂತಿಗಳನ್ನು ಹಬ್ಬಿಸುವ ಕಿಡಿಗೇಡಿಗಳ ಮೇಲೆ ಸೈಬರ್ ಅಧಿಕಾರಿಗಳು, ಸ್ಥಳೀಯ ಪೊಲೀಸರು ಹಾಗೂ ಇನ್ನಿತರ ತಂಡಗಳು ವಿಶೇಷ ನಿಗಾ
-ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರಹಣೆ, ಮೌಲ್ಯಮಾಪನ ಕೇಂದ್ರಗಳಲ್ಲಿ 24/7 ಪೊಲೀಸ್ ಭದ್ರತೆ
-ಪರೀಕ್ಷಾ ಕೇಂದ್ರಗಳಲ್ಲಿ ಭದ್ರತಾ ಕಾರ್ಯ ಮತ್ತು ಪರೀಕ್ಷಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮೊಬೈಲ್ ಫೋನ್ ಬಳಕೆ ನಿಷೇಧ
-ಪರೀಕ್ಷಾ ಕೇಂದ್ರದ ಅಧೀಕ್ಷಕರು ಮಾತ್ರ ಕ್ಯಾಮೆರಾ ಸೌಲಭ್ಯ ಇಲ್ಲದ ಬೇಸಿಕ್ ಮೊಬೈಲ್ ಫೋನ್ ಇಟ್ಟುಕೊಳ್ಳಬಹುದು.
– ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ.
– ವಿಶೇಷ ಚೇತನ ಮಕ್ಕಳಿಗೆ 15 ನಿಮಿಷ ಮೊದಲು ಬರಲು ಅವಕಾಶ.
– ಸಮಯ ಹೆಚ್ಚು ಬೇಕಿರುವವರು ವೈದ್ಯರ ಸರ್ಟಿಫಿಕೇಟ್ ಕಡ್ಡಾಯವಾಗಿ ಪಡೆದಿರಬೇಕು.
ಇದನ್ನೂ ಓದಿ : SSLC Exam 2023 : ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಬದಲಾವಣೆ; ಈ ಬಾರಿ ರಾಜ್ಯ ಮಟ್ಟದಲ್ಲಿ ಸಿದ್ಧವಾಗಲಿದೆ ಪ್ರಶ್ನೆ ಪತ್ರಿಕೆ