ವಿಜಯಪುರ: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ (2nd Pu Exam) ಬರೆಯುತ್ತಿದ್ದರೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಈ ಹುಡುಗಿಗೆ ಮಾತ್ರ ಅಗ್ನಿ ಪರೀಕ್ಷೆಯೇ ಎದುರಾಗಿದೆ.
ಆಕೆಯ ಪರೀಕ್ಷಾ ಹಾಲ್ ಟಿಕೆಟ್‌ಗಳು ಒಮ್ಮೆ ಸುಟ್ಟು ಹೋಗುತ್ತವೆ, ಮತ್ತೆ ಮತ್ತೆ ಹರಿದು ಹೋಗುತ್ತವೆ. ಯಾಕಿದು? ಯಾರು ಹೀಗೆ ಮಾಡುತ್ತಿದ್ದಾರೆ? ನಿಜಕ್ಕೂ ಅವಳು ಪರೀಕ್ಷೆಗೆ ಹೋಗುವುದನ್ನು ತಡೆಯುತ್ತಿರುವ ಶಕ್ತಿ ಯಾವುದು? ಯಾರು ಆಕೆಯ ಬಾಳನ್ನು ಅಗ್ನಿ ಪರೀಕ್ಷೆಗೆ ಒಡ್ಡಿದ್ದು ಎಂಬ ಪ್ರಶ್ನೆಗಳು ಕಾಡುವಂತಾಗಿದೆ.
ಇದು ವಿಜಯಪುರ ಜಿಲ್ಲೆಯ ನಿಡಗುಂದಿ ತಾ. ಗೊಳಸಂಗಿ ಗ್ರಾಮದ ನಿವಾಸಿಯಾಗಿರುವ ಪವಿತ್ರಾ ಪುಂಡಲೀಕ ಗುಡ್ಡದ (18) ದ್ವಿತೀಯ ಪಿಯು ವಿದ್ಯಾರ್ಥಿನಿಯ ಕಥೆ. ಆಕೆಗೆ ಮೂರು ಮೂರು ಬಾರಿ ಹಾಲ್ ಟಿಕೆಟ್ ಕೊಟ್ಟರೂ ಅದು ಮೂರು ಬಾರಿಯೂ ಬೇರೆ ಬೇರೆ ಕಾರಣಗಳಿಗಾಗಿ ಹಾನಿಗೊಂಡಿವೆ! ಒಮ್ಮೆ ಹಾಲ್ ಟಿಕೆಟ್ ಸುಟ್ಟು ಭಸ್ಮವಾದರೆ, ಇನ್ನೆರಡು ಬಾರಿ ಹರಿದು ಚೂರು ಚೂರಾದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಎಲ್ಲವೂ ನಡೆದಿರುವುದು ಮನೆಯಲ್ಲೇ. ಈ ಘಟನೆ ಗೊಳಸಂಗಿ ಗ್ರಾಮಸ್ಥರಲ್ಲಿ ಅಚ್ಚರಿ, ಅನುಮಾನಗಳನ್ನು ಮೂಡಿಸಿದೆ.
ಪವಿತ್ರಾ ಓದುತ್ತಿರುವುದು ಬಿ ಎಸ್ ಪವಾರ್ ಪಿ ಯು ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ. ಆಕೆ ಎಲ್ಲರಂತೆ ಗುರುವಾರ ಪರೀಕ್ಷೆಗೆ ಹಾಜರಾಗಬೇಕಾಗಿತ್ತು. ಆಕೆ ಕಳೆದ ಶುಕ್ರವಾರ ಮೊದಲ ಹಾಲ್ ಟಿಕೇಟ್ ತಂದಿದ್ದಳು. ಅಚ್ಚರಿ ಎಂಬಂತೆ ಆ ಹಾಲ್ ಟಿಕೆಟ್ ಅದೇ ದಿನ ಅಚಾನಕ್ ಆಗಿ ಸುಟ್ಟು ಭಸ್ಮವಾಗಿದೆಯಂತೆ!
ಈ ವಿಚಾರ, ಅಚಾತುರ್ಯವನ್ನು ವಿವರಿಸಿ ಆಕೆ ಮತ್ತೆ ಎರಡನೇ ಪ್ರತಿಯನ್ನು ತಂದಿದ್ದಳು. ಮರುದಿನ ಆ ಹಾಲ್ ಕೂಡಾ ಹರಿದು ಚೂರಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ಕಾಲೇಜು ವ್ಯವಸ್ಥಾಪಕರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡು ಮೂರನೇ ಹಾಲ್ ಟಿಕೆಟ್ ತಂದಿದ್ದಳು ಪವಿತ್ರಾ. ಆದರೆ, ಇದು ಕೂಡಾ ತುಂಡು ತುಂಡಾಗಿ ಬಿದ್ದಿದೆ.
ಪ್ರಾಂಶುಪಾಲರಿಂದ ಮೂರನೇ ಬಾರಿಯು ತಂದ ಹಾಲ್ ಟಿಕೆಟ್ ಕೂಡಾ ಚೂರಾಗಿ ಹೋಗಿದ್ದರಿಂದ ಆಕೆ ಕಂಗಾಲಾಗಿದ್ದು, ಏನು ಮಾಡಬೇಕು ಎಂದು ದಿಕ್ಕು ಕಾಣದೆ ಕುಳಿತಿದ್ದಾಳೆ ಎನ್ನಲಾಗಿದೆ. ಹೀಗಾಗಿ ತನಗೆ ಹಾಲ್ ಟಿಕೆಟ್ ಇಲ್ಲದೆಯೇ ಪರೀಕ್ಷೆ ಬರೆಯಲು ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದಾಳೆ. ಆದರೆ, ಅದಕ್ಕೆ ಅನುಮತಿ ಸಿಕ್ಕಿಲ್ಲ.
ಅನಾಥವಾಗಿರುವ ಹುಡುಗಿ ಪವಿತ್ರಾ
ಪವಿತ್ರಾ ವರ್ಷದ ಹಿಂದೆ ಹೆತ್ತವರನ್ನು ಕಳೆದುಕೊಂಡು ಅನಾಥವಾಗಿದ್ದಾಳೆ. ಬಂಧುಗಳ ಜತೆಗೆ ವಾಸವಾಗಿದ್ದಾಳೆ. ಹೀಗಾಗಿ ಆಕೆ ಪರೀಕ್ಷೆ ಬರೆಯದಂತೆ ತಡೆಯುವ ಒಂದು ಶಕ್ತಿ ಈ ರೀತಿ ಮಾಡುತ್ತಿರಬಹುದಾ? ಅಥವಾ ಕಾಣದ ಕೈಗಳ ಕೈವಾಡವೇ ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಆದರೆ, ಪವಿತ್ರಾ ಮೂರನೇ ಹಾಲ್ ಟಿಕೆಟನ್ನು ಕೂಡಾ ಯಾಕೆ ಮನೆಗೆ ತಂದಳು. ಯಾರಾದರೂ ಗೆಳತಿಯರ ಕೈಯಲ್ಲಿ ಕೊಟ್ಟಿದ್ದರೆ, ಶಿಕ್ಷಕರ ಗಮನಕ್ಕೆ ತಂದಿದ್ದರೆ ಪದೇಪದೆ ನಾಶವಾಗುವುದನ್ನು ತಪ್ಪಿಸಬಹುದಿತ್ತಾ ಎಂಬ ಪ್ರಶ್ನೆಯೂ ಇದೆ. ಸ್ವತಃ ವಿದ್ಯಾರ್ಥಿನಿಯೇ ಹಾಲ್ ಟಿಕೆಟ್ ಜತೆ ಆಟವಾಡುವ ಮೂಲಕ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾಳಾ ಎನ್ನುವ ಪ್ರಶ್ನೆಯೂ ಜತೆಗಿದೆ. ಒಟ್ಟಾರೆಯಾಗಿ ಇದರ ಹಿಂದಿನ ನಿಗೂಢತೆಯನ್ನು ಬೇಧಿಸಬೇಕಾಗಿದೆ. ವಿದ್ಯಾರ್ಥಿನಿಗೆ ನಿಜಕ್ಕೂ ಅನ್ಯಾಯವಾಗುತ್ತಿದ್ದರೆ ರಕ್ಷಣೆ ಒದಗಿಸಬೇಕಾಗಿದೆ.
ಇದನ್ನೂ ಓದಿ : 2nd PU Exam 2023: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಶುರು; ಮೇ ಮೊದಲ ವಾರ ಫಲಿತಾಂಶ ಎಂದ ಸಚಿವ ಬಿ.ಸಿ. ನಾಗೇಶ್