ಬಾಗಲಕೋಟೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂರನೇ ಬಾರಿಯೂ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿಯೊಬ್ಬಳು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೂಜಾ ಚಳಗೇರಿ (19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಗಲಗಲಿಯ ಶ್ರೀ ಗಾಲವ ಮಹರ್ಷಿ ಶಿಕ್ಷಣ ಸಂಸ್ಥೆಯ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಗಾಗಲೇ ಎರಡು ಬಾರಿ ಅನುತ್ತೀರ್ಣಳಾಗಿದ್ದ ಪೂಜಾ ಮೂರನೇ ಬಾರಿಗೆ ಪರೀಕ್ಷೆ ಬರೆದಿದ್ದಳು. ಇಂದು ಫಲಿತಾಂಶ ಪ್ರಕಟಗೊಂಡಿದ್ದು, ಎರಡು ವಿಷಯಗಳಲ್ಲಿ ಫೇಲಾಗಿದ್ದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ | ಎಕ್ಸಾಂ ಟೆನ್ಷನ್, ಹಿಜಾಬ್ ಕನ್ಫ್ಯೂಷನ್ ನಡುವೆ ನಡೆದ ಸಿಇಟಿ ಪರೀಕ್ಷೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಪೂಜಾ ಮೃತದೇಹ ಹೊರ ತೆಗೆದಿದ್ದಾರೆ. ಇತ್ತ ಮಗಳನ್ನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಡಗಿನಲ್ಲಿ ಫಲಿತಾಂಶಕ್ಕೂ ಮುನ್ನವೇ ಆತ್ಮಹತ್ಯೆ
ಪಿಯುಸಿ ಫಲಿತಾಂಶ ಪ್ರಕಟವಾಗುವುದಕ್ಕೂ ಮೊದಲೇ ಹೆದರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗಿನ ಕುಶಾಲನಗರದ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಂಧ್ಯಾ ಎಂಬ ವಿದ್ಯಾರ್ಥಿನಿ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಿವೃತ್ತ ಸೈನಿಕ ಶುಭಾಷ್ ಮತ್ತು ಸೌಮ್ಯ ದಂಪತಿಗಳ ಪುತ್ರಿಯಾಗಿರುವ ಸಂಧ್ಯಾ, ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಳು. ಇಂದು ಫಲಿತಾಂಶ ಪ್ರಕಟವಾಗಲಿದೆ ಎಂಬುದನ್ನು ತಿಳಿದು ಆತಂಕಗೊಂಡಿದ್ದಳು ಎಂದು ಪೋಷಕರು ತಿಳಿಸಿದ್ದಾರೆ. ಸಂಧ್ಯಾ ಯಾರು ಮನೆಯಲ್ಲಿಲ್ಲದ ಸಂದರ್ಭ ನೋಡಿ ನೇಣು ಬಿಗಿದು ಸಾವಿಗೀಡಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 67 ಅಂಕ ಗಳಿಸಿದ್ದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | 2nd puc Toppers| ಹಪ್ಪಳ ಮಾರುವವರ ಮಗಳು ಈಗ ಪಿಯುಸಿ ಟಾಪರ್! ಸಾಧನೆಗೆ ಯಾವುದೂ ಅಡ್ಡಿ ಅಲ್ಲ