ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ (2nd PUC Result 2023) ಫಲಿತಾಂಶ ಪ್ರಕಟವಾಗಿದ್ದು, ಟಾಪರ್ಸ್‌ಗಳು ತಮ್ಮ ಪರೀಕ್ಷೆ ತಯಾರಿ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಯಾವ ರೀತಿಯಲ್ಲಿ ತೊಡಗಿಕೊಳ್ಳಬೇಕು? ಎಷ್ಟು ಸಮಯಗಳ ಕಾಲ ಓದಬೇಕು? ಆಟ-ಪಾಠದ ಜತೆಗೆ ಕುಟುಂಬದವರ ಪ್ರೋತ್ಸಾಹ ಹೇಗಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಬರಬಹುದೆಂದು ಅಂದಾಜು ಇರಲಿಲ್ಲ, ರಿಸ್ಟಲ್ ಬಂದಾಗ ನನಗೆ ಸರ್ಪೈಸ್ ಆಯಿತು. ಕಠಿಣ ಪರಿಶ್ರಮವೇ ನನ್ನ ಸಾಧನೆಗೆ ಕಾರಣವಾಗಿದೆ. 600ಕ್ಕೆ 596 ಅಂಕವನ್ನು ಗಳಿಸಿದ್ದೇನೆ ಎಂದು ಜಯನಗರದ ಆರ್.ವಿ ಕಾಲೇಜಿನ ವಿದ್ಯಾರ್ಥಿನಿ ಸುರಭಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಗಳಿಸಿದರೂ ದೃತಿಗೆಡದೆ ಪರಿಶ್ರಮದೊಂದಿಗೆ ಶ್ರದ್ಧೆಯಿಂದ ಓದಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ನಾನು ದಿನದಲ್ಲಿ 10 ಗಂಟೆಗೂ ಹೆಚ್ಚು ಸಮಯ ಮೀಸಲಿಟ್ಟು ಓದುತ್ತಿದ್ದೆ. ಓದಿನ ಒತ್ತಡ ಹೆಚ್ಚಾದರೆ ಸಂಗೀತ ಅಭ್ಯಾಸ ಮಾಡುತ್ತಿದ್ದೆ, ಇದು ಮೈಂಡ್ ರಿಲ್ಯಾಕ್ಸ್ ಮಾಡುತ್ತಿತ್ತು. ಜತೆಗೆ ಕಾಲೇಜಿನಲ್ಲಿ ಉಪನ್ಯಾಸಕರು ನೀಡುತ್ತಿದ್ದ ಪ್ರತಿಯೊಂದು ಸ್ಟೇಡಿ ಮೆಟಿರಿಯಲ್‌ಗಳನ್ನು ಬಳಸಿಕೊಳ್ಳುತ್ತಿದ್ದೆ. ಸದ್ಯ ಸಿಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ, ಎಂಜಿನಿಯರ್ ಆಗುವ ಕನಸು ಇದೆ ಎಂದರು.
ಜಿಲ್ಲಾಧಿಕಾರಿ ಆಗುವ ಆಸೆ- ಪ್ರಿಯಾಂಕ ಕುಲಕರ್ಣಿ
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಪ್ರಿಯಂಕಾ ಕುಲಕರ್ಣಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ 600ಕ್ಕೆ 592 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಭೂಗೋಳಶಾಸ್ತ್ರ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಕಾಲೇಜಿನ ಪ್ರಾಧ್ಯಾಪಕರು, ಪೋಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ನಿತ್ಯ 3 ಗಂಟೆ ಕಾಲ ಓದು ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಿದ್ದೆ.
ಪದವಿ ಶಿಕ್ಷಣದ ಜತೆಗೆ ಯುಪಿಎಸ್‌ಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಚಿಕ್ಕವಯಸ್ಸಿನಲ್ಲೇ ಜಿಲ್ಲಾಧಿಕಾರಿ ಆಗಬೇಕು, ಜನರ ಸೇವೆ ಮಾಡುವ ಕನಸು ಕಂಡಿದ್ದೆ. ಚಿಕ್ಕವಳಿದ್ದಾಗ ನಮ್ಮ ತಂದೆ ಬೆಳಗಾವಿಯ ಸದಾಶಿವ ನಗರದ ಡಿಸಿ ನಿವಾಸ ತೋರಿಸಿದ್ದರು. ಆಗಿನಿಂದಲೇ ಡಿಸಿ ಆಗಬೇಕು ಎಂಬ ಕನಸಿನೊಂದಿಗೆ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಒಳ್ಳೆಯ ಅಂಕ ಬರುವ ನಿರೀಕ್ಷೆಯಿತ್ತು, ಆದರೆ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಬರುತ್ತೇನೆಂದು ಅಂದುಕೊಂಡಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಮಗಳ ಫಸ್ಟ್ ರ‍್ಯಾಂಕ್ ನಮ್ಗೆ ರಂಜಾನ್ ಉಡುಗೊರೆ
ಮಗಳು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿದ್ದು ರಂಜಾನ್ ಹಬ್ಬಕ್ಕೆ ಉಡುಗೊರೆ ನೀಡಿದಂತಿದೆ ಎಂದು ಕಲಾ ವಿಭಾಗದ ಮೊದಲ ಟಾಪರ್ ತಬ್ಸಮ್ ಶೇಖ್ ಪೋಷಕರು ಸಂತಸ ವ್ಯಕ್ತಪಡಿಸಿದರು. ಬೆಂಗಳೂರು ನಗರದ ಎನ್‌ಎಂಕೆಆರ್‌ವಿ ಕಾಲೇಜಿನ ವಿದ್ಯಾರ್ಥನಿ ತಬ್ಸಮ್ ಶೇಖ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 593 ಅಂಕ ಗಳಿಸಿದ್ದಾರೆ.
ಈ ಸಾಧನೆ ಕುರಿತು ಮಾತನಾಡಿದ ತಬ್ಸಮ್ ಶೇಖ್, ರ‍್ಯಾಂಕಿಂಗ್ ಬರಬಹುದೆನೋ ಎಂದುಕೊಂಡಿದ್ದೆ ಆದರೆ ಫಸ್ಟ್ ರ‍್ಯಾಂಕ್ ಬಗ್ಗೆ ನಿರೀಕ್ಷೆ ಇರಲಿಲ್ಲ. ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿರುವುದು ಸಂತಸ ತಂದಿದೆ. ಮನೆಯಲ್ಲಿ ಅಪ್ಪ-ಅಮ್ಮ ಬೆಂಬಲವಾಗಿ ನಿಲ್ಲುತ್ತಿದ್ದರು. ಪರೀಕ್ಷೆ ಬಂದಾಗ ಓದು ಎಂದು ಒತ್ತಡ ಹೇರುತ್ತಿರಲಿಲ್ಲ. ನಿತ್ಯ 8 ರಿಂದ 10 ಗಂಟೆ ಓದುತ್ತಿದ್ದೆ ಎಂದು ತಿಳಿಸಿದ್ದಾರೆ.
ನಿರೀಕ್ಷೆಗೂ ಮೀರಿದ ಫಲಿತಾಂಶ
ದ್ವಿತೀಯ ಪಿಯು ಪರೀಕ್ಷೆಯಲ್ಲಿ 600ಕ್ಕೆ 594 ಅಂಕಗಳನ್ನು ಪಡೆದ ಕುಂದಾಪುರದ ಸ್ನೇಹಾ ಜೆ. ರಾವ್ ಸಂತಸ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಯ ಫಲಿತಾಂಶದಲ್ಲಿ ಇಷ್ಟು ಮಾರ್ಕ್ಸ್ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಫಲಿತಾಂಶ ನೋಡಿ ಬಹಳ ಖುಷಿಯಾಗುತ್ತಿದೆ. ಮನೆಯವರು ಬೆಂಬಲ, ಕಾಲೇಜಿನಲ್ಲಿ ಶಿಕ್ಷಕರು ಶಿಕ್ಷಕೇತರರು ಸಹಕಾರ ನೀಡಿದ್ದರು. ಬಿ.ಟೆಕ್ ಓದುವ ಹಂಬಲ ಇದ್ದು, ಯಾವ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕೆಂದು ಮುಂದೆ ನಿರ್ಧಾರ ಮಾಡುವುದಾಗಿ ತಿಳಿಸಿದರು.
ಸಿಹಿ ತಿನಿಸಿ ಸಂಭ್ರಮ
ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕ ಗಳಿಸಿ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ಉಡುಪಿಯ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜು ವಿದ್ಯಾರ್ಥಿನಿ ಸ್ಮಯ ಸದಾನಂದ ಮುಬೇನ್ ಸಂತಸ ವ್ಯಕ್ತಪಡಿಸಿದರು. ಪರೀಕ್ಷೆ ಸಮಯದಲ್ಲಿ ಎಲ್ಲರೂ ಬೆಂಬಲವಾಗಿ ನಿಂತಿದ್ದರು. ನನ್ನ ಈ ಸಾಧನೆಗೆ ಸಹಾಯ ಮಾಡಿದ ಎಲ್ಲರಿಗೂ ಋಣಿಯಾಗಿರುವೆ. ಎಂದರು.
ಇತ್ತ ಹುಬ್ಬಳ್ಳಿಯ ವಿದ್ಯಾನಿಕೇತನ ಎಸ್‌ಸಿ ಪಿಯು ಕಾಲೇಜಿನ ವಿದ್ಯಾರ್ಥಿ ಸಾಯಿಶ್ ಗೋಣಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕಗಳಿಸಿ ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಹೀಗಾಗಿ ಸಾಯಿಶ್‌ಗೆ ಕಾಲೇಜು ಆಡಳಿತ ಮಂಡಳಿ ಸನ್ಮಾನ ಮಾಡಿದರು. ಪೋಷಕರು ಶಿಕ್ಷಕರು ಸಿಹಿ ತಿನ್ನಿಸಿ ಸಂಭ್ರಮಿಸಿದರು. ನಿರಂತರ ಪರಿಶ್ರಮ ಮತ್ತು ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಾಯಿಶ್ ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ: 2nd PUC Result 2023 : ದ್ವಿತೀಯ ಪಿಯುಸಿ ಫಲಿತಾಂಶ; ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ, ಡಿಕೆಶಿ ಅಭಿನಂದನೆ
ಮತ್ತೊಂದು ಕಡೆ ವಿಜಯನಗರ ಜಿಲ್ಲೆಯ ಕೊಟ್ಟೂರು ಇಂದು ಪಿಯು ಕಾಲೇಜು, ಹರಪನಹಳ್ಳಿಯ ಎಸ್‌ಯುಜಿಎಂ ಪಿಯು ಕಾಲೇಜಿನಲ್ಲಿ ಮಕ್ಕಳಿಗೆ ಸಿಹಿ ತಿನ್ನಿಸಿ, ಸಂಭ್ರಮಾಚರಣೆ ಜೋರಾಗಿತ್ತು.