ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು (kseeb) ದ್ವಿತೀಯ ಪಿಯುಸಿಯ ಫಲಿತಾಂಶ (2nd PUC Result 2023) ಪ್ರಕಟಿಸಿದೆ. ಈ ಬಾರಿ ಶೇ.74.67 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು 7,02,067 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ ಶೇ. 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಶೇ. 61.88 ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿಯದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ.
ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್‌ನಲ್ಲಿ ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮಂಡಳಿಯ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ ಅಧ್ಯಕ್ಷ ರಾಮಚಂದ್ರ, ಕರ್ನಾಟಕ ಶಾಲಾ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಫಲಿತಾಂಶವನ್ನು ಪ್ರಕಟಿಸಿದರು.
ಎಂದಿನಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ದೊರೆತಿದೆ (ಶೇಕಡ 95.33), ಉಡುಪಿ ಹಾಗೂ ಕೊಡಗು ಜಿಲ್ಲೆ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ. ಯಾದಗಿರಿ ಕೊನೆಯ ಸ್ಥಾನ(ಶೇಕಡ 62.98)ದಲ್ಲಿದೆ. ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಕಲಾ ವಿಭಾಗದಲ್ಲಿ ತಬಸೂಮ್ ಶೇಖ್ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಅನನ್ಯ ಪ್ರಥಮ ಸ್ಥಾನ (600 ಅಂಕಗಳು), ವಿಜ್ಞಾನ ವಿಭಾಗದಲ್ಲಿ ಕೋಲಾರದ ಕೌಶಿಕ್ ಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 1,09,509 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 2,47,315 ವಿದ್ಯಾರ್ಥಿಗಳು ಶೇ. 85 ಕ್ಕಿಂತ ಕಡಿಮೆ ಹಾಗೂ 60ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. 1083 ವಿದ್ಯಾರ್ಥಿಗಳು ಈ ಬಾರಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕಪಡೆದಿರುವುದು ವಿಶೇಷವಾಗಿದೆ.
ಈ ಬಾರಿ ಪರೀಕ್ಷೆಗೆ ಒಟ್ಟು 7,27,923 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದರು. ಇವರಲಿ ಪರೀಕ್ಷೆಗೆ ಅರ್ಹರಾದವರು-7,25,821, ಎಲ್ಲ ವಿಷಯಗಳಿಗೆ ಗೈರಾದವರ ಸಂಖ್ಯೆ-23,754, ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು-7,02,067, ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳು-5,24,209 ಎಂದು ಮಂಡಳಿ ತಿಳಿಸಿದೆ.
ಉತ್ತೀರ್ಣರಾದ ಬಾಲಕ-ಬಾಲಕಿಯರೆಷ್ಟು?
ಬಾಲಕರು; ಹಾಜರು-3,49,901, ತೇರ್ಗಡೆ-2,41,607, ಶೇ. 69.05
ಬಾಲಕಿಯರು, ಹಾಜರು-3,52,166, ತೇರ್ಗಡೆ -2,82,602, ಶೇ.80.25
ಮಾರ್ಚ್ 9ರಿಂದ 29 ರವರೆಗೆ ಪರೀಕ್ಷೆ ನಡೆಸಲಾಗಿತ್ತು. ವಿದ್ಯಾರ್ಥಿಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ ಬೆಳಗ್ಗೆ 11 ಗಂಟೆಯಿಂದ ಫಲಿತಾಂಶ ನೋಡಬಹುದಾಗಿದೆ.
ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ( Click Here ) ಮಾಡಿ.
ಯಾವ ಜಿಲ್ಲೆಯ ಫಲಿತಾಂಶ ಎಷ್ಟು?
ಮರುಮೌಲ್ಯಮಾಪನಕ್ಕೆ ಅವಕಾಶ
ಉತ್ತರ ಪ್ರತಿಕೆ ಡೌನ್ ಲೋಡ್ ಮಾಡಿಕೊಳ್ಳಲು 26-4-2023 ರಿಂದ 2-5-2023ರವರೆಗೆ ಅವಕಾಶ ನೀಡಲಾಗುತ್ತದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು 3-5-2023 ರಿಂದ 8-5-2023ರವರೆಗೆ ಅವಕಾಶ ನೀಡಲಾಗುತ್ತದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ಪೇಪರ್ ಗೆ ರೂ.530 ನಿಗದಿಪಡಿಸಲಾಗಿದೆ. ಇಂದಿನಿಂದ ಉತ್ತರ ಪ್ರತಿಯ ಸ್ಕ್ಯಾನಿಂಗ್ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ ಆರಂಭವಾಗಲಿದೆ. 27-4-2023ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿರುತ್ತದೆ. ಮರು ಮೌಲ್ಯಮಾಪನಕ್ಕೆ ರೂ.1,670 ನಿಗದಿಪಡಿಸಲಾಗಿದೆ.
ರಾಜ್ಯ 5,716 ಕಾಲೇಜುಗಳಿಂದ 7.27 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ರಾಜ್ಯದಲ್ಲಿ 1,109 ಪರೀಕ್ಷಾ ಕೇಂದ್ರಗಳನ್ನು ತೆರೆದು, ಗೊಂದಲವಿಲ್ಲದಂತೆ ಪರೀಕ್ಷೆ ನಡೆಸಲಾಗಿತ್ತು. ಚುನಾವಣಾ ಪ್ರಕ್ರಿಯೆ ನಡುವೆಯೇ ಕೂಡಲೇ ಮೌಲ್ಯಮಾಪನ ನಡೆಸಿದ್ದರಿಂದ ನಿರೀಕ್ಷೆಗೂ ಮೊದಲೇ ಫಲಿತಾಂಶ ಪ್ರಕಟವಾಗುತ್ತಿದೆ.
ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಕೆ
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಇಂದಿನಿಂದಲೇ ನೋಂದಣಿಗೆ ಅವಕಾಶ ನೀಡಲಾಗಿದೆ. ಏಪ್ರಿಲ್ ಕೊನೆ ವಾರದಲ್ಲಿ ಮರುಪರೀಕ್ಷೆಯ ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ. ಅನುತ್ತೀರ್ಣರಾದವರಿಗೆ ಈ ಬಾರಿ ಮಾರ್ಕ್ಸ್ ಕಾರ್ಡ್ ಕಮ್ ಅರ್ಜಿ ನೀಡಲಾಗುವುದಿಲ್ಲ. ಫಲಿತಾಂಶದ ಪಟ್ಟಿ ಆಧರಿಸಿ ಶುಲ್ಕ ಸಂಗ್ರಹ ಮಾಡಲಾಗುತ್ತದೆ ಎಂದು ಮಂಡಳಿ ಹೇಳಿದೆ.
ಇದನ್ನೂ ಓದಿ: What Next After PUC | ಪಿಯುಸಿ ನಂತರ ಮುಂದಿರುವ ಆಯ್ಕೆಗಳೇನು?; ಇಲ್ಲಿದೆ ಮಾಹಿತಿ