Site icon Vistara News

Sand Mafia: ಕಾನ್ಸ್​ಟೇಬಲ್ ಹತ್ಯೆ ಪ್ರಕರಣ; ಕರ್ತವ್ಯ ಲೋಪದಲ್ಲಿ 3 ಪೊಲೀಸರ ಅಮಾನತು

Suspended policemen

#image_title

ಕಲಬುರಗಿ: ಅಫಜಲಪುರ ತಾಲೂಕಿನ ನಾರಾಯಣಪುರ ಬಳಿ ಮರಳು ದಂಧೆ ತಡೆಯಲು ಹೋದಾಗ ನಡೆದಿದ್ದ ಕಾನ್ಸ್‌ಟೇಬಲ್‌ ಮಯೂರ ಚವ್ಹಾಣ್‌ (51) ಹತ್ಯೆ ಪ್ರಕರಣಲ್ಲಿ ಕರ್ತವ್ಯ ಲೋಪದ ಮೇರೆಗೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಜೇವರ್ಗಿ ಠಾಣೆ ಸಿಪಿಐ ಭೀಮನಗೌಡ್ ಬಿರಾದರ್, ನೆಲೋಗಿ ಠಾಣೆಯ ಪಿಎಸ್‌ಐ ಗೌತಮ್ ಹಾಗೂ ಎಸ್‌ಬಿ ಕಾನ್ಸ್‌ಸ್ಟೇಬಲ್ ರಾಜಶೇಖರ ಎಂಬುವರನ್ನು ಅಮಾನತು ಮಾಡಿ ಕಲಬುರಗಿ ಎಸ್‌ಪಿ ಇಶಾಪಂತ್ ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ, ರೌಡಿಶೀಟರ್ ಸಾಯಿಬಣ್ಣ ಹಲ್ಲೆಗೆ ಮುಂದಾದಾಗ ಪೊಲೀಸರು ಆತನ ಕಾಲಿಗೆ ಗುಂಡಿಕ್ಕಿ ಶನಿವಾರ ವಶಕ್ಕೆ ಪಡೆದಿದ್ದರು. ಈ ವೇಳೆ ಆರೋಪಿ ಯಡ್ರಾಮಿ ಠಾಣೆ ಪಿಎಸ್ಐ ಮೇಲೆ ಹಲ್ಲೆ ಮಾಡಿದ್ದ. ಹೀಗಾಗಿ ಪಿಎಸ್ಐ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ಎಸ್‌ಪಿ ಇಶಾಪಂತ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕರ್ತವ್ಯ ಲೋಪದಲ್ಲಿ ಮೂವರು ಪೊಲೀಸರ ಅಮಾನತಿಗೆ ಕ್ರಮ ಕೈಗೊಂಡಿದ್ದಾರೆ.

ಕಾಲಿಗೆ ಗುಂಡಿಕ್ಕಿ ರೌಡಿಶೀಟರ್‌ನ ಬಂಧಿಸಿದ ಪೊಲೀಸರು

ಅಕ್ರಮ ಮರಳು ಸಾಗಾಣಿಕೆ (Smuggling of sands) ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಕರ್ತವ್ಯ ನಿರತ ಪೊಲೀಸ್ ಪೇದೆ ಮಯೂರ ಚವ್ಹಾಣ್‌ (51) ಜೂನ್‌ 15ರಂದು ಸ್ಥಳದಲ್ಲೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ (Sand Mafia) ಟ್ರ್ಯಾಕ್ಟರ್‌ ಚಾಲಕ ಸಿದ್ದಣ್ಣ ಎಂಬಾತನನ್ನು ಬಂಧಿಸಲಾಗಿತ್ತು. ಆದರೆ ಟ್ರ್ಯಾಕ್ಟರ್‌ ಮಾಲೀಕ ಸಾಯಿಬಣ್ಣಾ ಕರ್ಜಗಿ ತಲೆ ಮರೆಸಿಕೊಂಡಿದ್ದ. ಈತನನ್ನು ಹುಡುಕಿ ವಶಕ್ಕೆ ಪಡೆದಿದ್ದಾಗ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಈ ವೇಳೆ ಆತನ ಕಾಲಿಗೆ ಪೊಲೀಸರು ಫೈರಿಂಗ್‌ ಮಾಡಿ ಬಂಧಿಸಿದ್ದಾರೆ.

ಇದನ್ನೂ ಓದಿ | ಕುಡಿದು 30 ವರ್ಷದ ಹಿಂದಿನ ಜೋಡಿ ಕೊಲೆ ಕುರಿತು ಬಾಯಿಬಿಟ್ಟ! ಅರೆಸ್ಟ್ ಮಾಡಿದ್ರು ಎನ್‌ಕೌಂಟರ್‌ ಸ್ಪೆಷಲಿಸ್ಟ್ ದಯಾ ನಾಯಕ್

ವಿಜಯಪುರದಲ್ಲಿ ತಲೆ ಮರೆಸಿಕೊಂಡಿದ್ದ ಸಾಯಿಬಣ್ಣಾ ಕರ್ಜಗಿಯನ್ನು ಪೊಲೀಸರು ಬಂಧಿಸಿದ್ದರು. ವಿಜಯಪುರದಿಂದ ಕಲಬುರಗಿಯ ಜೇವರ್ಗಿ ಮಾರ್ಗವಾಗಿ ಶನಿವಾರ ಕರೆತರಲಾಗುತ್ತಿತ್ತು. ಈ ವೇಳೆ ಜೇವರ್ಗಿ ತಾಲೂಕಿನ ಮಂದೇವಾಲ ಮತ್ತು ಜೇರಟಗಿ ಮಧ್ಯದಲ್ಲಿ ಮೂತ್ರ ವಿಸರ್ಜೆನೆ ಮಾಡಲು ಗಾಡಿ ನಿಲ್ಲಿಸಲು ಸಾಯಿಬಣ್ಣಾ ಹೇಳಿದ್ದಾನೆ. ಈ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಮುಂದಾಗಿದ್ದಾನೆ. ಕೂಡಲೇ ಪೊಲೀಸರು ಬೆನ್ನಟ್ಟಿ ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಲುಂಗಿಯಿಂದ ಬಟನ್ ಚಾಕು ತೆಗೆದು ಯಡ್ರಾಮಿ ಠಾಣೆ ಪಿಎಸ್ಐ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಐ ಆತ್ಮರಕ್ಷಣೆಗಾಗಿ, ಆರೋಪಿ ಸಾಯಿಬಣ್ಣಾ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Exit mobile version