ಚಿಕ್ಕೋಡಿ: 40 ಪರ್ಸೆಂಟ್ ಸರ್ಕಾರ ಎಂಬ ಪ್ರತಿಪಕ್ಷಗಳ ಆರೋಪ, ಗುತ್ತಿಗೆದಾರರ ಸಂಘದ ಆರೋಪಗಳ ಮಧ್ಯೆ ಈಗ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಕಾಮಗಾರಿ ಅನುಮೋದನೆಗೆ ೩೦ ಪರ್ಸೆಂಟ್ ಕಮಿಷನ್ (30 percent commission) ಕೇಳುತ್ತಿರುವ, ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಕಮಿಷನ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ಸದಸ್ಯೆಯೊಬ್ಬರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಕ್ಷೇತ್ರದಲ್ಲಿ ಕಮಿಷನ್ ಕಿರುಕುಳ ಆರೋಪ ಕೇಳಿಬಂದಿದೆ.
ಕಮಿಷನ್ ನೀಡಿದರೆ ಮಾತ್ರ ಗ್ರಾಮ ಪಂಚಾಯಿತಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿ ಮೇಖಳಿ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಸಿದ್ದಪ್ಪ ರಾಜಂಗಳೆ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಮಗಾರಿ ಅನುಮೋದನೆಗೆ ಅಧಿಕಾರಿಗಳಿಂದ ಶೇ. 30ರಷ್ಟು ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ ಎಂದು ಸುಧಾ ಆರೋಪಿಸಿದ್ದಾರೆ.
ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಪಂಚಾಯಿತಿ ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ. ಪಂಚಾಯಿತಿಯ 14 ಮತ್ತು 15ನೇ ಹಣಕಾಸು ಉದ್ಯೋಗ ಖಾತ್ರಿ ಯೋಜನೆ ಅನುದಾನ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುಮೋದನೆಗೆ ಕಮಿಷನ್ ಕೇಳುತ್ತಿದ್ದಾರೆ. ಕ್ರಿಯಾಯೋಜನೆ ಅನುಮೋದನೆಗೆ ಮುಂಗಡವಾಗಿ ಶೇ. 3 ಪರ್ಸೆಂಟ್ ಹಣ ಕೊಡಬೇಕು. ಅವರಿಗೆ ಕಮಿಷನ್ ನೀಡಲು ಆಗದ ಕಾರಣ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುಧಾ ಆರೋಪಿಸಿದ್ದಾರೆ.
ಮೇಲಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. ಪಿಡಿಒ ಮಂಜುನಾಥ್ ದಳವಾಯಿ ಅವರು ಸಹ ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಸಹ ಸುಧಾ ಆರೋಪ ಮಾಡಿದ್ದಾರೆ. 26 ಸದಸ್ಯರ ಪೈಕಿ 24 ಸದಸ್ಯರಿಂದ ಜಿಲ್ಲಾ ಪಂಚಾಯಿತಿ ಸಿಇಒಗಳನ್ನು ಭೇಟಿ ಮಾಡಲಾಗಿದ್ದರೂ ಪ್ರಯೋಜನ ಆಗಿಲ್ಲ ಎಂದು ಹೇಳಿದ್ದಾರೆ. ಸಿಇಒ ಅವರು ಅಲ್ಲಿಯೇ ಶಾಸಕರನ್ನು ಭೇಟಿ ಮಾಡಿಸಿ ವಾಪಸ್ ಕಳಿಸಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ. ಇನ್ನೂ ೧೦ ಮಂದಿ ಸದಸ್ಯರು ರಾಜೀನಾಮೆ ನೀಡಲು ಚಿಂತನೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.