ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಬಿಎಂಟಿಸಿ ಬಸ್ ಹರಿದು ಗಂಭೀರ ಗಾಯಗೊಂಡಿದ್ದ ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕವಾಗಿದ್ದು, 30 ಯೂನಿಟ್ ರಕ್ತದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಶಿಲ್ಪಾರನ್ನು ದಾಖಲು ಮಾಡಲಾಗಿದೆ. ಬಸ್ ಚಕ್ರದಡಿ ಸಿಲುಕಿದ್ದರಿಂದ ಅವರ ಕಾಲು ಮತ್ತು ತೊಡೆ ಭಾಗ ನಜ್ಜುಗುಜ್ಜಾಗಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ತೀವ್ರ ರಕ್ತಸ್ರಾವವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿಲ್ಪಾರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆಗೆ 30 ಯೂನಿಟ್ ರಕ್ತದ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬದವರು ಬಿ ಪಾಸಿಟಿವ್ ರಕ್ತಕ್ಕಾಗಿ ಪ್ರಯತ್ನ ಪಡುತ್ತಿದ್ದು, ಅನೇಕ ದಾನಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇನ್ನೂ ರಕ್ತಕ್ಕೆ ವ್ಯವಸ್ಥೆಯಾಗಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ವಿದ್ಯಾರ್ಥಿಗಳಲ್ಲಿ ಕೆಲವರು ಆಸ್ಪತ್ರೆಗೆ ಭೇಟಿ ನೀಡಿ ರಕ್ತದಾನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | ಜ್ಞಾನಭಾರತಿಯಲ್ಲಿ ಗಣೇಶ ದೇಗುಲ ನಿರ್ಮಾಣ ಬೇಡ: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ
ಏನಿದು ಪ್ರಕರಣ?
ಜ್ಞಾನಭಾರತಿ ಆವರಣದಲ್ಲಿ ಬಿಎಂಟಿಸಿ ಬಸ್‌ಗಾಗಿ ಕಾದು ಕುಳಿತಿದ್ದ ಶಿಲ್ಪಾ, ಬಸ್ ಬರುತ್ತಿದ್ದಂತೆ ಮಧ್ಯದ ಬಾಗಿಲಿನಲ್ಲಿ ನಿಂತು ಬಸ್ ಹತ್ತಲು ಮುಂದಾಗಿದ್ದಾರೆ. ಈ ವೇಳೆ ಕೆಳಗೆ ಬಿದ್ದಿದ್ದು, ಬಸ್ ಮುಂದಕ್ಕೆ ಚಲಾಯಿಸಿದ್ದರಿಂದ ಅವರ ಮೇಲೆ ಚಕ್ರ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಪ್ರಕರಣದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಜ್ಞಾನಭಾರತಿ ವಿವಿ ಆವರಣದೊಳಗೆ ಬಿಎಂಟಿಸಿ ಬಸ್ ಬರಲು ಅವಕಾಶ ನೀಡಬಾರದು ಎಂದು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಸಂಜೆ ವೇಳೆ ವಿವಿ ಆವರಣವನ್ನು ಬಂದ್ ಮಾಡಲಾಗಿತ್ತು.
ಪ್ರತಿಭಟನೆ ಮುಂದುವರಿಕೆ
ಬೆಂಗಳೂರು ವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಮಂಗಳವಾರವೂ ಮುಂದುವರಿದಿದ್ದು, ಆವರಣದ ಎದುರು ಬೆಳಗ್ಗೆ 10 ಗಂಟೆಯಿಂದಲೇ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ. ವಿವಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಿ ಆಕ್ರೋಶವನ್ನು ಹೊರಹಾಕಲಾಗಿದೆ. ಭಾರಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು. ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸುತ್ತಿದ್ದಾರೆ.
ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದ್ದು, ಬಸ್ ಚಾಲಕನನ್ನು ಕೂಡಲೇ ಬಂಧಿಸಬೇಕು. ಗಾಯಾಳು ವಿದ್ಯಾರ್ಥಿನಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಎಂಟಿಸಿಯೇ ಭರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.
ರಾತ್ರೋರಾತ್ರಿ ರಸ್ತೆ ಉಬ್ಬುಗಳ ನಿರ್ಮಾಣ
ಅಪಘಾತ ಸಂಭವಿಸಿದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ಜೋರಾಗಿದ್ದರಿಂದ ಎಚ್ಚೆತ್ತ ಅಧಿಕಾರಿಗಳು ಜ್ಞಾನಭಾರತಿ ಆವರಣದಲ್ಲಿ ಸೋಮವಾರ ರಾತ್ರೋ ರಾತ್ರಿ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಈ ಬಗ್ಗೆ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದು, ಅವೈಜ್ಞಾನಿಕವಾಗಿ ಹಂಪ್ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ | ಜ್ಞಾನಭಾರತಿ ಆವರಣದಲ್ಲಿ ಬಸ್ ಹರಿದು ವಿದ್ಯಾರ್ಥಿನಿಗೆ ಗಂಭೀರ ಗಾಯ; ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯ