Site icon Vistara News

Police Transfer: 33 ಡಿವೈಎಸ್ಪಿಗಳು, 132 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಹೊಸದಾಗಿ ಸೃಜಿಸಿದ ಹುದ್ದೆಗಳಿಗೂ ನೇಮಕ

PSI Training

ಬೆಂಗಳೂರು: ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಸರ್ಜರಿ ಮಾಡಿದ್ದು, 33 ಡಿವೈಎಸ್ಪಿಗಳು ಹಾಗೂ 132 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. ಇದೇ ವೇಳೆ ಒಬ್ಬ ಡಿವೈಎಸ್‌ಪಿ ವರ್ಗಾವಣೆಯನ್ನು ರದ್ದುಗೊಳಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಹೊಸದಾಗಿ ಸೃಜನೆಯಾದ ಹುದ್ದೆಗಳಿಗೂ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಲಾಗಿದೆ.

ಈ ಬಗ್ಗೆ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದ್ದು, ಸಂಬಂಧಪಟ್ಟ ಘಟಕಾಧಿಕಾರಿಗಳು, ವರ್ಗಾವಣೆಗೊಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸುವಂತೆ ತಿಳಿಸಲಾಗಿದೆ.

ಯು.ಡಿ. ಕೃಷ್ಣಕುಮಾರ್ (ಡಿವೈಎಸ್​ಪಿ, ಬಿಡಿಎ), ಟಿ.ಎಂ.ಶಿವಕುಮಾರ್ (ಎಸಿಪಿ, ಮಡಿವಾಳ ಉಪವಿಭಾಗ), ಎಚ್.ಬಿ.ರಮೇಶ್ ಕುಮಾರ್‌ (ಎಸಿಪಿ, ವಿವಿ ಪುರಂ ಉಪವಿಭಾಗ), ಎಂ.ಎನ್.ನಾಗರಾಜ್ (ಎಸಿಪಿ, ಸಿಸಿಬಿ ಬೆಂಗಳೂರು) ಅನುಷಾರಾಣಿ (ಎಸಿಪಿ, ಡಿಸಿಆರ್​ಇ, ಮೈಸೂರು) ಸೇರಿದಂತೆ ಒಟ್ಟು 33 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.

ಇನ್‌ಸ್ಪೆಕ್ಟರ್‌ ಸ್ವರ್ಣ ಜಿ.ಎಸ್‌. (ಆಲನಹಳ್ಳಿ ಪೊಲೀಸ್‌ ಠಾಣೆ, ಮೈಸೂರು), ಇನ್‌ಸ್ಪೆಕ್ಟರ್ ರವಿಕಿರಣ್ (ಸಂಪಂಗಿರಾಮನಗರ ಪೊಲೀಸ್​ ಠಾಣೆ), ಮಂಜುನಾಥ್ ಜಿ ಹೂಗಾರ್ (ಕುಂಬಳಗೋಡು ಠಾಣೆ), ನರೇಂದ್ರ ಬಾಬು (ಕಾಟನ್​ಪೇಟೆ ಪೊಲೀಸ್ ಠಾಣೆ), ಸಂತೋಷ್ ಕೆ (ಹಲಸೂರು ಪೊಲೀಸ್ ಠಾಣೆ), ದೀಪಕ್ ಆರ್ (ಜಯನಗರ ಪೊಲೀಸ್ ಠಾಣೆ) ಸೇರಿ ಒಟ್ಟು 132 ಇನ್‌ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ | Job Alert: ಎನ್‌ಟಿಪಿಸಿಯ 223 ಸಹಾಯಕ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ವರ್ಗಾವಣೆ ಆದೇಶ ರದ್ದು

ಡಿವೈಎಸ್‌ಪಿ ನೀಲಪ್ಪ ಮಲ್ಲಪ್ಪ ಓಲೇಕಾರ್‌ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಖಾನಾಪುರ ಪಿಟಿಎಸ್‌ಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಅವರ ವರ್ಗಾವಣೆಯನ್ನು ರದ್ದುಗೊಳಿಸಿದ್ದು, ಅವರಿಗೆ ಲೋಕಾಯುಕ್ತದಲ್ಲೇ ಮುಂದುವರಿಯಲು ಸೂಚಿಸಲಾಗಿದೆ.

KAS: ಕೆಎಎಸ್ ಪರೀಕ್ಷೆ ಬರೆಯುವವರಿಗೆ ಗುಡ್‌ನ್ಯೂಸ್‌; ಸರ್ಕಾರದ ಹೊಸ ಆದೇಶದಲ್ಲಿ ಏನಿದೆ?

vidhana soudha

ಬೆಂಗಳೂರು: ಕೆಎಎಸ್ (KAS-ಕರ್ನಾಟಕ ನಾಗರಿಕ ಸೇವೆ) ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಶುಭ ಸುದ್ದಿಯೊಂದನ್ನು ಕರ್ನಾಟಕ ಸರ್ಕಾರ ನೀಡಿದೆ. ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಯೋಮಿತಿ ಸಡಿಲಿಕೆ ಮಾಡಲು ಈ ಮಹತ್ವದ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಯಿತು.

ಆದೇಶದಲ್ಲಿ ಏನಿದೆ?

ಕರ್ನಾಟಕ ಗೆಜೆಟೆಡ್‌ ಪ್ರೋಬೆಷನರ್ಸ್‌ (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ) ನಿಯಮಗಳು 1997ರ ಅನ್ವಯ 2023-24ನೇ ಸಾಲಿಗೆ ಕರ್ನಾಟಕ ಲೋಕಸೇವಾ ಆಯೋಗವು ಹೊಸದಾಗಿ ಹೊರಡಿಸಲಿರುವ ಅಧಿಸೂಚನೆಯಲ್ಲಿ ಈಗಿರುವ ನಿಯಮಗಳ ಮೇಲೆ ಎಲ್ಲ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಒಂದು ಬಾರಿ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳಿಗೆ ಹೆಚ್ಚಿಸಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶದ ಪ್ರಕಾರ 2023-24ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ಸ್ಥಾನಗಳನ್ನು ತುಂಬಲು ಹೊರಡಿಸುವ ಅಧಿಸೂಚನೆಯಲ್ಲಿ ಅರ್ಹರಿರುವ ಎಲ್ಲ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸೌಲಭ್ಯ ಲಭಿಸಲಿದೆ.

ಕಾರಣವೇನು?

ಕೆಲವು ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆ ಆಕಾಂಕ್ಷಿಗಳು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಇತರ ಕಾರಣದಿಂದ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗೆ ನೇಮಕಾತಿಗಾಗಿ 2021ನೇ ಸಾಲಿನಿಂದ ಪರೀಕ್ಷೆಯನ್ನು ನಡೆಸಿಲ್ಲ. ಆದ್ದರಿಂದ ಅನೇಕ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆ ಆಕಾಂಕ್ಷಿಗಳು ನೇಮಕಾತಿಗಾಗಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಮೀರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದ್ದರು. ಆದ್ದರಿಂದ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಹಾಜರಾಗಲು ಗರಿಷ್ಠ ವಯೋಮಿತಿಯನ್ನು ಸಡಿಲಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಈ ಅಂಶಗಳನ್ನು ಪರಿಶೀಲಿಸಿದ ಸರ್ಕಾರವು 2023-24ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಅಧಿಸೂಚಿಸಲ್ಪಡುವ ಗ್ರೂಪ್-ಎ ಮತ್ತು ಗ್ರೂಪ್-ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ತುಂಬಲು ಹೊರಡಿಸುವ ಅಧಿಸೂಚನೆಗೆ ಮಾತ್ರ ಅನ್ವಯವಾಗುವಂತೆ, ಅರ್ಹವಿರುವ ಎಲ್ಲ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: Government Job: ತೆರಿಗೆ ಇಲಾಖೆಯಲ್ಲಿ ಅತಿ ಹೆಚ್ಚು ಗೆಜೆಟೆಡ್‌ ಹುದ್ದೆ; ಪ್ರವಾಸೋದ್ಯಮದಲ್ಲಿ ಎರಡೇ! ಶೀಘ್ರ ನೇಮಕ

ನೇಮಕಾತಿ ಅಧಿಸೂಚನೆ ಪ್ರಕಟವಾಗಿಲ್ಲ

ಸರ್ಕಾರ 2024ನೇ ಸಾಲಿನಲ್ಲಿ 276 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ತಯಾರಿ ನಡೆದಿದೆ. ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಒಪ್ಪಿಗೆಯೂ ಸಿಕ್ಕಿದ್ದು, ಈ ಕುರಿತು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಹ ಸಲ್ಲಿಕೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಈಚೆಗೆ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಹೇಳಿದ್ದರು. ಆದರೆ ಈ ಕುರಿತಾದ ಅಧಿಸೂಚನೆ ಯಾವಾಗ ಪ್ರಕಟವಾಗಲಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version