Site icon Vistara News

Raichur News: ಲಿಂಗಸುಗೂರಿನಲ್ಲಿ ಡಿ.29, 30ರಂದು ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ: ಹುಲಿಕಲ್ ನಟರಾಜ್

Preliminary meeting of the 3rd State Scientific Conference on December 29, 30 at Lingasugur

ಲಿಂಗಸುಗೂರು: ಪಟ್ಟಣದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಡಿಸೆಂಬರ್ 29 ಹಾಗೂ 30ರಂದು ರಾಜ್ಯಮಟ್ಟದ 3ನೇ ವೈಜ್ಞಾನಿಕ ಸಮ್ಮೇಳನ (Scientific Conference) ನಡೆಯಲಿದ್ದು, ಸಮ್ಮೇಳನದ ಯಶಸ್ವಿಗೆ ತಾಲೂಕು ಹಾಗೂ ಜಿಲ್ಲೆಯ ಪ್ರತಿಯೊಬ್ಬ ಪ್ರಜೆ ಸಹಕಾರ ನೀಡಬೇಕು ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮನವಿ ಮಾಡಿದರು.

ಪಟ್ಟಣದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಎಸಿ ಅವಿನಾಶ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಡಿನಲ್ಲಿ ಮೌಢ್ಯತೆ ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯಮಟ್ಟದ ಸಮ್ಮೇಳನ ಮಾಡಲಾಗಿದೆ. ಪರಿಷತ್‌ ವತಿಯಿಂದ ರಾಜ್ಯಮಟ್ಟದ 3ನೇ ಸಮ್ಮೇಳನ ಈ ಬಾರಿ ಲಿಂಗಸುಗೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ. ನಾನಾ ಸಚಿವರು, ಶಾಸಕರು, ಸಮ್ಮೆಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ: Job Alert: 750 ಗ್ರಾಮ ಆಡಳಿತಾಧಿಕಾರಿ ಹುದ್ದೆ ಭರ್ತಿಗೆ ಮುಂದಾದ ಸರ್ಕಾರ; ಶೀಘ್ರ ಅಧಿಸೂಚನೆ

ಮೊದಲ ದಿನ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ. ಎರಡು ದಿನಗಳ ಕಾಲ ಅರ್ಥಪೂರ್ಣವಾದ ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾಹಿತಿ, ವಿಜ್ಞಾನ ತಂತ್ರಜ್ಞಾನ ಇಲಾಖೆ, ಇಸ್ರೋ ವಿಜ್ಞಾನಿಗಳು, ವಿಶ್ವೇಶ್ವರಯ್ಯ ಮ್ಯೂಸಿಯಂ ಸೇರಿದಂತೆ ವಿವಿಧ ಇಲಾಖೆಗಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದೆ.

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಜೀವಮಾನ ಸಾಧನ ಪ್ರಶಸ್ತಿ, ವಿಶಿಷ್ಟ ಸೇವಾ ಪ್ರಶಸ್ತಿ ಹಾಗೂ ರಾಜ್ಯದ ಪ್ರತಿ ಜಿಲ್ಲೆಗೊಬ್ಬರಂತೆ ಎಚ್‌ಎನ್‌ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

10 ಸಾವಿರ ಜನ ಭಾಗಿ

ಈಗಾಗಲೇ 2500 ಜನರು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿದ್ದು, ಸಮ್ಮೇಳನದಲ್ಲಿ ಒಟ್ಟು 10 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ವಸತಿ, ಊಟ ವ್ಯವಸ್ಥೆ ಕಲ್ಪಿಸಲು ಚುನಾಯಿತ ಪ್ರತಿನಿಧಿಗಳು ಮುಂದೆ ಬಂದಿದ್ದಾರೆ. ಸ್ವಚ್ಚತೆ ಹಾಗೂ ಕುಡಿಯುವ ನೀರು, ಸೂಕ್ತ ಬಂದೋಬಸ್ತ್‌ ಒದಗಿಸುವ ಜತೆಗೆ ಸಮ್ಮೇಳನದ ಯಶಸ್ವಿಗೆ ಅಧಿಕಾರಿಗಳು ಹಾಗೂ ನೌಕರರು ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಮಾತನಾಡಿದ ಸಹಾಯಕ ಆಯುಕ್ತ ಅವಿನಾಶ ಶಿಂಧೆ, ಸಮ್ಮೇಳನಕ್ಕೆ ಅನುದಾನ ಇರುವುದಿಲ್ಲ. ಸ್ಥಳೀಯವಾಗಿ ಕುಡಿವ ನೀರು, ಸ್ವಚ್ಛತೆ ಹಾಗೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ವೈಜ್ಞಾನಿಕ ಚಿಂತನೆವುಳ್ಳ ಈ ಸಮ್ಮೇಳನಕ್ಕೆ ವಿದ್ಯಾರ್ಥಿಗಳು ಭಾಗವಹಿಸುವಿಕೆ ಅಗತ್ಯವಾಗಿದೆ. ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳ ರಜೆ ನೀಡಲು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: YEAR ENDER 2023: ಈ ವರ್ಷದ ಅತ್ಯಂತ ವಿವಾದಾತ್ಮಕ ಸಿನಿಮಾಗಳಿವು!

ಸಭೆಯಲ್ಲಿ ತಹಸೀಲ್ದಾರ್‌ ಶಂಶಾಲಂ, ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್, ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ರಾಚಪ್ಪ, ಎಡಿಎಲ್‌ಆರ್ ಎಂ.ಜಿ. ಹಿರೇಮಠ, ಬಿಸಿಎಂ ಅಧಿಕಾರಿ ರಮೇಶ ನಾಯ್ಕ ಸೇರಿದಂತೆ ಇನ್ನಿತರಿದ್ದರು.

Exit mobile version