ಸಾಗರ: ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 4 ದಿನದ ಗಂಡು ಮಗು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ತಾಲೂಕಿನ (Sagara News) ಕೆಳದಿ ಗ್ರಾಮದ ಅಡ್ಡೇರಿ ವಾಸಿ ಕೃಷ್ಣಮೂರ್ತಿ ಮತ್ತು ಸವಿತಾ ದಂಪತಿಗಳ ಮಗು ಮೃತಪಟ್ಟಿದೆ.
ಜುಲೈ 7ರಂದು ಆಸ್ಪತ್ರೆಗೆ ದಾಖಲಾಗಿದ್ದ ಸವಿತಾ, ಜುಲೈ 8ರಂದು ಮಗುವಿಗೆ ಜನ್ಮನೀಡಿದ್ದರು. ಡೆಲಿವರಿ ನಂತರ ತಾಯಿ ಮಗು ಆರೋಗ್ಯವಾಗಿದ್ದರು. ಮಂಗಳವಾರ ಬೆಳಗ್ಗೆ ವೈದ್ಯರು ರೌಂಡ್ಸ್‌ಗೆ ಬಂದು ಮಗುವನ್ನು ಪರೀಕ್ಷಿಸಿದಾಗ ಮಗು ಉಸಿರಾಡುತ್ತಿರಲಿಲ್ಲ ಎನ್ನಲಾಗಿದೆ. ತಕ್ಷಣ ವೈದ್ಯರು ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನಿಸಿದರಾದರೂ ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ.
ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ಪೋಷಕರು ಮತ್ತು ಸಂಬಂಧಿಕರು ಆರೋಪಿಸಿ, ಆಸ್ಪತ್ರೆ ಮುಂಭಾಗ ಮಗುವಿನ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ವೈದ್ಯಾಧಿಕಾರಿ ಡಾ.ಪರಪ್ಪ ಆಗಮಿಸಿ, ಕರ್ತವ್ಯದಲ್ಲಿದ್ದ ವೈದ್ಯರು, ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು.
ಇದನ್ನೂ ಓದಿ | Assault Case: ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ ತಲ್ವಾರ್‌ನಿಂದ ಹಲ್ಲೆ ಮಾಡಿದ ರೌಡಿಶೀಟರ್
ಪ್ರತಿಭಟನಾನಿರತರೊಂದಿಗೆ ಮಾತನಾಡಿದ ವೈದ್ಯಾಧಿಕಾರಿ, ಮುಂದೆ ಇಂತಹ ಘಟನೆ ನಡೆಯದಂತೆ ನಿಗಾವಹಿಸಲಾಗುವುದು. ತಕ್ಷಣ ತನಿಖೆ ನಡೆಸಿ ಮಗುವಿನ ಸಾವಿಗೆ ಕಾರಣ ಏನೆಂದು ತಿಳಿಯುವ ಯತ್ನ ಮಾಡುತ್ತೇವೆ. ಸಿಬ್ಬಂದಿಯ ಕರ್ತವ್ಯ ಲೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು
ಎಂದು ಭರವಸೆ ನೀಡಿದ ನಂತರ ಮೃತ ಮಗುವಿನ ಪೋಷಕರು ಪ್ರತಿಭಟನೆ ಹಿಂಪಡೆದರು.