Site icon Vistara News

40% Commission : ಸಿದ್ದರಾಮಯ್ಯ ಸರ್ಕಾರಕ್ಕೂ ಗುತ್ತಿಗೆ ಕಂಟಕ?; ದಾಖಲೆ ಕೊಟ್ಟ ಕೆಂಪಣ್ಣ

Kempanna submits records to commission

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್‌ (40% Commission) ಹಗರಣದ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘ (State Contractors Association) ಇದೀಗ ಈ ಬಗ್ಗೆ ತನಿಖೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗದ (Justice Nagamohan Das Commission) ಮುಂದೆ ಮಂಗಳವಾರ ದಾಖಲೆಗಳನ್ನು ಸಲ್ಲಿಸಿದೆ. ಇದರಲ್ಲಿ ಹಾಲಿ ಸರ್ಕಾರದ ವಿರುದ್ಧವೂ ಒಂದೆರಡು ದಾಖಲೆಗಳಿವೆ ಎಂದು ಕೆಂಪಣ್ಣ )Kempanna) ಹೇಳಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆಯೋಗದ ಕಚೇರಿಗೆ ತೆರಳಿ ನಿವೃತ್ತ ನ್ಯಾಯಮೂರ್ತಿಗಳಿಗೆ ತಮ್ಮಲ್ಲಿರುವ ದಾಖಲೆಗಳನ್ನು ನೀಡಿದರು. ನ್ಯಾಯಮೂರ್ತಿಗಳು ಇನ್ನಷ್ಟು ಮಾಹಿತಿಗಳನ್ನು ಕೇಳಿದ್ದು ಅದನ್ನು ಹತ್ತು ದಿನಗಳ ಒಳಗಾಗಿ ಕೊಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ನಡುವೆ, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಅವರ ಸಾವಿಗೆ ಹಿಂದಿನ ಸರ್ಕಾರ ಒಬ್ಬ ಸಚಿವರು ಮತ್ತು ಅಧಿಕಾರಿಗಳು ಕಾರಣ ಎಂದು ಕೂಡಾ ಕೆಂಪಣ್ಣ ಆರೋಪಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿರುವ ಆಯೋಗದ ಕಚೇರಿಗೆ ಹೋಗಿ ದಾಖಲೆಗಳನ್ನು ಸಲ್ಲಿಸಿದ ಬಳಿಕ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, 40% ಕಮಿಷನ್‌ ವಿಚಾರದ ದಾಖಲೆಗಳನ್ನು ಕೊಟ್ಟಿದ್ದೇವೆ. ಈಗಿನ ಸರ್ಕಾರದ ಎರಡ್ಮೂರು ದಾಖಲೆಗಳನ್ನು ಕೂಡಾ ಕೊಟ್ಟಿದ್ದೇವೆ ಎಂದರು.

ʻʻನಾನು‌ ಸಂಘದ ಅಧ್ಯಕ್ಷ ಆದ ಬಳಿಕ ಈವರೆಗೆ ಸಿಕ್ಕ ಎಲ್ಲಾ ದಾಖಲೆ ನೀಡಿದ್ದೇವೆ. ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ ಕೂಡಾ ಅಲ್ಲ. ನಾವು ಕಂಟ್ರಾಕ್ಟರ್. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿದ್ದೀವಿ. ಲೋಕೋಪಯೋಗಿ, ನೀರಾವರಿ, ಪಂಚಾಯತ್ ರಾಜ್‌, ಆರೋಗ್ಯ ಇಲಾಖೆಗೆ ಸಂಬಂಧಿಸಿದ ದಾಖಲೆ ಕೊಟ್ಟಿದ್ದೇವೆ. ಇನ್ನಷ್ಟು ದಾಖಲೆಗಳನ್ನು ಕೇಳಿದ್ದಾರೆ. 10 ದಿನಗಳ‌ ನಂತರ ಮತ್ತಷ್ಟು ದಾಖಲೆಗಳನ್ನು ನೀಡುತ್ತೇವೆʼʼ ಎಂದು ಕೆಂಪಣ್ಣ ಹೇಳಿದ್ದಾರೆ.

ʻʻನಾವು ಯಾವುದೇ ಸರ್ಕಾರದ ಪರವಲ್ಲ. ಏನೇನು ದಾಖಲೆ ಇದೆಯೋ ಎಲ್ಲವನ್ನೂ ನೀಡಿದ್ದೇವೆ. ಯಾವ ದಾಖಲೆ ಅನ್ನುವುದನ್ನು ಹೇಳಲು ಇಷ್ಟಪಡುವುದಿಲ್ಲʼʼ ಎಂದು ಕೆಂಪಣ್ಣ ಹೇಳಿದರು.

ಇದನ್ನೂ ಓದಿ: Contractor Ambikapati : ಐಟಿ ದಾಳಿಗೆ ಒಳಗಾಗಿದ್ದ ಕಂಟ್ರಾಕ್ಟರ್‌ ಅಂಬಿಕಾಪತಿ ಹೃದಯಾಘಾತದಿಂದ ನಿಧನ

ಅಂಬಿಕಾಪತಿ ಸಾವಿಗೆ ಮಾಜಿ ಮಂತ್ರಿ ಕಾರಣ

ಈ ನಡುವೆ, ಸೋಮವಾರ ಹೃದಯಾಘಾತದಿಂದ ನಿಧನರಾದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರ ಸಾವಿಗೆ ಹಿಂದಿನ ಸರ್ಕಾರದ ಒಬ್ಬ ಮಂತ್ರಿ ಮತ್ತು ಈಗಿನ ಸರ್ಕಾರದ ಕೆಲ ಅಧಿಕಾರಿಗಳು ಕಾರಣ ಎಂದು ಕೆಂಪಣ್ಣ ಆರೋಪಿಸಿದರು.

ʻʻಅಂಬಿಕಾಪತಿ ಅವರು ತುಂಬಾ ಮನ ನೊಂದಿದ್ದರು. ಅಂಬಿಕಾ ಪತಿಯ ಸಾವಿಗೆ ಕೆಲವರು ಕಾರಣʼʼ ಎಂದು ಹೇಳಿದ ಕೆಂಪಣ್ಣ ಅವರು, ಅವರು ಯಾರು ಎಂಬ ಮಾಹಿತಿ ಬಿಚ್ಚಿಡದೆ ಹಾಗೇ ಹೊರಟರು ಕೆಂಪಣ್ಣ. ಅಂಬಿಕಾಪತಿ ತುಂಬಾ ಒಳ್ಳೆಯ ಮನುಷ್ಯ. ಅವರಿಗೆ ಹೀಗಾಗಬಾರದಿತ್ತು ಎಂದು ಕೆಂಪಣ್ಣ ಹೇಳಿದರು.

ನೋಡದೆ ರಿಯಾಕ್ಟ್‌ ಮಾಡಲ್ಲ ಎಂದ ಕೆಂಪಣ್ಣ

ಕೆಂಪಣ್ಣ ಅವರು ದಾಖಲೆಗಳನ್ನು ನೀಡಿರುವುದು ಮತ್ತು ಅವರ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ʻʻನಾನು ನೋಡದೆ ರಿಯಾಕ್ಟ್ ಮಾಡೋಕೆ ಆಗಲ್ಲ. ಯಾವ ಉದ್ದೇಶದಿಂದ ಮಾತನಾಡಿದ್ದಾರೆ ಅನ್ನೋದು ನಾನು ನೋಡ ಬೇಕಲ್ವಾʼʼ ಎಂದು ಸಿಎಂ ಹೇಳಿದ್ದಾರೆ.

Exit mobile version