Site icon Vistara News

40% Commission | ಮತ್ತೆ ಸಿಡಿದೆದ್ದ ಗುತ್ತಿಗೆದಾರರು: ಜ. 18ರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ, 19ರಂದು ಕೋರ್ಟ್‌ಗೆ ದಾಖಲೆ

Kempanna

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಾಮಗಾರಿ ಕಮಿಷನ್‌ (40% Commission) ವಿಚಾರದಲ್ಲಿ ಗಂಭೀರ ಆರೋಪ ಮಾಡುತ್ತಿರುವ ರಾಜ್ಯ ಗುತ್ತಿಗೆದಾರರ ಸಂಘ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದೆ. ಜನವರಿ ೧೮ರಂದು ಫ್ರೀಡಂ ಪಾರ್ಕ್‌ನಲ್ಲಿ ಗುತ್ತಿಗೆದಾರರ ಬೃಹತ್‌ ಪ್ರತಿಭಟನೆ ನಡೆಯಲಿದೆ, ೧೯ರಂದು ಈ ಬಗ್ಗೆ ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದು ಗುತ್ತಿಗೆದಾರರ ರಾಜ್ಯ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಕಟಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆ, ಭ್ರಷ್ಟಾಚಾರ ನಿಯಂತ್ರಣ, ಜಿಎಸ್‌ಟಿ ಗೊಂದಲ ಮತ್ತು ಪ್ಯಾಕೇಜ್ ರದ್ದು ಪದ್ದತಿ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ವಿವರಿಸಿದರು.

ಜನವರಿ ೧೮ರಂದು ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ಸುಮಾರು 20,000ಕ್ಕೂ ಹೆಚ್ಚು ಗುತ್ತಿಗೆದಾರರು ಭಾಗಿಯಾಗಲಿದ್ದಾರೆ. ಆವತ್ತು ಬೇಡಿಕೆ ಈಡೇರಿಸದೆ ಇದ್ದರೆ ಆವತ್ತಿನಿಂದಲೇ ಎಲ್ಲ ಕಾಮಗಾರಿಗಳನ್ನು ನಿಲ್ಲಿಸುತ್ತೇವೆ. ಬಳಿಕ ಜನವರಿ ೧೯ರಂದು ನೇರವಾಗಿ ಕೋರ್ಟ್‌ಗೆ ಎಲ್ಲ ರೀತಿಯ ಅಕ್ರಮಗಳ ದಾಖಲೆಗಳನ್ನು ನೀಡಲಿದ್ದೇವೆ. ಮುಂದಿನ 30 ದಿನಗಳೊಳಗೆ ದಾಖಲೆಗಳನ್ನು ಮಾಧ್ಯಮಗಳ ಮುಂದೆ‌ ಬಿಡುಗಡೆ ಮಾಡಲಾಗುತ್ತದೆ ಎಂದು ಕೆಂಪಣ್ಣ ಪ್ರಕಟಿಸಿದರು. ಗುತ್ತಿಗೆದಾರರಿಗೆ ಬಾಕಿ ಇರುವ 25 ಸಾವಿರ ಕೋಟಿ ರೂ. ಕೂಡಲೇ ಬಿಡುಗಡೆ ಮಾಡಬೇಕು, ಭ್ರಷ್ಟಾಚಾರ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದರು.

ಗುತ್ತಿಗೆದಾರರು ಹೇಳುತ್ತಿರುವುದೇ?
– ಇತ್ತೀಚಿನ ವರ್ಷಗಳಲ್ಲಿ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಸರಕಾರಗಳೂ ಸ್ಪಂದಿಸುತ್ತಿಲ್ಲ. ಪ್ರತೀ ಸರ್ಕಾರಕ್ಕೂ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ನಮ್ಮ ಬೇಡಿಕೆಗಳಿಗೆ ಹಂತ ಹಂತವಾಗಿಯಾದರೂ ಸ್ಪಂದಿಸುವಂತೆ ಕೇಳಿಕೊಳ್ಳುತ್ತಿದ್ದರೂ ಸರಕಾರಗಳು ನಿರ್ಲಕ್ಷ್ಯ ಧೋರಣೆಯನ್ನು ಪ್ರದರ್ಶಿಸುತ್ತಿವೆ. ಮುಖ್ಯಮಂತ್ರಿಗಳು, ಸಚಿವರು ಮತ್ತು ಅಧಿಕಾರಿಗಳಿಗೆ ನೂರಾರು ಪತ್ರಗಳನ್ನು ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನಾವು ಹೋರಾಟದ ಹಾದಿಯನ್ನು ಹಿಡಿಯುವುದು ಅನಿವಾರ್ಯವಾಗಿದೆ.

-ನಮ್ಮ ಈ ಹೋರಾಟಕ್ಕೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತೆ. ಸರಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಹೇಳಿದ ಕೆಂಪಣ್ಣ, ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

-ನಮ್ಮದು ಈಡೇರಿಸಲಾಗದ ಬೇಡಿಕೆಗೇನೂ ಅಲ್ಲ. ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವಂತೆ ಆಗ್ರಹಿಸುವುದು ತಪ್ಪೇ? ಜಿಎಸ್‌ಟಿ ಗೊಂದಲವನ್ನು ಬಗೆಹರಿಸುವಂತೆ ಕೇಳುವುದೇ ತಪ್ಪೇ? ಈ ಸಮಸ್ಯೆಗಳಿಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲವೇ ದಿನಗಳಲ್ಲಿ ಪರಿಹಾರ ರೂಪಿಸಬಹುದಾದರೂ ಸರಕಾರ ಕಡೆಗಣಿಸುತ್ತಿದೆ ಆದ್ದರಿಂದ ಹೋರಾಟದ ಮೂಲಕವೇ ಸರಕಾರವನ್ನು ಎಚ್ಚರಿಸುವುದು ಅನಿವಾರ್ಯವಾಗಿದೆ,

-ಈ ಹಿಂದೆ 2022ರ ಏಪ್ರಿಲ್‌ನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದರು. ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಪರಿಹಾರ ರೂಪಿಸುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಯಾವುದೇ ಪ್ರಯೋಜನವಾಗಿಲ್ಲ. ಅವರ ಭರವಸೆಗಳು ಕೇವಲ ಕಡತಗಳಲ್ಲಿ ಮಾತ್ರ ಉಳಿದುಕೊಂಡಿವೆ.

ಇದನ್ನೂ ಓದಿ | Karnataka Election : ಕಾಂಗ್ರೆಸ್-ಬಿಜೆಪಿ ನಡುವೆ ಥಟ್ ಅಂತ ಹೇಳಿ ಫೈಟ್; ಶಿಕ್ಷಕರ ನೇಮಕಾತಿ‌ ಅಕ್ರಮ V/S 40% ಕಮಿಷನ್‌

Exit mobile version