Site icon Vistara News

40% Commission: ಕಮಿಷನ್ ಕೇಳಿದ್ರೆ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಹೋರಾಟ: ಕೆಂಪಣ್ಣ ಎಚ್ಚರಿಕೆ

Karnataka contractor association president Kempanna

ಚಿಕ್ಕಬಳ್ಳಾಪುರ: ಈ ದೇಶದಲ್ಲಿ ಗುತ್ತಿಗೆದಾರರಷ್ಟು ಕಷ್ಟದಲ್ಲಿರುವವರು ಯಾರೂ ಇಲ್ಲ. ರಾಜ್ಯದಲ್ಲಿ ಶೇ. 85% ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ಯಾರಿಗೂ ಸರಿಯಾಗಿ ಪೇಮೆಂಟ್ ಕೊಡಲಿಲ್ಲ. ಹೀಗಾಗಿ ಹೋರಾಟ ಮಾಡಬೇಕಾಯಿತು. ಭ್ರಷ್ಟಾಚಾರ (40% Commission) ಹೆಚ್ಚಾಗಿದ್ದರಿಂದ ಮೂರು ವರ್ಷ ನಿರಂತರವಾಗಿ ಹೋರಾಟ ಮಾಡಬೇಕಾಯಿತು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು.

ಜಿಲ್ಲೆಯ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗ ಹೊಸ ಸರ್ಕಾರ ಬಂದಿದೆ. ಸಿಎಂ, ಡಿಸಿಎಂ ಸೇರಿ ಎಲ್ಲಾ ಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ಎಲ್ಲರೂ ಆಶ್ವಾಸನೆ ನೀಡಿದ್ದು, ಬಾಕಿ ಬಿಲ್‌ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಡಿದೆ ಎಂದು ಹೇಳಿದ್ದಾರೆ. ಪಿಡಬ್ಲ್ಯುಡಿ ಬಿಲ್ ಹಣ ಸೋಮವಾರದಿಂದ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಮೂರು ತಿಂಗಳಿಂದ ಪೇಮೆಂಟ್ ಮಾಡಿಲ್ಲ. ಗುತ್ತಿಗೆದಾರರು ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲೂ ಹೆಣಗಾಡುತ್ತಿದ್ದಾರೆ ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವರು ಐದು ವರ್ಷಗಳ ಬಾಕಿ ಬಿಲ್‌ ಖಡಾಖಂಡಿತವಾಗಿ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ಸಿಎಂ, ಡಿಸಿಎಂ ಭರವಸೆ ನೀಡಿದ್ದಾರೆ. ಇದನ್ನು ಬಿಟ್ಟು ಸಂಘರ್ಷಕ್ಕೆ ನಿಂತರೆ, ನಾವೂ ಸಿದ್ಧರಾಗಿದ್ದೇವೆ. ನಮಗೆ ಸಪೋರ್ಟ್ ಮಾಡದೇ ಗದಾಪ್ರಹಾರ ನಡೆಸಿದರೆ ನಾವು ರೆಡಿಯಾಗಿದ್ದೇವೆ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಕೆಂಪಣ್ಣ ಎಚ್ಚರಿಕೆ ಕೊಟ್ಟರು.

ಇದನ್ನೂ ಓದಿ | Assembly Session : ವರ್ಗಾವಣೆ ದಂಧೆ ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ; ಸಿದ್ದರಾಮಯ್ಯ ಸವಾಲ್‌

ಎರಡೂ ಸರ್ಕಾರಗಳ ಬಗ್ಗೆ ನಮಗೆ ದ್ವಂದ್ವ ನಿಲುವು ಇದೆ. ಕಳೆದ ಸರ್ಕಾರದ ಬಗ್ಗೆಯೂ ನಮಗೆ ಒಳ್ಳೆ ಅಭಿಪ್ರಾಯ ಇತ್ತು. ಆದರೆ 30- 40% ಭ್ರಷ್ಟಾಚಾರ ಮಾಡಿದ ಬಗ್ಗೆ ದಾಖಲೆ ಇದ್ದ ಕಾರಣ ಪ್ರಧಾನ ಮಂತ್ರಿಗಳಿಗೆ ದೂರು ಕೊಡಬೇಕಾಯಿತು. ಪೇಮೆಂಟ್ ಆಗುವುದು ತಡ ಆಗಿದೆ ಎಂಬ ನೋವಿದೆ. ಯಾವುದೇ ಪಕ್ಷ ಒಳ್ಳೆಯದು ಮಾಡಿದರೂ ನಮ್ಮ ಬೆಂಬಲ ಇದೆ ಎಂದು ಹೇಳಿದರು.

25 ಸಾವಿರ ಕೋಟಿ ರೂಪಾಯಿ ಬಿಲ್ ಪೆಂಡಿಂಗ್

ರಾಜ್ಯದಲ್ಲಿ 25 ಸಾವಿರ ಕೋಟಿ ರೂಪಾಯಿ ಬಿಲ್ ಪೆಂಡಿಂಗ್ ಇದೆ. ಸಣ್ಣ ನೀರಾವರಿ ಇಲಾಖೆಯಲ್ಲಿ ಅತಿ ಹೆಚ್ಚು ಬಿಲ್ ಬಾಕಿ ಇದೆ. ಈ ಬಗ್ಗೆ ಇಲಾಖೆಯವರಿಗೆ ಲೆಕ್ಕ ಸರಿಯಾಗಿ ಸಿಗುತ್ತಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಬಾಕಿ ಇರುವ ಬಿಲ್‌ಗಳ ಪಟ್ಟಿ ತರಸಿದ್ದಾರೆ. ಕಳೆದ ಸರ್ಕಾರದಲ್ಲಿ ಒಂದು ಕೋಟಿ ರೂಪಾಯಿ ಕೆಲಸಕ್ಕೆ ನೂರು ಕೋಟಿ ರೂಪಾಯಿ ಕೆಲಸ ಮಾಡಿಸಿದ್ದಾರೆ. ಒಬ್ಬ ಗುತ್ತಿಗೆದಾರನಿಗೆ 700 ಕೋಟಿ ರೂ. ಬಾಕಿ ಮೊತ್ತ ಕೊಡಬೇಕಾಗಿದೆ‌. ಈ ಬಗ್ಗೆ ಡಿಸಿಎಂ ಡಿಕೆಶಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸರ್ಕಾರದ ಬಗ್ಗೆ ಇನ್ನೂ ಭ್ರಷ್ಟಾಚಾರದ ಆರೋಪ ಬಂದಿಲ್ಲ. ದೂರುಗಳು ಬಂದಾಗ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

3 ವರ್ಷಗಳ ಬಾಕಿ ಬಿಲ್‌ ನೀಡಬೇಕಿದೆ. ಈ ಸರ್ಕಾರ ಇನ್ನೂ ಯಾವುದೇ ಕೆಲಸಗಳನ್ನು ಪ್ರಾರಂಭ ಮಾಡಿಲ್ಲ. ಹಳೇ ಸರ್ಕಾರದ ಕೆಲಸಗಳ ಬಾಕಿ ಮೊತ್ತ ಬಿಡುಗಡೆ ಮಾಡಿದರೆ ಸಾಕಾಗಿದೆ ಎಂದ ಅವರು, 40% ದಾಖಲೆ ಸಿಕ್ಕಿದ ಮೇಲೆ ಹೋರಾಟ ಮಾಡಲು ಪ್ರಾರಂಭ ಮಾಡಿದೆ. ಮೊದಲೇ ಯಾಕೆ ಹೋರಾಟ ಮಾಡಲಿ? ಸಿಕ್ಕ ಸಿಕ್ಕವರಿಗೆ ಕೆಲಸ ಕೊಡಲು ಪ್ರಾರಂಭಿಸಿದರು. ಅವರಿಗೆ ಇಷ್ಟ ಬಂದಹಾಗೆ ನಡೆದುಕೊಂಡರು, ಯಾವುದೇ ನಿಯಮ ಪಾಲಿಸಿಲ್ಲ. ಈ ಬಗ್ಗೆ ಬಿಜೆಪಿ ಮುಖಮಂತ್ರಿಗಳಿಗೆ ಹೇಳಿದ್ದೆ, ಆದರೆ ನನ್ನನ್ನು ಜೈಲಿಗೆ ಹಾಕಿದರು ಎಂದು ಆರೋಪಿಸಿದರು.

ಅವರು ಜೈಲಿಗೆ ಹಾಕಿದರೂ ನಾನೇನು ಅವರಿಗೆ ವಿರುದ್ಧವಾಗಿರಲಿಲ್ಲ. 15 ರಿಂದ 40%ಗೆ ಕಮಿಷನ್ ಏರಿದಾಗ ಹೋರಾಟ ಮಾಡಬೇಕಾಯಿತು‌ ಎಂದ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರ ಭೇಟಿಗೆ ಅವಕಾಶ ಕೇಳಿದ್ದೆವು. ನಂತರ ಪ್ರಧಾನಿಗಳಿಗೆ ದೂರು ಕೊಡಬೇಕಾಯಿತು. ಇದರ‌ 40% ಕಮಿಷನ್ ವಿರುದ್ಧ ಹೋರಾಟ ಅನಿವಾರ್ಯವಾಯಿತು. ಇದನ್ನೇ ಬಿಜೆಪಿಯವರು ತಪ್ಪಾಗಿ ಅರ್ಥೈಸಿಕೊಂಡರು, ಈಗ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಹೋರಾಟ?

ಯಾರಾದರೂ ಗುತ್ತಿಗೆದಾರರ ಬಳಿ ಕಮಿಷನ್‌ಗೆ ಬೇಡಿಕೆ ಇಟ್ಟರೆ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿಯೂ ಹೋರಾಟ ಮಾಡುತ್ತೇವೆ. ಆದರೆ, ಒಂದೇ ಒಂದು ಕಂಪ್ಲೆಂಟ್ ಬಂದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೆಲವು ಕೆಲಸಗಳು ನಿಲ್ಲಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಇದ್ದಾಗ ವಿಪರೀತ ಕೆಲಸಗಳನ್ನು ಮಂಜೂರು ಮಾಡಿದ್ದರು. ಅವುಗಳನ್ನೆಲ್ಲ ನಿಲ್ಲಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇಷ್ಟ ಬಂದಹಾಗೆ ಕೆಲಸ ಕೊಟ್ಟುಬಿಟ್ಡರೆ ರಾಜ್ಯಕ್ಕೆ ಅನ್ಯಾಯ ಆಗುತ್ತದೆ. ಗುತ್ತಿಗೆದಾರರ ಹಿತದೃಷ್ಟಿಯಿಂದ ನಮ್ಮ ಹೋರಾಟ ನಡೆಯುತ್ತಿದೆ. ನಮ್ಮ ಹೋರಾಟದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ನಮ್ಮಿಂದ ಸರ್ಕಾರ ಬಂದಿದೆ ಎಂದರೆ ಮೂರ್ಖರಾಗುತ್ತೇವೆ ಎಂದು ಕೆಂಪಣ್ಣ ಹೇಳಿದರು.

ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕೆಂಪಣ್ಣ ವಾಗ್ದಾಳಿ

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಾ.ಕೆ. ಸುಧಾಕರ್ ವಿರುದ್ಧ ಕೆಂಪಣ್ಣ ವಾಗ್ದಾಳಿ ನಡೆಸಿದರು. ಊ ಇಸ್ ಕೆಂಪಣ್ಣ ಎಂದು ಕೇಳಿದ್ದ ಸುಧಾಕರ್‌ಗೆ ತಿರುಗೇಟು ನೀಡಿದ ಕೆಂಪಣ್ಣ, ಸುಧಾಕರ್ ಏನು ಮಾಡಿದ್ದಾರೆ ಅದನ್ನು ಅನುಭವಿಸುತ್ತಿದ್ದಾರೆ. ಊ ಇಸ್ ಕೆಂಪಣ್ಣ ಎಂಬುವುದು ನನಗೂ ಗೊತ್ತಿದೆ, ಸುಧಾಕರ್‌ಗೂ ಗೊತ್ತಿದೆ. ನಮ್ಮ ಗುತ್ತಿಗೆದಾರರಿಗೂ ಹೆದರಿಸಿದರು, ಅಧಿಕಾರಿಗಳಿಗೂ ಹೆದರಿಸಿದರು. ಹೋರಾಟ ಮಾಡುವಾಗ ನಾವು ಯಾರಿಗೂ ಹೆದರಿಕೊಳ್ಳಲ್ಲ. ಡಬಲ್ ಗೇಮ್ ಆಡುವವರು ನಮ್ಮಲ್ಲೂ ಇದ್ದಾರೆ, ರಾಜಕಾರಣದಲ್ಲೂ ಇದ್ದಾರೆ. ಮೀರ್ ಸಾದಿಕ್‌ರು ಎಲ್ಲಾ ಕಡೆ, ಎಲ್ಲಾ ಕಾಲದಲ್ಲೂ ಇದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Assembly Session: ಬಿಜೆಪಿಯವರು ಹಿಟ್ಲರ್‌ ವಂಶದವರ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಮಾಜಿ ಸಚಿವ ಡಾ.ಕೆ. ಸುಧಾಕರ್ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ಸತ್ತ ಹಾವಿನ ಮೇಲೆ ದೊಣ್ಣೆ ಪ್ರಹಾರ ಮಾಡುವುದು ಬೇಡ. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ ಎಂದು ಮಾಜಿ ಸಚಿವರು ಹೇಳಿದ್ದರು. ನಿಮಗೆ ತಾಕತ್ತಿದ್ದರೆ ಕೇಸ್ ಹಾಕಿ ನೋಡೋಣ ಎಂದು ಹೇಳಿದ್ದೆ. ಇದುವರೆಗೂ ಡಾ.ಕೆ. ಸುಧಾಕರ್ ಕೇಸ್ ಹಾಕಿಲ್ಲ ಎಂದು ಕೆಂಪಣ್ಣ ಹೇಳಿದರು.

Exit mobile version