ಬೆಂಗಳೂರು: ರಾಜ್ಯದಲ್ಲಿ ಗುತ್ತಿಗೆಗಾರರಿಗೆ ಇನ್ನೂ ಹಣ ಪಾವತಿ ಆಗುತ್ತಿಲ್ಲ. ವಿವಿಧ ಇಲಾಖೆಗಳಿಂದ 22 ಸಾವಿರ ಕೋಟಿ ಗುತ್ತಿಗೆದಾರರಿಗೆ ಬಾಕಿ ಇದೆ. ನಾವು ಇಷ್ಟೆಲ್ಲ ದೂರು ನೀಡಿದ ನಂತರವೂ ಪರ್ಸೆಂಟೇಜ್ (40% Commission) ಕೇಳುವುದು ನಿಂತಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.
ಗುತ್ತಿಗೆದಾರರಿಗೆ ಇನ್ನೂ ಬಾಕಿ ಹಣ ಉಳಿಸಿಕೊಂಡಿದ್ದಾರೆ. ಕೆಲವರಿಗೆ ಹಣ ಬಿಡುಗಡೆ ಮಾಡಿದ್ದಾರೆ. ಇನ್ನು ಕೆಲವರಿಗೆ ಬಿಡುಗಡೆ ಮಾಡಿಲ್ಲ. ಲೋಕೋಪಯೋಜಿ, ನೀರಾವರಿ, ಬಿಬಿಎಂಪಿ ಸೇರಿದಂತೆ ಹಲವು ಇಲಾಖೆಯಲ್ಲಿ ಪಾವತಿ ಬಾಕಿ ಇದೆ ಎಂದು ಹೇಳಿದ ಕೆಂಪಣ್ಣ ಅವರು, ʻʻಅವರಿಗೆ ಬೇಕಾದವರಿಗೆ ಬಿಡುಗಡೆ ಮಾಡ್ತಾ ಇದ್ದಾರೆ. ಹುಬ್ಬಳ್ಳಿ, ಧಾರವಾಡದಲ್ಲಿ ಚೀಫ್ ಎಂಜಿನಿಯರ್ ತಮಗೆ ಬೇಕಾದವರಿಗೆ ಟೆಂಡರ್ ಮಾರಾಟ ಮಾಡುತ್ತಿದ್ದಾರೆʼʼ ಎಂದು ದೂರಿದರು. ʻʻರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಬೇಕಾದವರಿಗೆ ಮಾತ್ರ ಬಿಲ್ ಮಾಡುವುದನ್ನು ಬಿಟ್ಟು ಕಾಲ ಮಿತಿಯೊಳಗೆ ಬಾಕಿ ಮೊತ್ತ ಬಿಡುಗಡೆ ಮಾಡಿʼʼ ಎಂದು ಕೆಂಪಣ್ಣ ಮನವಿ ಮಾಡಿದರು.
ʻʻಬಾಕಿ ಹಣ ಬಿಡುಗಡೆ ಮಾಡೋದಕ್ಕೆ 7ರಿಂದ 8, 10% ಕೇಳುತ್ತಿದ್ದಾರೆ. ಪರ್ಸೆಂಟೇಜ್ ಬೇಡಿಕೆ ಇಡ್ತಾ ಇದ್ದಾರೆ. ಆದರೆ, ಪ್ರಕರಣ ಕೋರ್ಟ್‌ನಲ್ಲಿ ಇರೋದ್ರಿಂದ ಹೆಚ್ಚಾಗಿ ಮಾತಾಡೋಕೆ ಆಗುತ್ತಿಲ್ಲʼʼ ಎಂದ ಕೆಂಪಣ್ಣ, ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷ ಕಳೆದರೂ ಹಣ ಬಿಡುಗಡೆಯಾಗುತ್ತಿಲ್ಲʼʼ ಎಂದು ಹೇಳಿದರು.
ಯಾವ ಸರ್ಕಾರ ಬಂದರೂ ಹೋರಾಟ
ʻನಾವು ಇಷ್ಟೆಲ್ಲ ಹೋರಾಟ ಮಾಡಿದ ಬಳಿಕವೂ ಪರ್ಸೆಂಟೇಜ್ ಕೇಳ್ತಾ ಇದ್ದಾರೆʼʼ ಎಂದು ಹೇಳಿದ ಅವರು, ನಾವು ಯಾವ ಪಕ್ಷ ಅಧಿಕಾರಕ್ಕೆ ಬಂದರೂ ನಮ್ಮ ಹಕ್ಕು ಮತ್ತು ಸಮಸ್ಯೆಗಳಿಗಾಗಿ ಹೋರಾಟ ಮಾಡಿಯೇ ಮಾಡುತ್ತೇವೆʼʼ ಎಂದು ನುಡಿದರು.
ಇದನ್ನೂ ಓದಿ : Priyank Kharge: ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ಆಧರಿಸಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ 40% ಟೀಕೆ