ಬೆಂಗಳೂರು: ಚಾಮರಾಜಪೇಟೆಯ 3ನೇ ಕ್ರಾಸ್‌ನ ಗೋದಾಮಿನ ಮೇಲೆ ಜಿಎಸ್‌ಟಿ ಅಧಿಕಾರಿಗಳು ದಾಳಿ (GST Raid) ನಡೆಸಿ, ಮತದಾರರಿಗೆ ಉಡುಗೊರೆಯಾಗಿ ಹಂಚಲು ಸಂಗ್ರಹಿಸಿಟ್ಟಿದ್ದ 450 ಶಾಲಾ ಬ್ಯಾಗ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬ್ಯಾಗ್‌ಗಳ ಮೇಲೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಬಿಜೆಪಿ ಶಾಸಕ ಹಾಗೂ ಸಚಿವ ಕೆ. ಸಿ. ನಾರಾಯಣಗೌಡ ಅವರ ಭಾವಚಿತ್ರ ಕಂಡುಬಂದಿದೆ.
ಮತದಾರರಿಗೆ ಹಂಚಲು ಬ್ಯಾಗ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಚಾಮರಾಜಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ 450 ಬ್ಯಾಗ್‌ಗಳು ಕಂಡುಬಂದಿವೆ. ಸುಮಾರು 10 ಸಾವಿರ ಶಾಲಾ ಬ್ಯಾಗ್‌ಗಳು ಸಂಗ್ರಹಿಸಲಾಗಿದೆ ಎಂದು ಕೆಆರ್‌ಎಸ್ ಪಕ್ಷ ಆರೋಪಿಸಿತ್ತು. ಆದರೆ, ದಾಳಿ ವೇಳೆ ಸಿಕ್ಕ 450 ಬ್ಯಾಗ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದು, ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬೊಮ್ಮನಹಳ್ಳಿಯಲ್ಲಿ ಒಂದು ಲೋಡ್ ಕುಕ್ಕರ್‌ಗಳ ವಶ
ಬೆಂಗಳೂರು: ನಗರದ ಹೊರವಲಯದ ಬೊಮ್ಮನಹಳ್ಳಿ ಮತದಾರರಿಗೆ ಕುಕ್ಕರ್ ಹಂಚುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, ವಾಹನ ಸಮೇತ ಒಂದು ಲೋಡ್ ಕುಕ್ಕರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪುಟ್ಟೇನಹಳ್ಳಿಯ ಸ್ಟಾರ್ ಕನ್ವೆನ್ಷನ್ ಹಾಲ್‌ನಲ್ಲಿ ಮತದಾರರಿಗೆ ಕುಕ್ಕರ್ ಹಂಚಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ಪುಟ್ಟೇನಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ.
ಪುಟ್ಟೇನಹಳ್ಳಿ ಕಾಂಗ್ರೆಸ್ ಮುಖಂಡರು ಮತದಾರರಿಗೆ ಕುಕ್ಕರ್ ಹಂಚುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಕುಕ್ಕರ್‌ಗಳನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ವಾಹನವನ್ನು ಸೀಜ್ ಮಾಡದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕುಕ್ಕರ್ ಹಂಚುತ್ತಿದ್ದವರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಇದನ್ನೂ ಓದಿ | GST Raid: ಜಿಎಸ್‌ಟಿ ಅಧಿಕಾರಿಗಳ ದಾಳಿ; ಬಿಜೆಪಿ ಆಕಾಂಕ್ಷಿಗೆ ಸೇರಿದ 3 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ವಶಕ್ಕೆ
ಕೋಲಾರದಲ್ಲಿ ರಂಜಾನ್ ಪ್ರಯುಕ್ತ ಹಂಚಲು ಸಾಗಿಸುತ್ತಿದ್ದ 1200 ಫುಡ್ ಕಿಟ್ ಜಪ್ತಿ
ಕೋಲಾರ: ನಗರದ ಸುಲ್ತಾನ್ ತಿಪ್ಪಸಂದ್ರ ಬಳಿ ರಂಜಾನ್ ಹಬ್ಬದ ಪ್ರಯುಕ್ತ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಫುಡ್ ಕಿಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನಾಯತ್ ಎಂಬುವರಿಗೆ ಸೇರಿದ 1200 ಫುಡ್ ಕಿಟ್‌ಗಳನ್ನು ಕೋಲಾರ ನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ. ರಂಜಾನ್ ಹಬ್ಬದ ಪ್ರಯುಕ್ತ ಮತದಾರರಿಗೆ ಆಹಾರ ಸಾಮಗ್ರಿ ಕಿಟ್ ಹಂಚಿಕೆ ಮಾಡಲು ಯೋಜನೆ ಮಾಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಫುಡ್ ಕಿಟ್‌ಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 90 ಕುಕ್ಕರ್ ವಶಕ್ಕೆ
ವಿಜಯಪುರ: ಜಿಲ್ಲೆಯ ದೇವಣಗಾಂವ್ ಚೆಕ್ ಪೋಸ್ಟ್‌ನಲ್ಲಿ ಪರಿಶೀಲನೆ ವೇಳೆ 90 ಕುಕ್ಕರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವುದೇ ದಾಖಲೆಗಳಿಲ್ಲದ ಕುಕ್ಕರ್‌ಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಕುಕ್ಕರ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.