ಬೆಳಗಾವಿ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸಮಾವೇಶಕ್ಕೆ ಜನರನ್ನು ಸೇರಿಸಲು ತಲಾ 500 ರೂಪಾಯಿ ಕೊಡುವಂತೆ ಹೇಳಿರುವ ವಿಡಿಯೊ ಈಗ ವೈರಲ್ ಆಗಿದೆ. ಬೆಳಗಾವಿಯ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಮುಗಿಸಿ ವಾಪಸಾಗುವ ವೇಳೆ ಈ ಮಾತುಕತೆ ನಡೆದಿದೆ.
ಈ ಮಾತುಕತೆ ವೇಳೆ ಪ್ರಜಾಧ್ವನಿ ಬಸ್‌ನಲ್ಲಿ ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರ ನಾಯಕರು ಇದ್ದರು.
ವಿಡಿಯೊದಲ್ಲೇನಿದೆ?
ಬೆಳಗಾವಿ ಗ್ರಾಮೀಣ ಶಾಸಕಿ ಮಾತನಾಡುತ್ತಾ, ನೀವಿಬ್ಬರು ಸಮಾವೇಶಕ್ಕೆ ಬರಬೇಕು ಎಂದು ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿಗೆ ಆಹ್ವಾನ ನೀಡಿದರು. ಆಗ ಮಾತನಾಡಿದ ಸಿದ್ದರಾಮಯ್ಯ, ಚುನಾವಣೆ ಇರುವುದರಿಂದ ಅವರು ಸಹ ಜನರನ್ನು ಸೇರಿಸುತ್ತಾರೆ. ಹೀಗಾಗಿ ನೀವು 500 ರೂಪಾಯಿ ಕೊಟ್ಟು ಜನರನ್ನು ಕರೆದುಕೊಂಡು ಬರಬೇಕು ಎಂದು ಹೇಳಿದ್ದಾರೆ.
ಒಟ್ಟು 20 ಸೆಕೆಂಡ್ ಇರುವ ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆದರೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವ ಸಮಾವೇಶವನ್ನು ಏರ್ಪಡಿಸಲು ಮುಂದಾಗಿದ್ದಾರೆ ಎಂಬ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ಈ ಕಾರ್ಯಕ್ರಮಕ್ಕೆ ಜನರ ಕೊರತೆಯಾಗದಂತೆ ನೋಡಿಕೊಳ್ಳಲು ಪ್ರತಿಯೊಬ್ಬರಿಗೆ 500 ರೂಪಾಯಿ ಕೊಟ್ಟು ಕರ್ಕೊಂಡು ಬರಬೇಕು ಎಂದು ಸಿದ್ದರಾಮಯ್ಯ ಅವರು ಸಂದೇಶ ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: BJP Rathayatre: ವಿಜಯ ಸಂಕಲ್ಪ ರಥಯಾತ್ರೆಗೆ ಅನಾರೋಗ್ಯದಿಂದ ಸಚಿವ ಸೋಮಣ್ಣ ಗೈರಾಗಿದ್ದಾರೆ: ಕೆ.ಎಸ್. ಈಶ್ವರಪ್ಪ
ಅವರು ಮೈಕಲ್ಲಿ ಕರೆದ್ರೂ ಜನ ಬರಲ್ಲ: ಕೆ.ಎಸ್.ಈಶ್ವರಪ್ಪ
ಕಾರ್ಯಕ್ರಮಕ್ಕೆ 500 ರೂಪಾಯಿ ಕೊಟ್ಟು ಜನರನ್ನು ಸೇರಿಸುವ ಕೆಲಸವನ್ನು ಕಾಂಗ್ರೆಸ್‌ನವರು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಈಗ ಅವರು ಮೈಕಲ್ಲಿ ನಿಂತು ಕರೆದರೂ ಜನ ಬರುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಚಾಮರಾಜನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.