ಶಿವಮೊಗ್ಗ: ಇದು ಏಳು ತಿಂಗಳಿನಿಂದ ಕಗ್ಗಂಟಾಗಿರುವ ಬಾಲಕಿಯ ಕಿಡ್ನ್ಯಾಪ್ ಪ್ರಕರಣ. ಈ ಪ್ರಕರಣದಲ್ಲಿ ಆರೋಪಿ ಯಾರು ಎಂದು ತಿಳಿದಿದೆ. ಅವನ ಮೇಲೆ ಎಫ್‌ಐಆರ್ ಕೂಡಾ ದಾಖಲಾಗಿದೆ. ಆದರೆ, ಇನ್ನೂ ಆತನ ಸುಳಿವು ಸಿಕ್ಕಿಲ್ಲ, ಬಾಲಕಿ ಸಹ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಅಪಹರಣಕಾರ ಅಥವಾ ಬಾಲಕಿ ಬಗ್ಗೆ ಸುಳಿವು ಕೊಟ್ಟವರಿಗೆ ೫೦ ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.
೨೦೨೧ರ ಡಿಸೆಂಬರ್‌ನಲ್ಲಿ ಶಿವಮೊಗ್ಗ ನಗರದ ಬಾಲಕಿಯೊಬ್ಬಳನ್ನು ಬೆಂಗಳೂರಿನ ಕೆ.ಪಿ ಅಗ್ರಹಾರದ ನಿವಾಸಿ ಲಿಂಗರಾಜು ಎಂಬಾತ ಅಪಹರಿಸಿದ್ದಾನೆ ಎಂದು ಜಯನಗರ ಪೊಲೀಸ್ ಠಾಣೆಯಲ್ಲಿ ಅಪಹರಣದ ಎಫ್‌ಐಆರ್ ದಾಖಲಾಗಿತ್ತು. ಪೋಕ್ಸೋ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಲಾಗಿತ್ತು.
ಪೊಲೀಸರಿಗೆ ಕಗ್ಗಂಟಾದ ಪ್ರಕರಣ
ಅಪಹರಣವಾಗಿ ಆರು ತಿಂಗಳು ಕಳೆದು ಏಳನೇ ತಿಂಗಳಿಗೆ ಕಾಲಿಟ್ಟರೂ, ಆರೋಪಿಯ ಸುಳಿವು ಸಿಕ್ಕಿಲ್ಲ. ಜೊತೆಗೆ ಬಾಲಕಿಯೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಆರೋಪಿಯ ಸುಳಿವು ಕೊಟ್ಟರೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಹೆಸರು ಗೌಪ್ಯವಾಗಿಡುವ ಅಭಯ
ಈ ಅಪಹರಣ ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ಪೊಲೀಸರು, ಬಾಲಕಿಯ ಬಗ್ಗೆ, ಆರೋಪಿಯ ಬಗ್ಗೆ ಅಥವಾ ಅವರ ಇರುವಿಕೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ಸಾರ್ವಜನಿಕರು ನೀಡಬೇಕು. ಈ ಮಾಹಿತಿ ಮೇರೆಗೆ ಆರೋಪಿಯನ್ನು ಸೆರೆಹಿಡಿದರೆ ಇಲ್ಲವೇ ಬಾಲಕಿಯನ್ನು ಪತ್ತೆ ಮಾಡಲು ಸಾಧ್ಯವಾದರೆ ೫೦ ಸಾವಿರ ರೂಪಾಯಿ ಬಹುಮಾನವನ್ನು ನೀಡುವುದರ ಜತೆಗೆ ಮಾಹಿತಿ ನೀಡಿದವರ ಹೆಸರು ಸಹಿತ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ| ಲವ್ ಮ್ಯಾರೇಜ್: ವರನ ಮನೆಗೆ ನುಗ್ಗಿ ವಧುವಿನ ಕಿಡ್ನ್ಯಾಪ್