ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಭಾರಿ ಮಳೆಯಿಂದ ವಿವಿಧೆಡೆ ಸಾವು ನೋವು, ಆಸ್ತಿ ಪಾಸ್ತಿ ಹಾನಿ ಹಾಗೂ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಇದೀಗ ರಾಜ್ಯ ಸರ್ಕಾರದ ಅಧಿಕೃತ ಮಾಹಿತಿಯಂತೆ ಬರೋಬ್ಬರಿ 52 ಜನರು ರಕ್ಕಸ ಮಳೆಗೆ ಬಲಿಯಾಗಿದ್ದಾರೆ ಎಂಬ ಆಘಾತಕಾರಿ ವಿಷಯ ತಿಳಿದುಬಂದಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದಾರೆ.
ನಗರದ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದರು. ಈ ವೇಳೆ ಡಿಸಿ, ಜಿಲ್ಲಾ ಪಂಚಾಯಿತಿ ಸಿಇಒಗಳ ಜತೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ರಾಜ್ಯದಲ್ಲಿ ಮಳೆ ಹಾನಿ ಕುರಿತ ಮಾಹಿತಿ ಹಾಗೂ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಮಾಹಿತಿ ಪಡೆದರು.
52 ಜನ, 331 ಜಾನುವಾರು ಸಾವು, 814 ಮನೆಗಳಿಗೆ ಹಾನಿ: ಸಿದ್ದರಾಮಯ್ಯ
ಸಭೆ ಬಳಿಕ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಇಂದು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಈಗಾಗಲೇ ಪೂರ್ವ ಮುಂಗಾರು ಮಳೆ ಬಂದಿದೆ. ಏಪ್ರಿಲ್, ಮೇ ತಿಂಗಳಲ್ಲೇ ಪೂರ್ವ ಮುಂಗಾರು ಮಳೆ ಶುರುವಾಗುತ್ತದೆ. ಈ ಬಾರಿ ವಾಡಿಕೆಗಿಂತ ಶೇ.10 ಹೆಚ್ಚು ಪೂರ್ವ ಮುಂಗಾರು ಮಳೆಯಾಗಿದೆ. ಭಾರಿ ಮಳೆಗೆ 52 ಜನ ಮೃತಪಟ್ಟಿದ್ದಾರೆ. 331 ಜಾನುವಾರು ಮೃತಪಟ್ಟಿವೆ. 20 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ನಾಶವಾಗಿದೆ. 814 ಮನೆಗಳಿಗೆ ಹಾನಿಯಾಗಿದೆ. ಕೆಲವರಿಗೆ 5 ಲಕ್ಷ ರೂಪಾಯಿ ಪರಿಹಾರ ಕೂಡ ಕೊಡಲಾಗಿದೆ. ಹಾಗೆಯೇ ಎಲ್ಲದಕ್ಕೂ ಕೂಡಲೇ ಪರಿಹಾರ ನೀಡಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | Uttara kannada News: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ; 12 ಜನ ಮೀನುಗಾರರ ರಕ್ಷಣೆ
ಮನೆಗಳ ಹಾನಿ ಬಗ್ಗೆ ಕೂಡ ಅಂದಾಜು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಸ ಸರ್ಕಾರದ ಮೇಲೆ ಜನರಿಗೆ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಜನರು ಬಯಸಿದ ಬದಲಾವಣೆ ಬಂದಿದೆ ಅಂತ ಗೊತ್ತಾಗಬೇಕು. ಅಧಿಕಾರಿಗಳು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಅಂತ ಸೂಚನೆ ನೀಡಿರುವುದಾಗಿ ಹೇಳಿದರು.
ಪೂರ್ವ ಮುಂಗಾರಿನಲ್ಲಿ ಸುಮಾರು 2 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 540 ಕೋಟಿ ರೂ.ಗಳಿವೆ. ವಸ್ತುಸ್ಥಿತಿ ಆಧಾರದಲ್ಲಿ ಅವಶ್ಯಕತೆ ಇದ್ದರೆ ದುಡ್ಡು ಕೊಡುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ವಿಪತ್ತು ನಿರ್ವಹಣೆಗೆ 331 ಕೋಟಿ ರೂಪಾಯಿ ಮೀಸಲಿದೆ. ಯಾವುದೇ ಕಾರಣಕ್ಕೂ ಮಳೆ ಹಾನಿ ಪರಿಹಾರ ಕೆಲಸ ನಿಲ್ಲಬಾರದು ಎಂದು ಸೂಚಿಸಿದ್ದೇವೆ. ಕೀಟನಾಶಕ, ಗೊಬ್ಬರ ಬೇಡಿಕೆಗಿಂತ ಹೆಚ್ಚು ದಾಸ್ತಾನು ಮಾಡಬೇಕು. ರೈತರು ಬಿತ್ತನೆ ಬೀಜಕ್ಕಾಗಲಿ, ಕೀಟನಾಶಕಕ್ಕೆ ಅಲೆಯಬಾರದು ಎಂದು ಸೂಚಿಸಿದ್ದೇವೆ. 13,52,000 ಮೆಟ್ರಿಕ್ ಟನ್ ರಸಗೊಬ್ಬರವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂಬುವುದಾಗಿ ಸಿಎಂ ತಿಳಿಸಿದರು.
ರಸ್ತೆ, ಮೇಲ್ಸೇತುವೆಗಳ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದ್ದೇವೆ. ಕರ್ತವ್ಯ ಲೋಪವಿದ್ದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಅಧಿಕಾರಿಗಳು ಫೀಲ್ಡ್ ವರ್ಕ್ ಮಾಡಬೇಕು ಮಾಡಬೇಕು. ಗ್ರೌಂಡ್ ರಿಯಾಲಿಟಿ ಮೇಲೆ ನಿರ್ಧಾರ ತೆಗೆದುಕೊಳ್ಳಿ ಎಂದು ಸೂಚಿಸಿರುವುದಾಗಿ ಹೇಳಿದರು.
ಇದನ್ನೂ ಓದಿ | Kannada and Culture Dept: ರಾಜ್ಯ ಸರ್ಕಾರದಿಂದ 31 ಜಯಂತಿ ಆಚರಣೆ ವೇಳಾಪಟ್ಟಿ, ಟಿಪ್ಪು ಜಯಂತಿ ಇಲ್ಲ?
ಇನ್ನು ಬೆಂಗಳೂರಿನಲ್ಲಿ ನೀರು ನಿಲ್ಲುವ ಅಂಡರ್‌ಪಾಸ್‌ನಲ್ಲಿ ಸಂಚಾರಕ್ಕೆ ಅವಕಾಶ ಕೊಡಬಾರದು, ರಾಜಕಾಲುವೆ ಒತ್ತುವರಿ ತೆರವು ಬಗ್ಗೆ ಗಮನ ಹರಿಸಬೇಕು. ರಸ್ತೆಯ ಮೇಲೆ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದು ಬಿಬಿಎಂಪಿ ಕಮಿಷನರ್‌ಗೆ ಸೂಚನೆ ನೀಡಿದ್ದೇವೆ. ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಾವೇ ಶುರು ಮಾಡಿ ಶೇ. 50 ಮುಗಿಸಿದ್ದೆವು. ಮತ್ತೆ ಆರಂಭ ಮಾಡುತ್ತೇವೆ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಪರಿಹಾರಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.