Site icon Vistara News

Dakshin Bharat Utsav: ಪ್ರವಾಸೋದ್ಯಮ ಉತ್ತೇಜಿಸಲು ಖಾಸಗಿ ವಲಯಕ್ಕೆ 550 ಸ್ಮಾರಕ ದತ್ತು: ಸಚಿವ ಎಚ್‌.ಕೆ. ಪಾಟೀಲ್

Dakshin Bharat Utsav

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ವಲಯ ಉತ್ಸುಕವಾಗಿದ್ದು, ಖಾಸಗಿ ವಲಯದ ಈ ಸ್ವಯಂ ಪ್ರೇರಿತ ಆಸಕ್ತಿಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ (Dakshin Bharat Utsav) 500 ಕೋಟಿ ರೂ.ಗೂ ಅಧಿಕ ಬಂಡವಾಳ ಹರಿದು ಬರಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ನಗರದಲ್ಲಿ ಡಿಸೆಂಬರ್ 14 ರಿಂದ 16 ರವರೆಗೆ ‘ದಕ್ಷಿಣ ಭಾರತ್ ಉತ್ಸವ’ ನಡೆಯುವ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾವೇಶ ಪೂರ್ವ (ಕರ್ಟನ್‌ ರೈಸರ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 550 ಸ್ಮಾರಕಗಳನ್ನು ರಕ್ಷಿಸಲು, ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆಯನ್ನು ರೂಪಿಸಿದೆ. ಇಷ್ಟು ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ ಎಂದು ತಿಳಿಸಿದರು.

ದತ್ತು ನೀಡುವ ಸ್ಮಾರಕಗಳು, ದೇವಾಲಯಗಳು, ಚರ್ಚ್‌ಗಳು, ಮಸೀದಿಗಳು ಮತ್ತು ಇತರ ಪಾರಂಪರಿಕ ಸ್ಥಳಗಳಾಗಿರಬಹುದು, ಅವುಗಳನ್ನು ಪ್ರವಾಸೋದ್ಯಮಕ್ಕೆ ತೆರೆಯಲಾಗುವುದು. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಅವಕಾಶಗಳು ಹೆಚ್ಚು ಸೃಷ್ಟಿಯಾಗುತ್ತವೆ. ಈ ವಿನೂತನ ಕಾರ್ಯಕ್ರಮವನ್ನು ಸೆಪ್ಟೆಂಬರ್ 25 ರಂದು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ | Sub Registrar Office: ಸಬ್‌ ರಿಜಿಸ್ಟ್ರಾರ್‌ ಕಚೇರಿ ಅವಧಿ ವಿಸ್ತರಣೆ; ಸೆ.30ವರೆಗೆ ಮಾತ್ರ ಅನ್ವಯ

ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡುವ ಖಾಸಗಿ ವಲಯದ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ಇದರ ಹಿಂದೆ ಲಾಭದ ಉದ್ದೇಶವಿಲ್ಲ, ಪ್ರವಾಸಿಗರ ಆಕರ್ಷಣೆ ಮತ್ತು ಆ ಮೂಲಕ ಜಗತ್ತಿಗೆ ಕರ್ನಾಟಕವನ್ನು ಪರಿಚಯಿಸುವ ಮಹತ್ವದ ಕಾರ್ಯ ಆಗಲಿದೆ ಎಂದು ಪ್ರತಿಪಾದಿಸಿದರು.

ಪ್ರಸ್ತುತ ರಾಜ್ಯವು ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ನಾಲ್ಕು ಪಾರಂಪರಿಕ ತಾಣಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ. ಯುನೆಸ್ಕೋ ಈ ವರ್ಷ ಗುರುತಿಸಿರುವ ನಾಲ್ಕನೇ ತಾಣವೆಂದರೆ ಹೊಯ್ಸಳರ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ದೇಗುಲಗಳು. ಈ ಹಿಂದೆ ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿತ್ತು ಎಂದ ಸಚಿವರು, ರಾಜ್ಯ ಸರ್ಕಾರದ ʼಶಕ್ತಿʼ ಯೋಜನೆ ಯಶಸ್ಸಿನ ಪರಿಣಾಮ ಪ್ರವಾಸಿ ಕೇಂದ್ರಗಳು ಮತ್ತು ದೇಗುಲಗಳಿಗೆ ಹೆಚ್ಚಿನ ಸಾರ್ವಜನಿಕರು ಭೇಟಿ ನೀಡುವಂತೆ ಆಗಿದೆ ಎಂದು ತಿಳಿಸಿದರು.

ಸವದತ್ತಿ ದೇವಸ್ಥಾನವು ವಾರ್ಷಿಕವಾಗಿ 1.25 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸಿದೆ. ಕರ್ನಾಟಕವು ಸಾಂಸ್ಕೃತಿಕ ಪರಂಪರೆ, ಮನೋಹರ ಪರಿಸರ ಪ್ರೇಕ್ಷಣೀಯ ಸ್ಥಳಗಳು, ಸಾಹಸ ಅನ್ವೇಷಣೆ ಕೇಂದ್ರಗಳು, ಸಮುದ್ರ ಸಾಗರ ಪ್ರವಾಸೋದ್ಯಮ, ತೀರ್ಥಕ್ಷೇತ್ರ ಹೀಗೆ ವಿವಿಧ ಪ್ರವಾಸೋದ್ಯಮ ಮಾರ್ಗಗಳನ್ನು ಹೊಂದಿದ್ದು, ಈ ಅಂಶಗಳು ರಾಜ್ಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.

ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಮಾತನಾಡಿ, ‘ದಕ್ಷಿಣ ಭಾರತ ಉತ್ಸವದ ಪರಿಕಲ್ಪನೆಯನ್ನು ಸ್ವಾಗತಿಸುವುದಾಗಿ ತಿಳಿಸಿ, ಒಟ್ಟಾರೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಕ್ಷಿಣ ಭಾರತದ ರಾಜ್ಯಗಳು ಒಗ್ಗೂಡುವ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ | Power Generation: ರಾಜ್ಯದ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಕುಸಿದಿರುವುದು ಏಕೆ: ಅಧಿಕಾರಿಗಳಿಗೆ ಸಿಎಂ ಪ್ರಶ್ನೆ

“ನಾವು ಒಟ್ಟಿಗೆ ಕೆಲಸ ಮಾಡಿ, ತಡೆರಹಿತ ಏಕೀಕೃತ ಪ್ರವಾಸೋದ್ಯಮ ಮತ್ತು ಪ್ರಯಾಣ ಉದ್ಯಮವನ್ನು ತರೋಣ.” ಪಶ್ಚಿಮ ಘಟ್ಟಗಳು, ರಾಜ್ಯಗಳಲ್ಲಿ ವ್ಯಾಪಿಸಿರುವ ದಕ್ಷಿಣ ಪ್ರಸ್ಥಭೂಮಿ ಮತ್ತು ಅನೇಕ ಪಾರಂಪರಿಕ ತಾಣಗಳು ಪ್ರವಾಸೋದ್ಯಮ ಸ್ನೇಹಿ ಯೋಜನೆಗಳಿಗೆ ಹೇಗೆ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಉಲ್ಲೇಖಿಸಿ ಅವರು ವಿವರಿಸಿದರು.

ಸ್ವಾಗತ ಭಾಷಣ ಮಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಡಿಸೆಂಬರ್ 14 ರಿಂದ 16 ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿರುವ ‘ದಕ್ಷಿಣ ಭಾರತ ಉತ್ಸವ’ವು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಪ್ರವಾಸೋದ್ಯಮದಲ್ಲಿ ಮುಕ್ತ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ದಕ್ಷಿಣ ರಾಜ್ಯಗಳಲ್ಲಿ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಈ ‘ಉತ್ಸವʼ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವೇದಿಕೆಯಾಗಿದೆ, ಹೀಗಾಗಿ ಇದರಿಂದ ರಾಜ್ಯಗಳಿಗೆ ಆದಾಯವನ್ನು ತರುವುದಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲದು ಎಂದರು.

ಈ ಶೃಂಗಸಭೆಗೆ ಆತಿಥ್ಯ ವಹಿಸಲಿರುವ ಕರ್ನಾಟಕವು ಅನೇಕ ಪಾರಂಪರಿಕ ತಾಣಗಳನ್ನು ಹೊಂದಿದ್ದು, ಸ್ಮಾರಕಗಳಿಗೆ ಧಕ್ಕೆಯಾಗದಂತೆ ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಬಹುದು ಎಂದ ಅವರು, ಕರ್ನಾಟಕ ರಾಜ್ಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು, 600 ಭಾರತದ ಪುರಾತತ್ವ ಸಮೀಕ್ಷೆ(ASI) ಸಂರಕ್ಷಿತ ಸ್ಮಾರಕಗಳು ಮತ್ತು 800 ರಾಜ್ಯ ಸಂರಕ್ಷಿತ ಸ್ಮಾರಕಗಳ ವೈಶಿಷ್ಟ್ಯತೆಯನ್ನು ಹೊಂದಿರುವುದು ರಾಜ್ಯದ ಹಿರಿಮೆ ಹೆಚ್ಚಿಸಿದೆ ಎಂದರು.

ಇದನ್ನೂ ಓದಿ | Mysore Dasara 2023: ಬರ ಹಿನ್ನೆಲೆ ಸರಳವಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ

ಎಫ್‌ಕೆಸಿಸಿಐ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷ ಜಿ.ಕೆ.ಶೆಟ್ಟಿ ಅವರು ಮಾತನಾಡಿ, ದಕ್ಷಿಣ ರಾಜ್ಯಗಳಲ್ಲಿ ‘ದಕ್ಷಿಣ ಭಾರತ ಉತ್ಸವವನ್ನು ಸರದಿಯ ಆಧಾರದ ಮೇಲೆ ನಡೆಸಲಾಗುವುದು. ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮವನ್ನು ಸುಧಾರಿಸಲು ಎಫ್‌ಕೆಸಿಸಿಐ ಸಕ್ರಿಯವಾಗಿ ಭಾಗವಹಿಸುತ್ತದೆ. ದಕ್ಷಿಣದ ರಾಜ್ಯಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಮೂಲಕ, ಪ್ರವಾಸಿಗರ ಸಂಚಾರವನ್ನು ಹೆಚ್ಚಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವಿದೇಶಿ ವಿನಿಮಯವನ್ನು ತರುತ್ತದೆ ಎಂದು ವಿವರಿಸಿದರು.

ರಾಜ್ಯದ ಹೊಯ್ಸಳರ ಮೂರು ದೇಗುಲಗಳು ಯೂನೆಸ್ಕೋದ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೋಂಡಿರುವುದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ. ಇದರಿಂದ ರಾಜ್ಯವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ. ಹೀಗಾಗಿ 550 ಸ್ಮಾರಕಗಳನ್ನು ದತ್ತು ನೀಡುವ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಆ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಡಿ ಇರಿಸಿದೆ
| ಎಚ್.ಕೆ. ಪಾಟೀಲ್‌, ಪ್ರವಾಸೋದ್ಯಮ ಸಚಿವರು

Exit mobile version