ಬೆಂಗಳೂರು: ಹೈಕೋರ್ಟ್‌ನ 6 ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ (Death Threats) ಹಾಕಿ, 50 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿರುವುದು ಕಂಡುಬಂದಿದೆ. ಹಣವನ್ನು ಪಾಕಿಸ್ತಾನ ಮೂಲದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ಎಂದು ಹೇಳಿರುವುದರಿಂದ ಕೃತ್ಯದಲ್ಲಿ ಪಾಕ್ ಕೈವಾಡದ ಶಂಕೆ ಮೂಡಿದೆ. ಈ ಸಂಬಂಧ ನಗರದ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 12ರಂದು ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ಕೆ.ಮುರಳೀಧರ್ ಅವರ ಮೊಬೈಲ್‌ಗೆ ಅಪರಿಚಿತನೊಬ್ಬ ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಅಲ್ಲದೇ ಪಾಕಿಸ್ತಾನದ ಅಲೈಡ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕ್ ಖಾತೆಗೆ 50 ಲಕ್ಷ ರೂ.ಗಳನ್ನು ಜಮೆ ಮಾಡುವಂತೆ ಬೇಡಿಕೆ ಇಟ್ಟಿದ್ದಾನೆ.
ದುಬೈ ಗ್ಯಾಂಗ್ ಮೂಲಕ ನನ್ನನ್ನು ಸೇರಿ 6 ಹೈಕೋರ್ಟ್ ನ್ಯಾಯಾಧೀಶರನ್ನು ಕೊಲ್ಲುವುದಾಗಿ ವಾಟ್ಸ್‌ಆ್ಯಪ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಮುರಳೀಧರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್, ಎಚ್.ಟಿ. ನರೇಂದ್ರ ಪ್ರಸಾದ್, ಅಶೋಕ್ ಜಿ. ನಿಜಗಣ್ಣವರ್, ಎಚ್.ಪಿ. ಸಂದೇಶ್, ಕೆ. ನಟರಾಜನ್ ಹಾಗೂ ಬಿ. ವೀರಪ್ಪ ಅವರ ಹೆಸರನ್ನು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | Viral News : 11 ವರ್ಷದ ಬಾಲಕನ ಜೀವ ತೆಗೆದ ಯುಟ್ಯೂಬ್ ವಿಡಿಯೊ
ಹೈಕೋರ್ಟ್ ಪಿಆರ್‌ಒ ಕೆ.ಮುರಳೀಧರ್ ಅವರ ದೂರನ್ನು ಆಧರಿಸಿ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ 25 ಲಕ್ಷ ರೂ. ಕದ್ದು ಲೇಡಿ ಪ್ರೊಫೆಸರ್ ಎಸ್ಕೇಪ್
ಮೈಸೂರು: ವಿದ್ಯಾರ್ಥಿಗಳು ಕಟ್ಟಿದ್ದ ಸುಮಾರು 25 ಲಕ್ಷ ರೂ. ಪರೀಕ್ಷಾ ಶುಲ್ಕದ ಹಣವನ್ನು ಕದ್ದು ಲೇಡಿ ಅಸಿಸ್ಟೆಂಟ್ ಪ್ರೊಫೆಸರ್ ಪರಾರಿಯಾಗಿರುವ ಘಟನೆ ನಗರದ ಪ್ರತಿಷ್ಠಿತ ಎಟಿಎಂಇ ಕಾಲೇಜಿನಲ್ಲಿ ನಡೆದಿದೆ. ಪರೀಕ್ಷೆ ಹೊಸ್ತಿಲಲ್ಲಿ ಪ್ರೊಫೆಸರ್ ನಾಪತ್ತೆಯಾಗಿರುವುದರಿಂದ (Fraud Case) ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.
ನಗರದ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬರೋಬ್ಬರಿ 200 ವಿದ್ಯಾರ್ಥಿಗಳಿಗೆ ವಂಚನೆ ಮಾಡಿರುವುದು ಕಂಡುಬಂದಿದೆ. ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ, ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಸಂಗ್ರಹಣೆ ಮಾಡಿದ್ದರು. ಇದೀಗ ಆ ಪರೀಕ್ಷಾ ಶುಲ್ಕದ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳಿಂದ ವರುಣ ಠಾಣೆಗೆ ದೂರು ನೀಡಲಾಗಿದೆ. ಆರೋಪಿ ಪ್ರೊ.ಹರ್ಷಿತಾ, ಎಟಿಎಂಐ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಕಟ್ಟಿ ವಿದ್ಯಾರ್ಥಿಗಳು ಮೋಸ ಹೋಗಿದ್ದಾರೆ. ನಕಲಿ ರಶೀದಿ ನೀಡಿ ಹರ್ಷಿತಾ ಯಾಮಾರಿಸಿದ್ದಾರೆ. ಮಂಗಳವಾರ ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಹರ್ಷಿತಾಗೂ ನಮಗೂ ಸಂಬಂಧ ಇಲ್ಲ. ಹೊಸದಾಗಿ ಫೀಸ್ ಕಟ್ಟಿ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ತಿಳಿಸಿದೆ.