Site icon Vistara News

Kyasanur Forest Disease: ಕರ್ನಾಟಕದಲ್ಲಿ ಕೆಎಫ್‌ಡಿಗೆ 6 ಬಲಿ! ಕಾಯಿಲೆ ಲಕ್ಷಣಗಳೇನು? ಪಾರಾಗುವುದು ಹೇಗೆ?

6 killed in Kyasanur Forest Disease in Karnataka symptoms of disease and precautions

ಬೆಂಗಳೂರು: ಉತ್ತರ ಕನ್ನಡ, ಶಿವಮೊಗ್ಗ ಸೇರಿ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (Kyasanur Forest Disease) ವಿಪರೀತವಾಗಿ ಕಾಡುತ್ತಿದೆ. ಈಗಾಗಲೇ ಚಿಕ್ಕಮಗಳೂರಲ್ಲಿ 2 ಹಾಗೂ ಶಿವಮೊಗ್ಗದಲ್ಲಿ ಒಬ್ಬರು ಕೆಎಫ್‌ಡಿಗೆ ಬಲಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟು ಆತಂಕ ಸೃಷ್ಟಿಯಾಗಿತ್ತು. ಈಗ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮತ್ತೊಬ್ಬರು ಬಲಿಯಾಗಿದ್ದು, ಕರ್ನಾಟಕದಲ್ಲಿ ಬಲಿಯಾದರವ ಸಂಖ್ಯೆ 6ಕ್ಕೇರಿದೆ. ಇದು ಜನರನ್ನು ಆತಂಕಕ್ಕೊಳಪಡಿಸಿದ್ದು, ರಾಜ್ಯ ಸರ್ಕಾರದಿಂದ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬರುತ್ತಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 47 ಜನರಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿದೆ. ಅದರಲ್ಲೂ ಸಿದ್ದಾಪುರ ತಾಲೂಕಿನಲ್ಲಿ ಮಂಗನ ಕಾಯಿಲೆ ಸೋಂಕು ಪ್ರಕರಣಗಳು ಹೆಚ್ಚಾಗಿವೆ. ಶಿರಸಿಯಲ್ಲಿ ಮಂಗನ ಕಾಯಿಲೆಗೆ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಶಿರಸಿ ತಾಲೂಕಿನಲ್ಲಿ ಇದೇ ಮೊದಲ ಪ್ರಕರಣವಾಗಿದೆ.

ಶಿರಸಿ ತಾಲೂಕಿನ ಹತ್ತರಗಿ ಸಮೀಪದ ನವಿಲಗಾರ ಗ್ರಾಮದ ರಾಮಚಂದ್ರ ಗೌಡ (68) ಸೋಂಕಿಗೆ ಬಲಿಯಾದವರು. ಇವರಿಗೆ ಉಡುಪಿಯ ಮಣಿಪಾಲ್​ ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಹಿಂದೆ ಸಿದ್ದಾಪುರ ತಾಲೂಕಿನ ಭಾಗದಲ್ಲಿ ಇಬ್ಬರು ಮಂಗನ ಕಾಯಿಲೆಗೆ ಬಲಿಯಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಶಿರಸಿ ತಾಲೂಕು ವೈದ್ಯರ ಹಾಗೂ ಸಹಾಯಕರ ತಂಡ ಸ್ಥಳಗಳಿಗೆ ಭೇಟಿ ನೀಡಿ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಮಂಗನ ಕಾಯಿಲೆ ಲಕ್ಷಣಗಳೇನು? ಇದರಿಂದ ಪಾರಾಗುವುದು ಹೇಗೆ?

ಮಂಗನ ಕಾಯಿಲೆ ಎಂದೇ ಕರೆಯಲಾಗುವ ಕ್ಯಾಸನೂರ್‌ ಫಾರೆಸ್ಟ್‌ ಡಿಸೀಜ್‌ ಅಥವಾ ಕೆಎಫ್‌ಡಿ ಪ್ರಸರಣ (Kyasanur Forest Disease) ರಾಜ್ಯದಲ್ಲಿ ಹೆಚ್ಚುತ್ತಿದ್ದು, ಇಬ್ಬರು ಈಗಾಗಲೇ ಇದಕ್ಕೆ ಬಲಿಯಾಗಿದ್ದಾರೆ. ಹಲವಾರು ದಶಕಗಳಿಂದ ಪ್ರತಿ ವರ್ಷ ಈ ಸಮಯದಲ್ಲಿ ಮಲೆನಾಡಿನ ಸೀಮೆಗಳಲ್ಲಿ ಕಾಟ ಕೊಡುತ್ತಿರುವ ಈ ಕಾಯಿಲೆಯ ಬಗೆಗೆ ಒಂದಿಷ್ಟು ವಿವರಗಳು ಇಲ್ಲಿವೆ.

ಶಿವಮೊಗ್ಗ ಜಿಲ್ಲೆಯ ಕ್ಯಾಸನೂರಿನ ಕಾಡಿನಲ್ಲಿ, ಫ್ಲಾವಿವಿರಿಡೆ ಜಾತಿಗೆ ಸೇರಿದ ವೈರಸ್‌ನಿಂದ ಮೃತಪಟ್ಟ ಮಂಗವನ್ನು 1957ರಲ್ಲಿ ಮೊದಲಿಗೆ ಗುರುತಿಸಲಾಗಿತ್ತು. ಆನಂತರದಿಂದ ಪ್ರತಿ ವರ್ಷವೂ ನೂರಾರು ಜನರಿಗೆ ಈ ವೈರಸ್‌ನಿಂದ ಮಂಗನ ಕಾಯಿಲೆ ತಗುಲುತ್ತಿದ್ದು, ಸೋಂಕಿತ ಮಂಗಗಳಿಗೆ ಕಚ್ಚುವ ಉಣ್ಣಿ ಅಥವಾ ಉಣುಗುಗಳು ಮಾನವರಿಗೆ ಕಚ್ಚಿದಾಗ ಈ ವೈರಸ್‌ ಪ್ರಸರಣಗೊಳ್ಳುತ್ತದೆ. ಸಾಮಾನ್ಯವಾಗಿ ನವೆಂಬರ್‌ ನಂತರ ಎಪ್ರಿಲ್‌ವರೆಗಿನ ಅವಧಿಯಲ್ಲಿ ಈ ರೋಗ ಹೆಚ್ಚುತ್ತಿದೆ.

ರೋಗ ಲಕ್ಷಣಗಳೇನು?

ಉಣುಗು ಕಚ್ಚಿದ 3-8 ದಿನಗಳಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಮೊದಲಿಗೆ ತೀವ್ರ ಜ್ವರ, ಚಳಿ ನಡುಕ, ತಲೆ ನೋವು, ವಿಪರೀತ ಆಯಾಸ ಕಾಣುತ್ತದೆ. ನಂತರ ವಾಂತಿ, ಭೇದಿ, ಮೈ-ಕೈ ನೋವು, ಜಠರ ಹಾಗೂ ಕರುಳಿನಲ್ಲಿ ತೊಂದರೆಗಳು, ಮೂಗು- ಒಸಡುಗಳಲ್ಲಿ ರಕ್ತಸ್ರಾವವೂ ಕಾಣಬಹುದು. ಸಾಮಾನ್ಯವಾಗಿ ಎರಡು ವಾರಗಳಲ್ಲಿ ಶೇ. 80ರಷ್ಟು ಸೋಂಕಿತರು ಚೇತರಿಸಿಕೊಳ್ಳುತ್ತಾರೆ. ಒಂದೊಮ್ಮೆ ಮೂರನೇ ವಾರಕ್ಕೂ ರೋಗ ಲಕ್ಷಣಗಳು ಮುಂದುವರಿದು, ಎರಡನೇ ಹಂತ ತಲುಪಿದರೆ ಸಮಸ್ಯೆ ಉಲ್ಭಣಿಸಬಹುದು. ಆಗ ನರಸಂಬಂಧಿ ಸಮಸ್ಯೆಗಳು, ದೃಷ್ಟಿಯ ತೊಂದರೆ, ಮಾನಸಿಕ ಸಮಸ್ಯೆಗಳು, ರಕ್ತಸ್ರಾವ ಮುಂತಾದವು ಕಂಡುಬಂದು, ರೋಗಿ ಚೇತರಿಸಿಕೊಳ್ಳುವುದು ನಿಧಾನವಾಗಬಹುದು. ಶೇ. 3-10ರಷ್ಟು ಪ್ರಕರಣಗಳಲ್ಲಿ ಮಾತ್ರವೇ ಸಾವು ಸಂಭವಿಸುತ್ತಿದೆ.

ಚಿಕಿತ್ಸೆ ಇದೆಯೇ?

ಈ ಕಾಯಿಲೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಿಯ ರೋಗ ಲಕ್ಷಣಗಳನ್ನು ಆಧರಿಸಿ, ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಪೀಡಿತ ಪ್ರದೇಶಗಳಲ್ಲಿ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗಬೇಕು. ಎಲಿಸಾ ಪರೀಕ್ಷೆ ಮತ್ತು ಆರ್‌ಟಿಪಿಸಿಆರ್‌ ಪರೀಕ್ಷೆಗಳ ಮೂಲಕ ಸೋಂಕನ್ನು ದೃಢಪಡಿಸಲಾಗುತ್ತದೆ. ಪೌಷ್ಟಿಕ ಆಹಾರ ಸೇವಿಸಿ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ಜಾಗ್ರತೆ ವಹಿಸಬೇಕು. ಈ ಸಂದರ್ಭದಲ್ಲಿ ವೈದ್ಯರೊಂದಿಗೆ ಸಮಾಲೋಚನೆಯಲ್ಲಿ ಇರಬೇಕಾದ್ದು ಅಗತ್ಯ. ರೋಗ ಒಂದೊಮ್ಮೆ ಎರಡನೇ ಹಂತ ಪ್ರವೇಶಿಸಿ, ರಕ್ತಸ್ರಾವ ಹೆಚ್ಚಾದರೆ, ರಕ್ತಪೂರೈಕೆಯೂ ಅನಿವಾರ್ಯವಾಗಬಹುದು. ಆರೋಗ್ಯದಲ್ಲಿ ಹಲವು ರೀತಿಯಲ್ಲಿ ಏರುಪೇರು ಕಾಣಬಹುದು. ಹಾಗಾಗಿ ರೋಗ ಲಕ್ಷಣಗಳು ಗೋಚರಿಸುತ್ತಿದ್ದಂತೆ ತ್ವರಿತವಾಗಿ ಆಸ್ಪತ್ರೆಗೆ ಧಾವಿಸಬೇಕು.

ಎಲ್ಲೆಲ್ಲಿ ಈ ರೋಗವಿದೆ?

ಪ್ರತಿ ವರ್ಷ ಸಾಮಾನ್ಯವಾಗಿ 400-500 ಪ್ರಕರಣಗಳವರೆಗೂ ಮಂಗನ ಕಾಯಿಲೆ ವರದಿಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಜೊಯಿಡಾ, ದಕ್ಷಿಣ ಕನ್ನಡದ ಪುತ್ತೂರು, ಬೆಳ್ತಂಗಡಿ ಮುಂತಾದೆಡೆ ಈ ರೋಗ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಕೆಲವು ವರ್ಷಗಳಲ್ಲಿ ಪೀಡಿತ ಸ್ಥಳಗಳ ಪಟ್ಟಿಯಲ್ಲೂ ವ್ಯತ್ಯಾಸ ಆಗಬಹುದು.

ತಡೆಯಲು ಸಾಧ್ಯವೇ?

ಕೆಲವೊಂದು ವಿಷಯಗಳ ಬಗ್ಗೆ ನಿಗಾ ವಹಿಸುವುದರಿಂದ ರೋಗ ಪ್ರಸರಣವನ್ನು ಮೊಟಕು ಮಾಡುವುದು ಸಾಧ್ಯವಿದೆ. ಮೊದಲಿಗೆ, ಉಣ್ಣಿಗಳ (ಉಣುಗು) ಕಡಿತಕ್ಕೆ ತುತ್ತಾಗದಂತೆ ಎಚ್ಚರ ವಹಿಸುವುದು ಅಗತ್ಯ. ಅರಣ್ಯಕ್ಕೆ ಹೋಗುವಾಗ ಆದಷ್ಟೂ ಮೈ ಪೂರ ಮುಚ್ಚುಕೊಳ್ಳುವಂತೆ ವಸ್ತ್ರ ಧರಿಸಿ, ಕೈಗೆ ಗ್ಲಾಸ್‌, ಕಾಲಿಗೆ ಬೂಟು ಅಗತ್ಯ. ಜತೆಗೆ, ಕೀಟಾಣುಗಳನ್ನು ಓಡಿಸುವಂಥ ಡಿಎಂಪಿ ತೈಲದಂಥವನ್ನು ಲೇಪಿಸಿಕೊಳ್ಳಬೇಕು. ಅರಣ್ಯದಿಂದ ಹಿಂತಿರುಗಿದ ಮೇಲೆ ವಸ್ತ್ರಗಳನ್ನು ಬಿಸಿ ನೀರಲ್ಲಿ, ಆ್ಯಂಟಿಸೆಪ್ಟಿಕ್‌ ಲಿಕ್ವಿಡ್‌ ಜತೆಗೆ ನೆನೆಸಿ ತೊಳೆಯಬೇಕು. ಮೈಗೆಲ್ಲ ಚೆನ್ನಾಗಿ ಸೋಪು ಹಚ್ಚಿ, ಬಿಸಿ ನೀರಲ್ಲಿ ಸ್ನಾನ ಮಾಡಬೇಕು.

ಇದನ್ನೂ ಓದಿ: Banana Benefits For Pregnant Women: ಗರ್ಭಿಣಿಯರು ಬಾಳೆಹಣ್ಣನ್ನು ತಿನ್ನಲೇಬೇಕು, ಏಕೆಂದರೆ…

ಮನೆಯ ಸುತ್ತಮುತ್ತಲಿನಲ್ಲಿ ಮಂಗ ಸತ್ತಿದ್ದರೆ ಅದನ್ನು ಆರೋಗ್ಯ ಇಲಾಖೆಗೆ ತ್ವರಿತವಾಗಿ ವರದಿ ಮಾಡಬೇಕು. ಸತ್ತ ಮಂಗದ ದೇಹವನ್ನು ಎಂದಿಗೂ ಮುಟ್ಟಬಾರದು. ಮಂಗನ ಕಾಯಿಲೆ ಸೋಂಕು ಇದೆ ಎಂದು ಗೊತ್ತಿರುವಂತಹ ಕಾಡು ಪ್ರದೇಶಗಳಿಗೆ ಹೋಗದಿದ್ದರೆ ಇನ್ನೂ ಒಳ್ಳೆಯದು. ಅಂತಹ ಪ್ರದೇಶಗಳ ಕಾಡಿನಿಂದ ಸೊಪ್ಪನ್ನು ತಂದು ಜಾನುವಾರು ಕೊಟ್ಟಿಗೆಗೆ ಹಾಕಬಾರದು. ಸಾಕು ಪ್ರಾಣಿಗಳಲ್ಲಿ ನೆಲೆಸುವ ಉಣುಗಿನಂಥ ಜೀವಿಗಳನ್ನು ನಿಯಂತ್ರಿಸಬೇಕು. ಈ ರೋಗಾಣು ಮಾನವರಿಂದ ಮಾನವರಿಗೆ ನೇರವಾಗಿ ಪ್ರಸರಣಗೊಂಡ ಉದಾಹರಣೆಗಳಿಲ್ಲ. ಆದರೆ ಒಬ್ಬರಿಗೆ ಕಚ್ಚಿದ ಉಣ್ಣಿಗಳು ಇನ್ನೊಬ್ಬರಿಗೆ ಕಚ್ಚಬಾರದೆಂದಿಲ್ಲ. ಮನೆಯಲ್ಲಿ ಬೆಕ್ಕು-ನಾಯಿಗಳಿದ್ದರೆ ಅವುಗಳ ಮುಖಾಂತರವೂ ಇನ್ನೊಬ್ಬರಿಗೆ ಹರಡಲು ಸಾಧ್ಯವಿದೆ. ಮುನ್ನೆಚ್ಚರಿಕೆ ಮಾತ್ರವೇ ಕಾಪಾಡಬಲ್ಲದು.

Exit mobile version