Site icon Vistara News

Karnataka BJP: ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಕ್ಕೆ 60 ಜನರ ತಂಡ ರಚನೆ: ಪಿ.ರಾಜೀವ್

P Rajeev

ಬೆಂಗಳೂರು: ಬಿಜೆಪಿ ನೂತನ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಮಾಡಲು 60 ಜನರ ತಂಡ ರಚಿಸಲಾಗಿದ್ದು, ಆ ತಂಡವು ಏಕಕಾಲದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ನೂತನ ರಾಜ್ಯ ಪದಾಧಿಕಾರಿಗಳ ಮೊದಲ ಸಭೆಯ ವಿವರ ನೀಡಿದರಲ್ಲದೆ, ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು. ಎರಡು ದಿನಗಳ ಪ್ರವಾಸ ಇದಾಗಿರುತ್ತದೆ. ಈಗಿನ ಅಧ್ಯಕ್ಷರು, ಕಾರ್ಯಕರ್ತರು, ಸಂಸದರು, ಶಾಸಕರು, ಮಾಜಿ ಶಾಸಕರು, ಹಿರಿಯರ ಅಭಿಪ್ರಾಯ ಪಡೆದು ಎರಡು ಮೂರು ದಿನಗಳ ಒಳಗೆ ತನ್ನ ಕಾರ್ಯವನ್ನು ಪೂರೈಸಲಿದೆ ಎಂದು ತಿಳಿಸಿದರು.

ಇದನ್ನೂ ಓದಿ | BY Vijayendra: ದೇಶದ ಅಭಿವೃದ್ಧಿಗಾಗಿ ತಪಸ್ಸಿನಂತೆ ಮೋದೀಜಿ ಕೆಲಸ: ಬಿ.ವೈ.ವಿಜಯೇಂದ್ರ

ಯತ್ನಾಳ್ ಅವರ ಹೇಳಿಕೆ ಕುರಿತು ಚರ್ಚೆ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಪಕ್ಷದ ಇತ್ತೀಚಿನ ಎಲ್ಲ ಬೆಳವಣಿಗೆ ಕುರಿತು ಗಂಭೀರ ಚರ್ಚೆ ಆಗಿದೆ. ಸಭೆಯಲ್ಲಿ ನಡೆದ ಎಲ್ಲ ಚರ್ಚೆಗಳ ಕುರಿತು ಮಾಹಿತಿ ಕೊಡಲು ಸಾಧ್ಯವಿಲ್ಲ. ಆದರೆ, ರಾಜ್ಯದಲ್ಲಿ ಪಕ್ಷದ ಘನತೆಗೆ ಚ್ಯುತಿ ಬರುವಂಥ ಚಟುವಟಿಕೆ, ಹೇಳಿಕೆಗಳನ್ನು ಪಕ್ಷ ಸಹಿಸುವುದಿಲ್ಲ. ಅದರ ಬಗ್ಗೆ ಚರ್ಚೆ ಆಗಿದೆ. ಕೇಂದ್ರದ ನಾಯಕರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ನೂತನ ರಾಜ್ಯ ಪದಾಧಿಕಾರಿಗಳ ಮೊದಲ ಸಭೆ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆವರೆಗೆ ಯಾವೊಬ್ಬ ಪದಾಧಿಕಾರಿಯೂ ವಿಶ್ರಾಂತಿ ಪಡೆಯುವಂತಿಲ್ಲ. ಲೋಕಸಭಾ ಚುನಾವಣೆ ಗೆಲುವಿನೊಂದಿಗೆ ಮನೆಗೆ ವಾಪಸ್ ಬರುವಂತೆ ಅಧ್ಯಕ್ಷರು ತಿಳಿಸಿದ್ದಾರೆ ಎಂದರು. ಅಲ್ಲಿನವರೆಗೆ ನಿರಂತರ ಪ್ರವಾಸ ಮಾಡಿ ಪಕ್ಷ ಸಂಘಟಿಸಲು ಸೂಚಿಸಿದ್ದಾರೆ ಎಂದು ಹೇಳಿದರು.

ಪದಾಧಿಕಾರಿಗಳು ಹಿರಿಯರು, ಬೂತ್ ಕಾರ್ಯಕರ್ತರು, ವರಿಷ್ಠರನ್ನು ಸಮಾನವಾಗಿ ನೋಡುವ ಮನಸ್ಥಿತಿ ಹೊಂದಿರಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ್ದಾರೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ ಮತ್ತು ನಮೋ ಆ್ಯಪ್‍ನಲ್ಲಿ ಪ್ರತಿಯೊಬ್ಬ ಪದಾಧಿಕಾರಿಗೆ ನಿಗದಿತ ಟಾಸ್ಕ್ ಕೊಡಲಾಗಿದೆ. ತಳಮಟ್ಟದಲ್ಲಿ ಸಂಘಟನೆ ಬಲಪಡಿಸುವ ಕುರಿತು ಮಾಹಿತಿ ಕೊಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | BY Vijayendra : ವಿರೋಧಿಗಳನ್ನು ಹಗುರವಾಗಿ ಪರಿಗಣಿಸಬೇಡಿ; ವಿಜಯೇಂದ್ರ ಎಚ್ಚರಿಕೆ ನುಡಿ

ಕೇಂದ್ರ ಸರ್ಕಾಕಾರದ ಎಲ್ಲ ಯೋಜನೆಗಳ ಎಲ್ಲ ಪದಾಧಿಕಾರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರ ಜೊತೆ ಚರ್ಚಿಸಬೇಕು. ಕೇಂದ್ರ ಸರ್ಕಾರದ ಯೋಜನೆಗಳಿಂದ ವಂಚಿತರಾದವರನ್ನು ಯೋಜನೆಯ ವ್ಯಾಪ್ತಿಗೆ ತರುವ ಕಡೆ ಆದ್ಯ ಗಮನ ಹರಿಸಲು ಸೂಚಿಸಿದ್ದಾರೆ ಎಂದು ವಿವರ ನೀಡಿದರು. ಮುಂದಿನ ಲೋಕಸಭಾ ಚುನಾವಣೆಗೆ ಪದಾಧಿಕಾರಿಗಳು ಸಜ್ಜಾಗಿದ್ದಾರೆ ಎಂದು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version